ಗೆಳತಿಯೊಬ್ಬಳು ಇದ್ದಕ್ಕಿದ್ದಂತೆ ನೀರಿನಲ್ಲೇ ಕುಸಿದುಬಿದ್ದಳು. ಓಡಿ ಹೋಗಿ ಅವಳನ್ನು ನೀರಿನಿಂದ ಹೊರಗಡೆ ತಂದೆವು. ಅವಳಿಗೆ ಮಾತಿಲ್ಲ, ಪ್ರಜ್ಞೆಯೂ ಇರಲಿಲ್ಲ. ನಮ್ಮೆಲ್ಲರ ಎದೆಬಡಿತ ಜೋರಾಗಿ, ಕೈ ಕಾಲುಗಳು ನಡುಗತೊಡಗಿದವು…
ಬಿ.ಎಡ್‌ನ ಶೈಕ್ಷಣಿಕ ಪ್ರವಾಸದ ದಿನಗಳವು. ಮೈಸೂರು ಅರಮನೆ, ನಂದಿಬೆಟ್ಟ, ಕೆಆರ್‌ಎಸ್ ನೋಡಿಕೊಂಡು ಬಂಡೀಪುರ, ಊಟಿ, ಕೊಡೈಕೆನಾಲ…, ತಿರುವನಂತಪುರಂ, ಕೊಚ್ಚಿ, ರಾಮೇಶ್ವರ… ಹೀಗೆ ಕನ್ಯಾಕುಮಾರಿಯವರೆಗೂ ಹೊರಡುವ ಯೋಜನೆಯೊಂದಿಗೆ ಟೂರ್ ಹೊರಟಿ¨ªೆವು.
ಊಟಿ, ಕೊಡೈಕೆನಾಲ… ಮಾರ್ಗ ಮಧ್ಯದ ದಟ್ಟ ಕಾಡು, ಆಕಾಶಕ್ಕೆ ಮುತ್ತಿಕ್ಕುವಂತೆ ಕಾಣುವ ಬಾನೆತ್ತರದ ನೀಲಿಗಿರಿ ಮರಗಳು, ಹಸಿರಿನ ಹೊದಿಕೆ ತೊಟ್ಟ ನಿಸರ್ಗದ ನೋಟ… ಇವೆಲ್ಲವನ್ನು ನೋಡಿ, ಅಯ್ಯೋ ದೇವರೇಕೆ ನಮಗೆ ಎರಡೇ ಕಣ್ಣು ಕೊಟ್ಟಿದ್ದಾನೆ ಅನ್ನಿಸಿತು. ಕೊಡೈಕೆನಾಲ… ಘಾಟ್ ಒಂದರಲ್ಲಿ ನಿಂತು ಬೆಟ್ಟದ ಕೆಳಗೆ ಇಣುಕಿದಾಗ ದಟ್ಟವಾದ ಮೋಡಗಳು ನಮ್ಮ ಪಾದಗಳ ಕೆಳಗೆ ಓಡುತ್ತಿರುವುದನ್ನು ಕಂಡು ಜೀವನ ಪಾವನವಾಯಿತು.
ಮುಂದೆ ನಮ್ಮ ಪ್ರಯಾಣ ಮಧುರೈ ಮಾರ್ಗವಾಗಿ ರಾಮೇಶ್ವರಂ ತಲುಪಿತು. ಸಿಹಿಗಳಿಗೆಯಲ್ಲಿ ನನ್ನದೊಂದು ಪಾಲಿರಲಿ ಎಂಬಂತೆ ಕಹಿ ಘಟನೆಯೊಂದು ನಡೆದಿದ್ದೇ ಆಗ. ಅದನ್ನೀಗ ನೆನಪಿಸಿಕೊಂಡರೆ ಭಯದ ಜೊತೆಗೆ ನಗು ಕೂಡ ಬರುತ್ತದೆ. ಆವತ್ತು ರಾಮೇಶ್ವರಂಗೆ ಬಂದಿಳಿದು ದೇಗುಲದ ಪಕ್ಕದಲ್ಲಿರುವ ಬೀಚ್‌ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದೆವು. ನೀರನ್ನು ಕಂಡು ನಮಗಿಂತ ನೀರೆಯರೇ ಜಾಸ್ತಿ ಥ್ರಿಲ್ ಆಗಿದ್ದರು. ತುಂಬಾ ಜೋಶ್‌ನಲ್ಲಿ ನೀರಿಗಿಳಿದು ಆಟವಾಡುತ್ತಿದ್ದರು. ಆಗ ನಮ್ಮ ಗೆಳತಿಯೊಬ್ಬಳು ಇದ್ದಕ್ಕಿದ್ದಂತೆ ನೀರಿನಲ್ಲೇ ಕುಸಿದುಬಿದ್ದಳು. ಓಡಿ ಹೋಗಿ ಅವಳನ್ನು ನೀರಿನಿಂದ ಹೊರಗಡೆ ತಂದೆವು. ಅವಳಿಗೆ ಮಾತಿಲ್ಲ, ಪ್ರಜ್ಞೆಯೂ ಇರಲಿಲ್ಲ. ನಮ್ಮೆಲ್ಲರ ಎದೆಬಡಿತ ಜೋರಾಗಿ, ಕೈ ಕಾಲುಗಳು ನಡುಗತೊಡಗಿದವು.
ಆಸ್ಪತ್ರೆಗೆ ಹೋಗಬೇಕೆಂದರೆ ವಿಳಾಸ ಗೊತ್ತಿಲ್ಲ. ಕೇಳಬೇಕೆಂದರೆ ನಮಗೆ ತಮಿಳು ಬರುವುದಿಲ್ಲ. ಅಲ್ಲಿದ್ದವರಿಗೆ ಇಂಗ್ಲಿಷ್ ಅರ್ಥವಾಗುವಂತೆ ಕಾಣುತ್ತಿರಲಿಲ್ಲ. ಪುಣ್ಯಕ್ಕೆ ಆಗ ನಮ್ಮ ಪರಿಸ್ಥಿತಿ ಅರಿತ ಪುಣ್ಯಾತ್ಮನೊಬ್ಬ ಆಟೋ ಸಿಗುವ ಸ್ಥಳದ ದಾರಿ ತೋರಿಸಿ, ಮೂರು ಚಕ್ರದ ಸೈಕಲ… ಬಂಡಿಯಲ್ಲಿ ಅವಳನ್ನು ಹಾಕಿಕೊಂಡು ಆಟೋವರೆಗೂ ಹೋಗಿ ಎಂದು ಅವನ ಭಾಷೆಯಲ್ಲಿ ಹೇಳಿದ್ದು ನಮಗೆ ಅರ್ಥವಾಯ್ತು. ಆಟೋದಲ್ಲಿ ಆಸ್ಪತ್ರೆ ತಲುಪುವವರೆಗೂ ಒಬ್ಬೊಬ್ಬರು ಒಂದೊಂದು ರೀತಿ ಮಾತಾಡಿ ದಿಗಿಲು ಹೆಚ್ಚಿಸಿದರು. ಅವಳೊಂದಿಗೆ ಹೊರಟವರಲ್ಲಿ ನಾನು ಮತ್ತು ಬಸ್ಸು ಬಿಟ್ಟರೆ ಉಳಿದ ನಾಲ್ವರೂ ಹುಡುಗಿಯರು ಎಂದ ಮೇಲೆ ಕೇಳಬೇಕೇ? ಕುಸುಕುಸು ಅಳಲು ಶುರುಮಾಡಿದರು.
ಎದೆಬಡಿತ ಜೋರಾಗಿ, ಯಾಕಾದರೂ ಪ್ರವಾಸಕ್ಕೆ ಬಂದೆವಪ್ಪಾ ಅನ್ನಿಸತೊಡಗಿತ್ತು. ಆಸ್ಪತ್ರೆಗೆ ಹೋದಾಗ ಅಲ್ಲಿ ಮತ್ತೂಂದು ಪ್ರಹಸನ. ಏನಾಯ್ತು? ಹೇಗಾಯ್ತು? ಪೊಲೀಸ್‌ಗೆ ತಿಳಿಸಿದ್ದೀರಾ? ಇತ್ಯಾದಿಗಳನ್ನು ತಿಳಿಯದ ಭಾಷೆಯಲ್ಲಿ ಕೇಳಿ ದಿಕ್ಕು ತೋಚದಂತೆ ಮಾಡಿದರು. ಕೊನೆಗೆ ಹೇಗೋ ಡಾಕ್ಟರ್‌ಗೆ ಸಮಜಾಯಿಷಿ ನೀಡಿ, ಅವರನ್ನು ಚಿಕಿತ್ಸೆಗೆ ಒಪ್ಪಿಸಿದೆವು. ಅವರು ಇಂಜೆಕ್ಷನ್ ಕೊಟ್ಟು ಅರ್ಧ ಗಂಟೆ ಕಾಯುವಂತೆ ಹೇಳಿದರು. ನಂತರ ಹೇಗೋ ಅವಳಿಗೆ ಪ್ರಜ್ಞೆ ಬಂತು. ಅಪ್ಪ… ದೇವರು ದೊಡ್ಡವನು ಅಂತ ನಿಟ್ಟುಸಿರು ಬಿಟ್ಟೆವು. ಊರು, ಭಾಷೆ ಗೊತ್ತಿಲ್ಲದ ಊರಿಗೆ ಪ್ರವಾಸಕ್ಕೆ ಹೋಗಿ ಪೇಚಿಗೆ ಬಿದ್ದ ಆ ಘಟನೆ ನೆನಪಿನಂಗಳದಲ್ಲಿ ಅಚ್ಚಳಿಯದೇ ಉಳಿದಿದೆ.
– ಭೀಮರಾವ ದೇಸಾಯಿ