Advertisement

ಗೋ ಹತ್ಯೆ ನಿಷಿದ್ಧ: ಕೇಂದ್ರ ಸರ್ಕಾರ ಪುನರ್‌ ಪರಿಶೀಲಿಸಲಿ

01:00 PM May 30, 2017 | |

ಮೈಸೂರು: ಹತ್ಯೆಗಾಗಿ ಗೋವು ಮಾರಾಟ ಮತ್ತು ಖರೀದಿ ನಿಷೇಧಿಸಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸಲಿ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪಆಗ್ರಹಿಸಿದರು.

Advertisement

ಸೋಮವಾರ ನಗರ ಪ್ರದಕ್ಷಿಣೆ ನಡೆಸಿ ನಗರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಜನರ ಭಾವನೆಗಳ ಜತೆಗೆ ಚೆಲ್ಲಾಟ ಆಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಭಾವನಾತ್ಮಕ ವಿಷಯವನ್ನು ಕೆದಕಿ ಸಂವಿಧಾನಬದ್ಧ ಆಹಾರದ ಹಕ್ಕನ್ನು ಕಸಿಯುವ ಮೂಲಕ ಪ್ರಜಾತಂತ್ರ ವಿರೋಧಿಯಾಗಿ ವರ್ತಿಸುತ್ತಿದೆ. 1964 ರ ಗೋಹತ್ಯೆ ನಿಷಿದ್ಧ ಕಾಯ್ದೆಯಲ್ಲೇ ವಯಸ್ಸಾದ ಮತ್ತು ಕೆಲಸಕ್ಕೆ ಬಾರದ ಗೋವನ್ನು ಮಾರಲು ಅವಕಾಶವಿದೆ. ಆದರೆ ಬಿಜೆಪಿ ಏಕೆ ಇದನ್ನು ಪದೇ ಪದೆ ಪ್ರಸ್ತಾಪಿಸುತ್ತಿದೆ ಎಂದು ಪ್ರಶ್ನಿಸಿದರು.

ಇದು ರೈತರ ಬದುಕಿಗೆ ಸಂಬಂಧಿಸಿದ ವಿಷಯ. ಬಿಜೆಪಿಯ ಮುಖಂಡರು ಬಹಳಷ್ಟು ಮಂದಿ ಹೊಲ ಉತ್ತಿಲ್ಲ, ಸಗಣಿ ಬಳಿದಿಲ್ಲ, ಕಳೆಯನ್ನೂ ಕಿತ್ತಿಲ್ಲ, ಎಮ್ಮೆ, ಕರು, ಹಸುವನ್ನು ತೊಳೆದಿಲ್ಲ. ಇಂತವರು ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಚರ್ಮೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಬೆಲ್ಟ್, ಶೂ ಸೇರಿದಂತೆ ಅನೇಕ ಕೈಗಾರಿಕೆಗಳು ಹಸುವಿನ ಚರ್ಮವನ್ನು ಅವಲಂಬಿಸಿವೆ. ಈ ಉದ್ಯಮಗಳಿಗೆ ಹೊಡೆತ ಬೀಳಲಿದೆ ಎಂದರು.

Advertisement

ಪ್ರಾಣಿ ಹತ್ಯೆ ನಿಷೇಧಿಸಬೇಕು ಎಂದು ಬುದ್ಧ ಹೇಳಿದ ಮೇಲೆ ಜನರು ಆತನ ತತ್ವಕ್ಕೆ ಆಕರ್ಷಿತರಾದರು. ಬುದ್ಧನ ಕಡೆಗೆ ಸಮುದಾಯ ಆಕರ್ಷಿತ ರಾಗದಂತೆ ತಡೆಯಲು ಮನುವಾದಿಗಳು ಗೋ ಹತ್ಯೆಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ವಿಷಯ ಮುಂದೆ ತಂದರು.

ಬಳಿಕ ಜನಸಂಘ ಮತ್ತು ಆರ್‌ಎಸ್‌ಎಸ್‌ ಈ ವಿಷಯ ಇಟ್ಟುಕೊಂಡು ಚಳವಳಿ ಮಾಡಿ ಜನ ಬೆಂಬಲ ಗಳಿಸಿದರು. ಅದನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಕರೆ ಕೊಟ್ಟಾಗ, ಮಹಾತ್ಮ ಗಾಂಧಿ ಹತ್ಯೆ ಆಯಿತು. ಅಂದಿನಿಂದ ಇಂದಿನವರೆಗೆ ಗೋಹತ್ಯೆ ನಿಷೇಧವನ್ನು ಧಾರ್ಮಿಕವಾಗಿ ಮತ್ತು ಭಾವನಾತ್ಮಕವಾಗಿ ಜನರಲ್ಲಿ ತುಂಬಿ ರಾಜಕೀಯವಾಗಿ ಆಕರ್ಷಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ದಲಿತರ ಮನೆಯಲ್ಲಿ ಊಟ ಮಾಡುತ್ತೇವೆಂದು ಬಿಜೆಪಿಯವರು ದೇಶವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ? ಐಯ್ಯಂಗಾರ್‌, ಕಾಶ್ಮೀರಿ ಬ್ರಾಹ್ಮಣರ ಮನೆಗೆ ಊಟಕ್ಕೆ ಹೋದರೆ ಅವರ ಹೆಸರು ಹೇಳುವುದಿಲ್ಲ. ಪಂಡಿತರ ಮನೆಗೆ ಹೋಗಿದ್ದೆವು ಎನ್ನುತ್ತಾರೆ. ಆದರೆ, ದಲಿತರ ಮನೆಗೆ ಹೋಗಿ ಊಟ ಮಾಡಿ ದಲಿತರ ಊಟ ಎಂದು ಹೇಳಲಾಗುತ್ತಿದೆ.
-ಡಾ.ಎಚ್‌.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next