Advertisement

ಅವ್ಯಕ್ತ ಶಕ್ತಿಯೊಂದು ನುಡಿಸಿದಂತಿತ್ತು ಶ್ರೀಗಳ ಕೊನೆಯ ಉಪನ್ಯಾಸ

10:16 AM Jan 02, 2020 | sudhir |

ಉಡುಪಿ: ಶ್ರೀ ಪೇಜಾವರ ವಿಶ್ವೇಶತೀರ್ಥರ ಉಪನ್ಯಾಸಗಳನ್ನು ಆಲಿಸುವುದು ಒಂದು ವಿಶಿಷ್ಟವಾದ ಅನುಭವವನ್ನು ನೀಡುತ್ತಿತ್ತು. ಉಪಕತೆಗಳು, ವ್ಯಾಖ್ಯಾನಗಳು, ಉಪಾಖ್ಯಾನಗಳ ಮೂಲಕ ಪುರಾಣದ ಕತೆಗಳನ್ನು ಇಂದಿಗೆ ಪ್ರಸ್ತುತಗೊಳಿಸಿ ಉಪನ್ಯಾಸ ನೀಡುವುದರಲ್ಲಿ ಶ್ರೀಗಳು ಸಿದ್ಧಹಸ್ತರಾಗಿದ್ದರು.

Advertisement

ಅದರಲ್ಲೂ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗುವುದಕ್ಕೆ ಕೆಲವೇ ದಿನ ಮುನ್ನ ಉಡುಪಿಯ ರಾಜಾಂಗಣದಲ್ಲಿ ಅವರು ನೀಡಿದ್ದ ಉಪನ್ಯಾಸ ಕೇಳುಗರಲ್ಲಿ ವಿದ್ಯುತ್ಸಂಚಾರ ಮೂಡಿಸುವಂತಿತ್ತು.

ಮಹಾಭಾರತ ರಾಜಕಾರಣಿಗಳು, ಸಾಮಾನ್ಯ ಜನರಿಗೆ ಬೇಕಾದ ಸಂದೇಶಗಳನ್ನು ನೀಡಿದೆ. ಮಹಾಭಾರತ ಗ್ರಂಥ ನಮ್ಮೊಳಗೆ ಇರುವ ಭಿನ್ನ ಭಿನ್ನ ಕೆಟ್ಟ ಮತ್ತು ಉತ್ತಮ ವ್ಯಕ್ತಿತ್ವಗಳನ್ನು ನಾನಾ ಪಾತ್ರಗಳ ಮೂಲಕ ಕೊಟ್ಟಿದೆ ಎಂದು ಪೇಜಾವರ ಶ್ರೀಗಳು ತಿಳಿಸಿದ್ದರು.

ಅವರು ಆ ದಿನ ಹೇಳಿದ ಮೂರು ಉಪಕತೆಗಳು ಹೀಗಿವೆ
ಇಂದ್ರದ್ಯುಮ್ನ ರಾಜ ಸ್ವರ್ಗದಲ್ಲಿ ಸುಖವಾಗಿದ್ದ.
ಆತನ ಪುಣ್ಯ ಖರ್ಚಾದ ಬಳಿಕ ಮರಳಿ  ಭೂಮಿಯಲ್ಲಿ ಜನಿಸು ಎಂದು ದೇವತೆಗಳು ಹೇಳಿದರು. ಆತ ಭೂಮಿಗೆ ಬಂದು ಒಂದು ಗೋವಿನ ಬಳಿ ಹೋಗಿ, “ನಾನು ರಾಜಾ ಇಂದ್ರದ್ಯುಮ್ನ. ನನ್ನ ಪರಿಚಯ ಇದೆಯೇ?’ ಎಂದು ಕೇಳಿದ.

ಅದು “ಗೊತ್ತಿಲ್ಲ. ಮುಂದೊಂದು ಹಳೆಯ ಬಕಪಕ್ಷಿ ಇದೆ. ಅದರ ಬಳಿ ಕೇಳು’ ಎಂದಿತು. ಬಕಪಕ್ಷಿಯೂ ತನಗೆ ಗೊತ್ತಿಲ್ಲ ಎಂದಿತಲ್ಲದೆ, ಹಳೆಯ ಸರೋವರವೊಂದನ್ನು ತೋರಿಸಿ ಅಲ್ಲಿರುವ ಆಮೆಯನ್ನು ಕೇಳು ಎಂದಿತು.

Advertisement

ಅದರಂತೆ ಇಂದ್ರದ್ಯುಮ್ನ ಆಮೆಯನ್ನು ಕೇಳಿದ. ಅದು, “ನಿನ್ನ ಪರಿಚಯವಿಲ್ಲದಿರಲು ಸಾಧ್ಯವೆ? ಈ ಸರೋವರವನ್ನು ನಿರ್ಮಿಸಿದವನು ನೀನೇ ಅಲ್ಲವೆ! ಇದರಿಂದ ಎಷ್ಟು ಪ್ರಾಣಿ, ಕೃಷಿ, ಪ್ರಜೆಗಳಿಗೆ ಅನುಕೂಲವಾಗಿದೆ’ ಎಂದು ಕೃತಜ್ಞತೆಯ ಕಣ್ಣೀರು ಹಾಕಿತು.

ಆ ಕೂಡಲೇ ಸ್ವರ್ಗದಿಂದ ವಿಮಾನ ಇಳಿದುಬಂತು. ಅದರಲ್ಲಿದ್ದ ದೇವತೆಗಳು, “ನಮ್ಮ ಲೆಕ್ಕಾಚಾರ ತಪ್ಪಿತು. ಆಮೆ ನಿನ್ನ ಉಪಕಾರವನ್ನು ಸ್ಮರಿಸಿಕೊಂಡಿದೆ. ನಿನ್ನ ಪುಣ್ಯ ಖರ್ಚಾಗಿಲ್ಲ. ಮತ್ತೆ ಸ್ವರ್ಗಕ್ಕೆ ಬಾ’ ಎಂದು ಕರೆದೊಯ್ದರು.

ಇತರರು ನಮ್ಮನ್ನು ಸ್ಮರಿಸಿಕೊಳ್ಳುವಂತಹ ಪುಣ್ಯಕಾರ್ಯಗಳನ್ನು ಭೂಮಿಯಲ್ಲಿ ನಾವಿರುವವರೆಗೆ ನಡೆಸುತ್ತಿರಬೇಕು ಎಂಬ ಸಂದೇಶ ನೀಡಲು ಪೇಜಾವರ ಶ್ರೀಗಳು ಈ ಉಪಕತೆಯನ್ನು ಅಂದು ಹೇಳಿದ್ದರು.

ಇನ್ನೊಂದು ಉಪಕತೆ ಹೀಗಿದೆ:
ಮುನಿ ಅಗಸ್ತ್ಯರ ಪತ್ನಿ ಲೋಪಾಮುದ್ರೆಗೆ ಒಡವೆಗಳು, ಹೊಸ ಉಡುಗೆ ಬೇಕೆಂಬ ಹಂಬಲವಾಯಿತು. ತೊಟ್ಟು ಸಂಭ್ರಮಿಸಬೇಕೆಂಬ ಇಚ್ಛೆಯಾಯಿತು. ಅಗಸ್ತ್ಯರು ರಾಜನ ಬಳಿ ಹೋಗಿ, ನಿಮ್ಮ ಬಜೆಟ್‌ನಲ್ಲಿ ಉಳಿಕೆಯಿದ್ದರೆ ಕೊಡಿ. ಜನರ ಕಲ್ಯಾಣಕ್ಕಾಗಿ ಇರಿಸಿದ ಮೀಸಲು ಹಣವಾದರೆ ಬೇಡ ಎಂದರು. ಆದರೆ ರಾಜನ ಬಜೆಟ್‌ನ ಆಯ-ವ್ಯಯ ಸರಿಯಾಗಿತ್ತು. ಮೂರ್‍ನಾಲ್ಕು ರಾಜರ ಬಳಿ ಹೋದಾಗಲೂ ಇದೇ ಕಥೆ. ಆಗ ಮುನಿಗಳ ಪತ್ನಿ, ವಾತಾಪಿ-ಇಲ್ವಲ ಎಂಬ ಲೋಕಕಂಟಕರು ಅಕ್ರಮ ಸಂಪಾದನೆ, ಹಿಂಸಾಚಾರವನ್ನು ನಡೆಸುತ್ತಿದ್ದಾರೆ. ಅವರನ್ನು ನಿಗ್ರಹಿಸಿ, ಆ ಹಣದಿಂದ ತಂದುಕೊಡಿ ಎಂದರು. ಅಗಸ್ತ್ಯರು ಅಂತೆಯೇ ಮಾಡಿದರು.

ಈಗ ಪತಿ ಭ್ರಷ್ಟಚಾರ ನಡೆಸಲು ಪತ್ನಿಯೇ ಕಾರಣಳಾಗುತ್ತಿದ್ದಾಳೆ. ಅಕ್ರಮ ಸಂಪತ್ತು, ಜನರ ಹಣ ದುರ್ವಿನಿಯೋಗ ನಡೆಸಬಾರದು
ಎಂಬುದಕ್ಕೆ ಶ್ರೀ ಪೇಜಾವರರು ಇದನ್ನು ಉದಾಹರಿಸಿದ್ದರು.

ರಾಜಕಾರಣಿಗಳು ಹೇಗಿರಬೇಕು ಎಂಬುದಕ್ಕೆ ಅಂದು ಶ್ರೀಗಳು ಹೇಳಿದ ಉಪಕತೆಯಿದು:
ಕುರುಕ್ಷೇತ್ರ ಯುದ್ಧವೆಲ್ಲ ಮುಗಿದ ಮೇಲೆ ವಿದುರನ ಸಲಹೆಯಂತೆ ಧೃತರಾಷ್ಟ್ರ ವನವಾಸಕ್ಕೆ ತೆರಳಲು ನಿರ್ಧರಿಸಿದ. ಹೋಗುವಾಗ ಮಕ್ಕಳಾದ ದುರ್ಯೋಧನಾದಿಗಳ ಪಾಪ ಪರಿಹಾರಾರ್ಥ ಅವರ ಹೆಸರಿನಲ್ಲಿ ದಾನಧರ್ಮ ಮಾಡಲು ನಿರ್ಧರಿಸಿದ. ಧರ್ಮಜ ಹಣ ಕೊಡಲು ಒಪ್ಪಿದರೂ ಭೀಮಸೇನ ವಿರೋಧಿಸಿದ. ದುರ್ಯೋಧನ ಕೋಟ್ಯಂತರ ಮಂದಿಯ ಹತ್ಯೆಗೆ ಕಾರಣನಾದವ. ಅವನ ಕಲ್ಯಾಣಕ್ಕಾಗಿ ಸರಕಾರದ ಹಣ ಮಂಜೂರು ಮಾಡಲು ಒಪ್ಪುವುದಿಲ್ಲ ಎಂದ. ಪ್ರಜೆಗಳ ಹಣವನ್ನು ದುಷ್ಟರು ಮಾಡಿದ ಪಾಪಗಳ ಪರಿಹಾರಾರ್ಥ ವಿನಿಯೋಗಿಸುವುದು ಸಲ್ಲದು ಎಂಬುದು ಭೀಮನ ನೀತಿ
ಯಾಗಿತ್ತು.

ಇಂದಿನ ರಾಜಕಾರಣಿಗಳು ಸರಕಾರದ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಮಹಾಭಾರತ ಸಾರುತ್ತಿದೆ ಎಂದು ಶ್ರೀ ಪೇಜಾವರರು ಹೀಗೆ ಪ್ರತಿಪಾದಿಸಿದ್ದರು.

ಆಗಲೂ ಶ್ರೀಗಳಿಗೆ ತೀವ್ರ ಜ್ವರವಿತ್ತು, ಯಾವುದೋ ಅವ್ಯಕ್ತ ಶಕ್ತಿ ಈ ಮಾತುಗಳನ್ನು ನುಡಿಸಿತು ಎನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next