Advertisement

ಅಧಿಕಾರಿಗಳ ಉದ್ಧಟತನ ಸಹಿಸಲಾಗದು

12:08 PM Jun 23, 2018 | |

ಚಿತ್ರದುರ್ಗ: ಅಧಿಕಾರಿಗಳು ಸಂಸದರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಶಿಷ್ಟಾಚಾರ ತಿಳಿದಿದೆಯಾ, ನಿನ್ನ ಆಟ ನನ್ನ ಹತ್ತಿರ ನಡೆಯೋದಿಲ್ಲ ಎಂದು ಭೂಸೇನಾ ಇಲಾಖೆ ಎಇಇ ಶಶಿಕುಮಾರ್‌ ಅವರನ್ನು ಸಂಸದ ಬಿ.ಎನ್‌. ಚಂದ್ರಪ್ಪ ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಜಿಪಂ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆಯಿತು.

Advertisement

ಕೇಂದ್ರದಿಂದ ಮಂಜೂರಾದ 50 ಲಕ್ಷ ರೂ. ಅನುದಾನದ ಯೋಜನೆ ರೂಪಿಸಲು ಉದ್ಧಟತನದಿಂದ  ರ್ತಿಸುತ್ತಿರುವುದು ಎಷ್ಟು ಸರಿ, ಎಂಪಿ ಹೇಳಿದ ತಕ್ಷಣ ಮಾಡಬೇಕಾ ಅಂತೀಯಾ, ಎಂಪಿ ಅಂದ್ರೆ ಏನಂದ್ಕೋಂಡಿದೀಯಾ, ನಿನ್ನ ಡೆಸಿಗ್ನೇಷನ್‌ ಏನು ಎಂದು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಮಹತ್ವದ ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಂಸದರು ಜಿಪಂ ಸಿಇಒಗೆ ಸೂಚಿಸಿದರು. ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ
ಮಾಡುವಾಗ ಕನಿಷ್ಠ ಸೌಜನ್ಯಕ್ಕಾದರೂ ಸಂಸದರನ್ನು ಸಂಪರ್ಕಿಸಿ ಯೋಜನೆಯ ಪ್ರಗತಿಯ ವಿವರ ನೀಡುವುದಿಲ್ಲ. ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ನಿರ್ಮಿಸಿದ ಟ್ಯಾಂಕ್‌ ನಲ್ಲಿ ನೀರು ತುಂಬಿಸುತ್ತಿಲ್ಲ ಎಂದು ಸಂಸದರು ಮತ್ತು ಶಾಸಕರು ಆರೋಪಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 154 ಶುದ್ಧ ಕುಡಿಯುವ ನೀರು ಘಟಕ ಸ್ಥಗಿತಗೊಂಡಿವೆ. ಸ್ಥಗಿತಗೊಂಡಿರುವ ಆರ್‌ಒಗಳನ್ನು ಕೂಡಲೇ ದುರಸ್ತಿ ಮಾಡುವಂತೆ ಸಂಸದರು ಸೂಚನೆ ನೀಡಿದರು.

ಕೇಂದ್ರ ಸರ್ಕಾರದ ದೀನದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯಡಿ ಅರ್ಹ ಬಿಪಿಎಲ್‌
ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಸಂಸದ ಬಿ.ಎನ್‌. ಚಂದ್ರಪ್ಪ ತಿಳಿಸಿದರು. ಯಾವುದೇ ಬಿಪಿಎಲ್‌ ಕುಟುಂಬ ಈ ಯೋಜನೆಯಿಂದ ವಂಚಿತವಾಗಬಾರದು. ಈ ಕುಟುಂಬಗಳು ವಾಸಿಸುವ ಗ್ರಾಮಗಳಲ್ಲಿ ವಿದ್ಯುತ್‌
ಕಂಬಗಳು, ವಿದ್ಯುತ್‌ ಪರಿವರ್ತಕ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಕಲ್ಪಿಸಬೇಕು ಎಂದರು.

Advertisement

ಜಿಲ್ಲೆಯಲ್ಲಿ ಈ ಯೋಜನೆಯಡಿ 30,824 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇದುವರೆಗೆ ಸುಮಾರು 11,128 ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಉಳಿದ 19,696 ಕುಟುಂಬಗಳಿಗೆ 2019ರ ಮಾರ್ಚ್‌ ಅಂತ್ಯದೊಳಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಸ್ವಚ್ಚ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 1,23,646 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದ್ದು, ಇದರಲ್ಲಿ 96,702 ಸಾಧನೆ ಮಾಡಲಾಗಿದೆ ಎಂದು ಉಪಕಾರ್ಯದರ್ಶಿ ತಿಳಿಸಿದರು.

ಸಾಮೂಹಿಕ ಶೌಚಾಲಯ ನಿರ್ಮಾಣಕ್ಕೆ 90 ಗುರಿ ನೀಡಲಾಗಿದ್ದರೂ ಪ್ರಗತಿಯಾಗಿಲ್ಲ. ತಳಕು ಮತ್ತು
ರಾಮಗಿರಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ 30 ಲಕ್ಷ ರೂ. ಬಂದಿದ್ದರೂ ನಿವೇಶನ ನೀಡದಿರುವುದರಿಂದ ಕಾಮಗಾರಿ ಆರಂಭವಾಗಿಲ್ಲ. ಘನ, ದ್ರವ, ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು ಪ್ರತಿ ತಾಲೂಕಿಗೆ 5 ಗುರಿ ಇದೆ ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 2017-18ರಲ್ಲಿ 20,650 ಗುರಿ ನಿಗದಿಯಾಗಿತ್ತು. ಇದರಲ್ಲಿ 15,284 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಇನ್ನೂ 5000 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾಗಿದ್ದು ಪ್ರತಿ ಯುನಿಟ್‌ಗೆ 1.75 ಲಕ್ಷ ರೂ.ಗಳನ್ನು ಸಹಾಯಧನವಾಗಿ ನೀಡಲಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಒಟ್ಟು 13 ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ 30 ಕೋಟಿ ರೂ. ಅನುದಾನ ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಟಿ. ರಘುಮೂರ್ತಿ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ, ಜಿಪಂ ಸಿಇಒ ಪಿ.ಎನ್‌. ರವೀಂದ್ರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next