ಕೊರಟಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವಧಿಯಲ್ಲಿ ಹಣದ ಕೊರತೆಯಿಂದ ಎಲ್ಲಾ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದರು. ಪುರವರ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಸಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿ ಪತ್ರ ವಿತರಣೆ, ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಧುಗಿರಿ ತಾಲೂಕಿನಲ್ಲಿ 14 ಸಾವಿರ ಮನೆಗಳ ನಿರ್ಮಾಣದ ಯೋಜನೆ ನನೆಗುದಿಗೆ ಬಿದ್ದಿದ್ದು, ಆದಷ್ಟೂ ಬೇಗ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಎತ್ತಿನ ಹೊಳೆ ಯೋಜನೆಯಡಿ ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುವುದು. ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.
ಪುರವರ ಹೋಬಳಿಯ ವಿವಿಧ ಕಾಮಗಾರಿಗಳಿಗೆ ಸುಮಾರು 60 ಕೋಟಿ ರೂ. ಅನುದಾನ ನೀಡಲಾಗಿದೆ. ಗ್ರಾಮಾಂತರ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳಿಗೆ ಸಮಾನಾಗಿ ಪೈಪೋಟಿ ನೀಡಬೇಕು. ಎಸ್‌ಸಿ ಮತ್ತು ಎಸ್ಟಿ ಸಮುದಾಯ ಮೀಸಲಾಗಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು. ಮೃತ ಯೋಧ ಈರಣ್ಣ ನಾಯಕ ಅವರ ಸ್ಮಾರಕ ನಿರ್ಮಾಣಕ್ಕೆ ಈಗಾಗಲೆ 2 ಲಕ್ಷ ರೂ. ನೀಡಲಾಗಿದ್ದು, ಅಗತ್ಯವಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಲಾಗುವುದು ಎಂದರು.
ಕಂದಾಯ ಇಲಾಖೆಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮನೆಗಳ ನಿರ್ಮಾಣ, ಸರ್ಕಾರಿ ಕಾಮಗಾರಿಗಳಿಗೆ ಅನೂಕೂಲವಾಗುವಂತೆ ಮರಳು ಪೂರೈಸಲು ಅವಕಾಶ ಮಾತ್ರ ನೀಡಬೇಕು. ಆದರೆ ಹೋಬಳಿಯಲ್ಲಿ ಎಲ್ಲಾದರೂ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಮಧ್ಯರಾತ್ರಿ ಬೆಂಗಳೂರಿಗೆ ಮರಳು ರವಾನೆ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಎಂ.ನಂದೀಶ್‌ಗೆ ಸೂಚಿಸಿದರು.
ಜಿಪಂ ಸದಸ್ಯ ಕೊಂಡವಾಡಿ ತಿಮ್ಮಯ್ಯ ಮಾತನಾಡಿ, ಹೋಬಳಿ ಕೇಂದ್ರವಾಗಿರುವ ಪುರವರ ಗ್ರಾಮದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಪಾಲಿಟೆಕ್ನಿಟ್ ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಮಾಡಿದರು. ಪುರವರದಿಂದ ಐ.ಡಿ.ಹಳ್ಳಿ ರಸ್ತೆ ಅಭಿವೃದ್ಧಿಯಾಗುತ್ತಿದೆ. ಸ್ಥಳೀಯರ ಸಮಸ್ಯೆಗಳನ್ನು ಅಧಿಕಾರಿಗಳು ಜಾತ್ಯತೀತವಾಗಿ ಬಗೆಹರಿಸಬೇಕೆಂದು ಜಿಪಂ ಸದಸ್ಯ ಕೆಂಚಮಾರಯ್ಯ ಮನವಿ ಮಾಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ 180 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ, 30 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳ ಅಶ್ವತ್ಥನಾರಾಯಣ್, ತಾಪಂ ಅಧ್ಯಕ್ಷೆ ಇಂದಿರಾ ದೇವಾನಾಯ್ಕ, ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸದಸ್ಯ ಗೋಪಾಲಯ್ಯ, ತಹಶೀಲ್ದಾರ್ ನಂದೀಶ್, ತಾಪಂ ಇಒ ದೊಡ್ಡಸಿದ್ದಯ್ಯ, ಸಿಡಿಪಿಒ ಸಿ.ಆರ್.ಸ್ವಾಮಿ, ಬಿಇಒ ರಂಗಪ್ಪ, ಲೋಕೋಪಯೋಗಿ ಇಲಾಖೆಯ ಇಎಎ ಹೊನ್ನೇಶಪ್ಪ, ಇಂಜಿನಿಯರ್ ಡಿ.ಎಸ್.ರಮೇಶ್ ಇತರರಿದ್ದರು.