Advertisement

ಹೇಳಿದಂತೆ ಕೇಳುವ ಕೆಚಪ್‌ ಪ್ಯಾಕೆಟ್‌

02:05 PM Mar 07, 2018 | Harsha Rao |

ನೀವು ಸಂಜೆ ಶಾಲೆಯಿಂದ ಮನೆಗೆ ಬರುವಷ್ಟರಲ್ಲಿ ಅಮ್ಮ ಗೋಬಿಮಂಚೂರಿ ಮಾಡಿಟ್ಟಿರುತ್ತಾಳೆ. ಜೊತೆಗೆ ಪುಟ್ಟ ಪುಟ್ಟ ಕೆಚಪ್‌ ಪ್ಯಾಕೆಟ್‌ಗಳೂ ಇರುತ್ತವೆ. ಆ ಕೆಚಪ್‌ ಪ್ಯಾಕೆಟ್‌ಗಳನ್ನು ಬಳಸಿಕೊಂಡೇ ನೀವು ಮ್ಯಾಜಿಕ್‌ ಮಾಡಬಹುದು, ಗೊತ್ತಾ? ಆ ಪ್ಯಾಕೆಟ್‌ಗಳ ಚಲನೆಯನ್ನು ನಿಯಂತ್ರಿಸುವ ಯಕ್ಷಿಣಿ ವಿದ್ಯೆ ಗೊತ್ತು ಅಂತ ಅಮ್ಮನನ್ನು ಬೆಚ್ಚಿ ಬೀಳಿಸಬಹುದು ಹೇಗೆ ಗೊತ್ತಾ?

Advertisement

ಬೇಕಾಗುವ ವಸ್ತುಗಳು: ಪಾರದರ್ಶಕ ಬಣ್ಣದ ಪ್ಲಾಸ್ಟಿಕ್‌ ಬಾಟಲಿ (ತೆಳು ಪ್ಲಾಸ್ಟಿಕ್‌ ಬಾಟಲಿಯಾದರೆ ಉತ್ತಮ), ಕೆಚಪ್‌ ಪ್ಯಾಕೆಟ್‌ಗಳು, ನೀರು.
ಪ್ರದರ್ಶನ: ಮುಚ್ಚಳದವರೆಗೂ ನೀರು ತುಂಬಿಸಿರುವ ಪ್ಲಾಸ್ಟಿಕ್‌ ಬಾಟಲಿಯ ಒಳಗೆ ಜಾದೂಗಾರ ಒಂದು ಕೆಚಪ್‌ ಪ್ಯಾಕೆಟ್‌ ಹಾಕಿರುತ್ತಾನೆ. ನಂತರ ಬಲಗೈಯಲ್ಲಿ ಬಾಟಲಿಯನ್ನು ಹಿಡಿದು, ಎಡಗೈಯನ್ನು ಆಡಿಸುತ್ತಾನೆ. ಆತನ ಕೈ ಮೇಲೆ ಹೋದಂತೆಲ್ಲಾ, ಬಾಟಲಿಯೊಳಗಿನ ಕೆಚಪ್‌ ಮೇಲಕ್ಕೆ ಚಲಿಸುತ್ತದೆ. ಆತನ ಕೈ ಕೆಳಗೆ ಬರುತ್ತಿದ್ದಂತೆ, ಕೆಚಪ್‌ ಪ್ಯಾಕೆಟ್‌ ಕೂಡ ಕೆಳಕ್ಕೆ ಬರುತ್ತದೆ.

ತಯಾರಿ: ಜಾದೂವಿನ ರಹಸ್ಯ ಅಡಗಿರುವುದು ನೀವು ಆರಿಸಿಕೊಳ್ಳುವ ಕೆಚಪ್‌ ಪ್ಯಾಕೆಟ್‌ನಲ್ಲಿ. ಪ್ರದರ್ಶನಕ್ಕೂ ಮೊದಲು ಹತ್ತಾರು ಕೆಚಪ್‌ ಪ್ಯಾಕೆಟ್‌ಗಳನ್ನು ಇಟ್ಟುಕೊಂಡು ಒಂದು ಸಣ್ಣ ಟೆಸ್ಟ್‌ ಮಾಡಿ. ಅದೇನೆಂದರೆ, ಕೆಚಪ್‌ ಪ್ಯಾಕೆಟ್‌ ನೀರಿನಲ್ಲಿ ತೇಲುತ್ತದೆಯೋ, ಮುಳುಗುತ್ತದೆಯೋ (ತೇಲುವುದು ಮತ್ತು ಮುಳುಗುವುದಕ್ಕೆ ಪ್ಯಾಕೆಟ್‌ನೊಳಗಿನ ಒತ್ತಡವೇ ಕಾರಣ) ಎಂದು ಪರೀಕ್ಷಿಸಿ. ಈ ಜಾದೂ ಮಾಡಲು ತೇಲುವ ಪ್ಯಾಕೆಟ್‌ಗಳನ್ನು ಮಾತ್ರ ಆರಿಸಿಕೊಳ್ಳಿ (ಉಪ್ಪು ನೀರು ಬಳಸುವುದಾದರೆ ತೇಲುವ, ಮುಳುಗುವ ಎರಡೂ ಪ್ಯಾಕೆಟ್‌ಗಳನ್ನು ಬಳಸಬಹುದು) ತೇಲುವ ಪ್ಯಾಕೆಟ್‌ಅನ್ನು ಆರಿಸಿಕೊಂಡ ಮೇಲೆ, ಅದನ್ನು ನಿಧಾನವಾಗಿ ಬಾಟಲಿಯೊಳಗೆ ಸೇರಿಸಿ. ಹಾಗೆ ಒಳಕ್ಕೆ ಸೇರಿಸುವಾಗ ಪ್ಯಾಕೆಟ್‌ ಒಡೆಯದಂತೆ ಎಚ್ಚರ ವಹಿಸಿ. ನಂತರ ಬಾಟಲಿಯ ಮುಚ್ಚಳದವರೆಗೆ ನೀರು ತುಂಬಿಸಿ. ಪ್ರೇಕ್ಷಕರಿಗೆ ಅನುಮಾನ ಬರದಂತೆ ಬಲಗೈಯಲ್ಲಿ ಬಾಟಲಿಯನ್ನು ನಿಧಾನಕ್ಕೆ ಒತ್ತಿ. ಒಳಗಿರುವ ಕೆಚಪ್‌ ಪ್ಯಾಕೆಟ್‌ ಕೆಳಕ್ಕೆ ಚಲಿಸುತ್ತದೆ. ಆಗ ನಿಮ್ಮ ಎಡಗೈ ಚಲನೆಯೂ ಕೆಳಮುಖವಾಗಿರಲಿ. ನಂತರ ನಿಧಾನಕ್ಕೆ ಎಡಗೈಯನ್ನು ಮೇಲೆತ್ತುತ್ತಾ, ಬಲಗೈಯಲ್ಲಿ ಒತ್ತಿದ ಬಾಟಲಿಯನ್ನು ಬಿಡಿ. ಆಗ ತನ್ನಿಂದ ತಾನೇ ಕೆಚಪ್‌ ಪ್ಯಾಕೆಟ್‌ ಮೇಲ್ಮುಖ ತೇಲುತ್ತದೆ. ನೋಡುಗರ ಗಮನ ನಿಮ್ಮ ಎಡಗೈ ಮೇಲಿರುವಂತೆ ನೋಡಿಕೊಳ್ಳಿ. ಬಾಟಲಿಯನ್ನು ಒತ್ತುವುದು, ಸಡಿಲಿಸುವುದು ಯಾರಿಗೂ ಗೊತ್ತಾಗಬಾರದು.  ಪ್ರದರ್ಶನಕ್ಕೂ ಮುನ್ನ ಪ್ರಯೋಗ ಮಾಡಿ ನೋಡಿ.

– ವಿನ್ಸೆಂಟ್‌ ಲೋಬೋ

Advertisement

Udayavani is now on Telegram. Click here to join our channel and stay updated with the latest news.

Next