Advertisement

ಕಿಸಾನ್‌ ಸಮ್ಮಾನ ಯೋಜನೆ ಗ್ರಾಪಂಗೆ ಹೊರೆ

02:45 PM Jun 29, 2019 | Team Udayavani |

ಅಂಕೋಲಾ: ಗ್ರಾಮ ಪಂಚಾಯತಗಳ ಶೇ. 90ರಷ್ಟು ಕೆಲಸ-ಕಾರ್ಯಗಳು ಅಂತರ್ಜಾಲದ ಮೂಲಕವೇ ಆಗಬೇಕಿದ್ದು ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲವಿಲ್ಲದೇ ಕೆಲಸಗಳನ್ನು ನಿರ್ವಹಿಸಲು ಕಷ್ಟಸಾಧ್ಯವಿರುವಾಗ ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯ ಅರ್ಜಿಗಳನ್ನು ಸಂಗ್ರಹಿಸಿ ತಂತ್ರಾಂಶದಲ್ಲಿ ಅಳವಡಿಸಲು ಗ್ರಾಪಂಗೆ ಜವಾಬ್ದಾರಿ ನೀಡಿರುವುದರಿಂದ ಸಾರ್ವಜನಿಕರ ಇನ್ನಿತರ ಕೆಲಸಗಳನ್ನು ಮಾಡಲಾಗದೇ ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್‌ ಇಲಾಖಾ ನೌಕರರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ ಟಿ.ಸಿ ಹೇಳಿದರು.

Advertisement

ತಾಲೂಕು ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಜಿಲ್ಲಾ ಮತ್ತು ತಾಲೂಕಿನ 29ಕ್ಕಿಂತ ಹೆಚ್ಚಿನ ಇಲಾಖೆಗಳ ಜೊತೆಗೆ ಕರ್ತವ್ಯ ನಿರ್ವಹಿಸುವ ಗ್ರಾಪಂ ಯೋಜನೆಗಳ ಕೆಲಸದ ಒತ್ತಡಗಳಿರುವಾಗ ವಿದ್ಯುತ್‌ ಮತ್ತು ಅಂತರ್ಜಾಲದ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿದೆ. ಸಾರ್ವಜನಿಕರ ಕೆಲಸಗಳನ್ನು ನಿರ್ವಹಿಸುವುದರ ಜೊತೆಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯೋಜನೆಗೆ ಗ್ರಾಪಂ ಸಿಬ್ಬಂದಿಗಳನ್ನೇ ಗುರಿಯಾಗಿಸಿರುವುದು ಸರಿಯಲ್ಲ ಎಂದರು.

ಗ್ರಾ.ಪಂ.ದಲ್ಲಿ ಸಾಮಾನ್ಯ ಸಭೆ, ವಾರ್ಡ್‌ಸಭೆ, ಗ್ರಾಮಸಭೆ, ಜಮಾಬಂದಿ, ಸಾಮಾಜಿಕ ಲೆಕ್ಕಪರಿಶೋಧನೆ ಹೀಗೆ 40-50 ಸಭೆಗಳನ್ನು ವರ್ಷದಲ್ಲಿ ನಿರ್ವಹಿಸಿ ಉಳಿದ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಯೋಜನೆಯಲ್ಲಿ ಸ್ವೀಕೃತವಾದ ಅರ್ಜಿಗಳನ್ನು ದಾಖಲಿಸುವ ಕೆಲಸ ನಿರ್ವಹಿಸುತ್ತಿದ್ದೇವೆ. ಆದರೂ ಬೇರೆಬೇರೆ ಇಲಾಖೆಗಳ ಕೆಲಸಗಳನ್ನು ತಂದು ಗ್ರಾಪಂಗಳ ಮೇಲೆ ಒತ್ತಡ ತಂದು ಗ್ರಾಪಂ ಸಿಬ್ಬಂದಿಯನ್ನು ಮನೆ-ಮನೆಗೆ ಕಳುಹಿಸಿ ಅರ್ಜಿ ಸಂಗ್ರಹಿಸಬೇಕೆಂದು ಹೊಸ ಆದೇಶ ಹೊರಡಿಸಿರುವುದು ಖೇದಕರ. ಸಂಬಂಧಪಟ್ಟ ಇಲಾಖೆ ಯಾವುದಾದರೂ ಸಿಬ್ಬಂದಿ ಒದಗಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದರು.

ಆರ್‌ಡಿಪಿಆರ್‌ ಸಂಘದ ಗೌರವಾಧ್ಯಕ್ಷ ನೀಲಕಂಠ ನಾಯಕ, ಉಪಾಧ್ಯಕ್ಷೆ ಹಶ್ಮತ ಖಾನ್‌, ಕಾರ್ಯದರ್ಶಿ ನಾಗೇಂದ್ರ ನಾಯ್ಕ, ಖಜಾಂಚಿ ಎಂ.ಯು. ಪಟೇಲ್, ಪಿಡಿಓಗಳಾದ ಲೀಲಾ ಆಗೇರ, ಸಹನಾ ನಾಯಕ, ವಿಠuಲ ನಾಯ್ಕ, ಶಾಂತಲಾ ನಾಯಕ, ಮಹಾಂತೇಶ, ರವಿಂದ್ರಬಾಬು, ನಾಗರತ್ನಾ ಗೌಡ, ಶಾಂತಲಾ ನಾಯ್ಕ, ಲಕ್ಷ್ಮೀ ಗೌಡ, ಅಮಿತಾ ನಾಯ್ಕ ಇದ್ದರು.

ಮಾನಸಿಕ ಒತ್ತಡ: ಸಂಪೂರ್ಣ ಜವಾಬ್ದಾರಿಯುತವಾಗಿ ಗ್ರಾ.ಪಂ ಕೆಲಸಗಳನ್ನು ನಿರ್ವಹಿಸುವಾಗ ವಿದ್ಯುತ್‌ ಮತ್ತು ಅಂತರ್ಜಾಲದ ವ್ಯವಸ್ಥೆಯಲ್ಲಿ ವ್ಯತ್ಯಯವುಂಟಾದಾಗ ಸಾರ್ವಜನಿಕರ ಬೇಸರಕ್ಕೆ ಕಾರಣವಾದ ಘಟನೆಗಳು ನಡೆದಿವೆ. ಇಲಾಖೆಯ ಕರ್ತವ್ಯದ ಅವಧಿಯನ್ನು ಹೊರತುಪಡಿಸಿ ರಾತ್ರಿಯವರೆಗೂ ಕರ್ತವ್ಯ ನಿರ್ವಹಿಸಿ ಎಂದರೆ ಮಹಿಳಾ ಪಿಡಿಒಗಳು ಹೇಗೆ ಕರ್ತವ್ಯ ನಿರ್ವಹಿಸಬೇಕು? ಈ ಮೊದಲು ಸಹ ಕೆಲಸದ ಒತ್ತಡದಿಂದ ಪಿಡಿಓಗಳ ಆತ್ಮಹತ್ಯೆಯಂತಹ ಪ್ರಕರಣಗಳು ನಡೆದಿವೆ. ಬೇರೆ-ಬೇರೆ ಇಲಾಖೆಗಳು ನಿರ್ವಹಿಸುವ ಕೆಲಸವನ್ನು ಪಂಚಾಯತದ ಮೇಲೆ ಹೇರಿ ಪಂಚಾಯತ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡುವುದು ಸಮಂಜಸವಲ್ಲ ಎಂದು ಪಿಡಿಒ ಗಿರೀಶ ನಾಯಕ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next