ಕಾಸರಗೋಡು: ಕಾಸರ ಗೋಡು ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಅವಕಾಶವಿದ್ದು, ಅವುಗಳಲ್ಲೊಂದು ಕೋಟನ್‌ಚೇರಿ ಹಿಲ್ ಒಂದು. ಚಾರಣಿಗರ ಸ್ವರ್ಗ ಎಂದೇ ಕರೆಸಿಕೊಂಡಿರುವ ರಾಣಿಪುರಂ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶವಿದೆ. ಆದರೆ ನಿರೀಕ್ಷೆಯಂತೆ ರಾಣಿಪುರಂ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಪ್ರತೀ ವರ್ಷ ಈ ಪ್ರವಾಸಿ ಕೇಂದ್ರದ ಅಭಿವೃದ್ಧಿಯ ಬಗ್ಗೆ ಕೇಳಿಬರುತ್ತಿದೆ. ಆದರೆ ಅಭಿವೃದ್ಧಿ ಮಾಡಬೇಕೆಂಬ ಇಚ್ಛಾಶಕ್ತಿ ತೋರದಿರುವುದರಿಂದ ಇಲ್ಲಿ ಮೂಲ ಭೂತ ಸೌಕರ್ಯಗಳನ್ನೂ ಕಲ್ಪಿಸಲು ಸಾಧ್ಯವಾಗಿಲ್ಲ. ಇನ್ನೊಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯತೆ ಇರುವ ಗುಡ್ಡಗಾಡು ಪ್ರದೇಶ ವೀರಮಲೆ. ಇಲ್ಲೂ ಈ ವರೆಗೂ ಅಭಿವೃದ್ಧಿ ಸಾಧ್ಯವಾಗಿಲ್ಲ.
ಹೀಗಿರುವಂತೆ ಕೋಟನ್‌ಚೇರಿ ಹಿಲ್ ಪ್ರದೇಶವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮಾತು ಕೇಳಿ ಬರುತ್ತಿದೆ. ಮಲೆನಾಡು ಪ್ರದೇಶದಲ್ಲಿರುವ ಈ ಕೇಂದ್ರದ ಅಭಿವೃದ್ಧಿ ಸಾಧ್ಯತೆಯ ಬಗ್ಗೆ ಅಧ್ಯಯನ ಮಾಡಲು ತಜ್ಞರ ತಂಡ ಭೇಟಿ ನೀಡಿ ವೀಕ್ಷಿಸಿತ್ತು.
ತೃಕ್ಕರಿಪುರ ವಿಧಾನಸಭಾ ಕ್ಷೇತ್ರದ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಪ್ರವಾಸಿ ಕೇಂದ್ರವನ್ನು ಅಭಿವೃದ್ಧಿ ಪಡಿಸುವ ಕುರಿತಾಗಿ ಪ್ರಾಥಮಿಕ ಅಧ್ಯಯನ ನಡೆಸಲಾಗುತ್ತಿದೆ. ಶಾಸಕರಾದ ಎಂ. ರಾಜಗೋಪಾಲನ್ ಅವರ ನೇತೃತ್ವದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಅದರಲ್ಲೊಂದು ಕೋಟನ್‌ಚೇರಿ ಹಿಲ್ ಪ್ರದೇಶ. ತಂಡದಲ್ಲಿ ಪ್ರವಾಸೋದ್ಯಮ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಕೆ.ರಾಧಾಕೃಷ್ಣನ್, ಜಿಲ್ಲಾ ಪ್ರವಾಸೋದ್ಯಮ ಪ್ರಮೋಶನ್ ಕೌನ್ಸಿಲ್ ಕಾರ್ಯದರ್ಶಿ ಆರ್.ಬಿಜು, ಟಿ.ಶಮ್ನಾ ಮೊದಲಾದವರಿದ್ದರು. ಮಲೆನಾಡು ಪ್ರದೇಶದ ಗುಡ್ಡಗಾಡು ಪ್ರದೇಶವನ್ನು ಕೇಂದ್ರೀಕರಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹೆಚ್ಚಿನ ಗಮನ ಹರಿಸಲಾಗಿದೆ. ಇವುಗಳಲ್ಲೊಂದು ಕೋಟನ್‌ಚೇರಿ ಹಿಲ್ ಪ್ರದೇಶ. ಕೋಟನ್‌ಚೇರಿ ಹಿಲ್ ಪ್ರದೇಶದ ಸಮೀಪದ ತಯೆÂàನಿ ಕುಂಬನ್, ಪನಿಯಾರ್‌ಮನಿ ಮೊದಲಾದ ಹಿಲ್ ಪ್ರದೇಶಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಸಾಧ್ಯತೆಯ ಬಗ್ಗೆ ಪರಿಶೀಲಿಸಿದರು. ಈ ಗುಡ್ಡಗಾಡು ಪ್ರದೇಶವನ್ನು ಸಾಹಸಿಗಳ, ಚಾರಣಿಗರ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಅಗತ್ಯದ ಯೋಜನೆಗಳನ್ನು ತಯಾರಿಸಲಾಗುವುದೆಂದು ಶಾಸಕ ಎಂ.ರಾಜಗೋಪಾಲನ್ ಹೇಳಿದ್ದಾರೆ.
ರಾಜಪುರಂ ಕೊನ್ನಕ್ಕಾಡ್‌ನಲ್ಲಿರುವ ಕೋಟನ್‌ಚೇರಿ ಗುಡ್ಡಗಾಡು ಪ್ರದೇಶಕ್ಕೆ ಕಾಂಞಂಗಾಡ್‌ನಿಂದ ಸುಮಾರು 30 ಕಿ.ಮೀ. ದೂರವಿದೆ. ಬ್ರಹ್ಮಗಿರಿಯಲ್ಲಿ ಹರಿದು ಬರುವ ಕಾವೇರಿ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ಹೋಲುವ ಕೋಟನ್‌ಚೇರಿ ಹಿಲ್ ಪ್ರದೇಶದ ಅಭಿವೃದ್ಧಿಗೆ ಉತ್ತಮ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಇಚ್ಛಾಶಕ್ತಿ ತೋರಬೇಕಾಗಿದೆ.
ಚಾರಣಿಗರ ಸಾಹಸಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಅಗತ್ಯದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಮಕ್ಕಳಿಗೂ ಅಲ್ಲಿ ಅವಕಾಶ ಕಲ್ಪಿಸುವ ರೀತಿಯಲ್ಲಿ ಅಭಿವೃದ್ಧಿ ಸಾಧ್ಯವಾದರೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಕೇಂದ್ರಕ್ಕೆ ಬರುವ ಸಾಧ್ಯತೆಯಿದೆ. ಈ ಪ್ರವಾಸಿ ಕೇಂದ್ರ ಅಭಿವೃದ್ಧಿ ಸಾಧ್ಯವಾದರೆ ಆರ್ಥಿಕ ಪರಿಸ್ಥಿತಿಯ ಉತ್ತಮಗೊಳ್ಳಲಿದೆ.
– ಪ್ರದೀಪ್ ಬೇಕಲ್