Advertisement

ಮನೆಗಳಿಗೆ ತಿರುಗಿ ಹಾಡು ಹೇಳುವ ಕಿನ್ನರಿ ಜೋಗಿಗಳು 

06:30 AM Oct 06, 2018 | |

ಕೋಟ: ತಲೆಗೆ ರುಮಾಲು ಸುತ್ತಿ,ಬಣ್ಣದ ನಿಲುವಂಗಿ ತೊಟ್ಟು, ಕೊರಳಿಗೆ ಮಣಿ ಸರ ಧರಿಸಿ, ಹಣೆಗೆ ವಿಭೂತಿ-ಹೆಗಲಿಗೊಂದು ಜೋಳಿಗೆ, ಕೈಯಲ್ಲಿ ಕೋಲು ಕಿನ್ನರಿ ಹಿಡಿದು ಹಾಡುಗಳನ್ನ ಹಾಡುತ್ತ  ಮನೆಗೆ ಭೇಟಿಕೊಡುವ ಕಿನ್ನರಿ ಜೋಗಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವರ ಈ ಆಚರಣೆಯ ಹಿಂದೆ ಒಂದಷ್ಟು ವಿಶೇಷತೆ ಇದ್ದು, ಕರಾವಳಿಗೂ ಇವರಿಗೂ ಅವಿನಾಭಾವ ನಂಟಿದೆ.ಕಿನ್ನರಿ ಬಾರಿಸುವುದರಿಂದ ಕಿನ್ನರಿ ಜೋಗಿ ಕಿನ್ನರಿ ಜೋಗಿಗಳಲ್ಲಿ  ಹೆಚ್ಚಿನವರು ಮಲೆನಾಡು, ಬಯಲುಸೀಮೆಯವರು. ಕಿನ್ನರಿ ಬಾರಿಸುವುದರಿಂದ ಇವರಿಗೆ ಈ ಹೆಸರು ಬಂತು ಎನ್ನುವ ಐತಿಹ್ಯವಿದೆ. 

Advertisement

ಇವರ ಕೈಯಲ್ಲಿರುವ ಸೋರೆ ಬುರುಡೆಯಿಂದ ಮಾಡಿದ ಸಂಗೀತವಿದ್ದು ಇದನ್ನು ಬಿದಿರಿನ ಕೋಲು, ಚೆಕ್ಕೆ, ಜೇನುಮೇಣ, ತಂತಿ ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದರ ತಂತಿಯನ್ನು ಹೆಬ್ಬರಳಿಗೆ ಸಿಕ್ಕಿಸಿಕೊಂಡ ಗಗ್ಗರದಿಂದ ಮೀಟಿ, ಶ್ರುತಿಗೆ ಸರಿಹೊಂದುವಂತೆ ಹಾಡು ಹೇಳುತ್ತಾರೆ. 

ಹಿಂದೆ ಇವರು ವರ್ಷ 
ಪೂರ್ತಿ ಊರೂರು ತಿರುಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದರು. ಆದರೆ ಇದೀಗ ವರ್ಷದಲ್ಲಿ ಒಂದೆರಡು ತಿಂಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತಾರೆ. ಮಿಕ್ಕುಳಿದ ದಿನದಲ್ಲಿ ಊರಿನಲ್ಲಿ ಬೇರೆ-ಬೇರೆ ಕೆಲಸ ನಿರ್ವಹಿಸುತ್ತಾರೆ.

ಮಹಾಭಾರತದ ಸನ್ನಿವೇಶಗಳ ವರ್ಣನೆ
ಪಾಂಡವರ ವಂಶಸ್ಥರು ಎಂದು ಕರೆದು ಕೊಳ್ಳುವ ಇವರು ಮಹಾಭಾರತದ  ವನವಾಸ, ಜೂಜಾಟ, ವಸ್ತ್ರಾಪಹರಣ ಸನ್ನಿವೇಶಗಳನ್ನು ಹಾಡಿನ ರೂಪದಲ್ಲಿ ಕಟ್ಟಿಕೊಡುತ್ತಾರೆ. ಇವರಲ್ಲಿ  ಕೆಲವರು ಮಹಾಭಾರತದ ಹತ್ತು- ಹದಿಮೂರು ಪರ್ವ ಗಳನ್ನು ಬಾಯಿಪಾಠ ಮಾಡಿ ಹಾಡುವ ಗಟ್ಟಿಗರಿದ್ದಾರೆ.

ಕಟ್ಟುಕಟ್ಟಲೆ ಸೇವೆ
ವರ್ಷಕ್ಕೊಮ್ಮೆ ಬೇರೆ-ಬೇರೆ ಊರಿಗೆ ತೆರಳಿ ಹಾಡು ಹಾಡಿ ಹಣ, ಧವಸ ಧಾನ್ಯಗಳನ್ನು ಸಂಗ್ರಹಿಸಿ ಕುಲದೇವ ಭೆ„ರವ ಸ್ವಾಮಿ ಮತ್ತು ಗುರು ಪೀಠಕ್ಕೆ ಕಾಣಿಕೆ ಸಲ್ಲಿಸಿ ಊರಿಗೆ ತೆರಳಬೇಕು ಎನ್ನುವುದು ಇವರಲ್ಲಿ ತಲೆತಲಾಂತರದಿಂದ ಬಂದ ಸಂಪ್ರದಾಯವಾಗಿದ್ದು ಇದನ್ನು ಪಾಲಿಸದಿದ್ದರೆ ದೇವರ ಕೋಪಕ್ಕೆ ತುತ್ತಾಗಬೇಕು ಎನ್ನುವ ಭಯವಿದೆ. ಮಕ್ಕಳು ವಿದ್ಯಾವಂತರಾಗಿರುವುದರಿಂದ ಕೆಲವರು ಆರ್ಥಿಕವಾಗಿಯೂ ಸದೃಢರಾಗಿದ್ದಾರೆ. ಆದರೆ ಧಾರ್ಮಿಕ ನಂಬಿಕೆ ಗಟ್ಟಿಯಾಗಿರುವುದರಿಂದ ಮನೆಯಲ್ಲೊಬ್ಬರು ಅಥವಾ ಕುಟುಂಬದಲ್ಲೊಬ್ಬರು  ವರ್ಷದಲ್ಲಿ ಒಂದು ತಿಂಗಳು ಊರೂರು ತಿರುಗಾಟ ನಡೆಸುತ್ತಾರೆ. 

Advertisement

ಕರಾವಳಿಯ ಜತೆ ವಿಶೇಷ ನಂಟು
ಕಿನ್ನರಿ ಜೋಗಿಗಳಿಗೆ ಕರಾವಳಿಯ ವಿಶೇಷ ನಂಟಿದೆ.  ಇವರ  ಗುರು ಪೀಠವಿರುವುದು ಕರಾವಳಿಯಲ್ಲಿ ಹಾಗೂ  ಕೃಷ್ಣ ಜನ್ಮಾಷ್ಠಮಿಯಿಂದ  ನವರಾತ್ರಿ ಕೊನೆಯ ತನಕ  ಮಂಗಳೂರಿನಿಂದ ಭಟ್ಕಳ ತನಕ ಇವರು ತಿರುಗಾಟ ನಡೆಸುತ್ತಾರೆ. ಕರಾವಳಿಗರ ಆತಿಥ್ಯ ಇವರಿಗೆ ಅಚ್ಚುಮೆಚ್ಚು.  ಹೀಗಾಗಿ ಇವರ  ಬಹುತೇಕ ತಿರುಗಾಟ ಕರಾವಳಿಗೆ ಸೀಮಿತಗೊಂಡಿದೆ.

ಕುಲದೇವರಿಗೆ ಕಾಣಿಕೆ
ನಾನು ಸುಮಾರು 40ವರ್ಷದಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ವರ್ಷದಲ್ಲಿ ಒಂದು ಬಾರಿ ನಾವು  ಇದನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು. ಹಿಂದೆ ನಮ್ಮೂರಿನಲ್ಲಿ ಸುಮಾರು 500ಮಂದಿ ಈ ಆಚರಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇದೀಗ 50 ಮಂದಿ ಕಾಣಸಿಗುತ್ತಾರೆ. ಹಾಡು ಹೇಳಿ ಮನೆಯವರು ಕೊಟ್ಟ ಹಣವನ್ನು ಸ್ವೀಕರಿಸಿ ಒಳ್ಳೆದಾಗಲಿ ಎಂದು ಹರಸಿ ಕುಲದೇವರಿಗೆ ಕಾಣಿಕೆ ಸಲ್ಲಿಸುತ್ತೇವೆ.
– ಸಿದ್ದಪ್ಪ  ದಾವಣಗೆರೆ, 
ಕಿನ್ನರಿ ಜೋಗಿ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next