ಭೋಪಾಲ್: ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿಸಿದ ʻದ ಕೇರಳ ಸ್ಟೋರಿʼ ಸಿನೆಮಾ ತೀವ್ರ ವಿರೋಧದ ನಡುವೆಯೂ ಮೇ.5 ರಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಬಳಿಕವೂ ಈ ಚಿತ್ರದ ಕುರಿತಾದ ಪರ-ವಿರೋಧ ಚರ್ಚೆಗಳು ತಣ್ಣಗಾಗಿಲ್ಲ.
ಇತ್ತೀಚೆಗಷ್ಟೇ ಕರ್ನಾಟಕದ ಬಳ್ಳಾರಿಯಲ್ಲಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಕೋಮುವಾದದ ರಾಜಕಾರಣ ನಡೆಸುತ್ತಿದೆ ಎಂದು ಟೀಕಾಪ್ರಹಾರ ನಡೆಸುವ ವೇಳೆ ಇದೇ ʻದ ಕೇರಳ ಸ್ಟೋರಿʼ ಸಿನೆಮಾವನ್ನೂ ಉಲ್ಲೇಖಿಸಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.
ಪ್ರಧಾನಿ ಮೋದಿ ತಮ್ಮ ಪ್ರಚಾರ ಸಭೆಯಲ್ಲಿ ಈ ಸಿನೆಮಾ ಕುರಿತು ಹೇಳಿಕೊಂಡ ಬೆನ್ನಲ್ಲೇ ಮಧ್ಯ ಪ್ರದೇಶ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಶನಿವಾರದಿಂದ ಮಧ್ಯ ಪ್ರದೇಶದಾದ್ಯಂತ ʻದ ಕೇರಳ ಸ್ಟೋರಿʼ ಚಿತ್ರವು ತೆರಿಗೆ ರಹಿತವಾಗಿ ಪ್ರದರ್ಶನಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾಹಿತಿ ಹೊರಹಾಕಿದ್ದಾರೆ.
ʻನಾವು ಮಧ್ಯಪ್ರದೇಶದಾದ್ಯಂತ ಮತಾಂತರದ ವಿರುದ್ಧದ ಕಾನೂನನ್ನು ಈಗಾಗಲೇ ಜಾರಿಗೊಳಿಸಿದ್ಧೇವೆ. ʻದ ಕೇರಳ ಸ್ಟೋರಿʼ ಸಿನೆಮಾವು ಒಂದು ಉತ್ತಮ ಸಂದೇಶವನ್ನು ನೀಡುವ ಚಿತ್ರವಾಗಿರುವುದರಿಂದ ಎಲ್ಲರೂ ಈ ಚಿತ್ರವನ್ನು ವೀಕ್ಷಿಸಬೇಕಾಗಿದೆ. ಹೆತ್ತವರು, ಮಕ್ಕಳು ಎಲ್ಲರೂ ಲವ್ ಜಿಹಾದ್‌ನ ಕರಾಳ ಮುಖವಾಡವನ್ನು ನೋಡಬೇಕಾಗಿದೆ. ಹೀಗಾಗಿ ಈ ಸಿನೆಮಾವನ್ನು ನಾವು ಮಧ್ಯ ಪ್ರದೇಶದಾದ್ಯಂತ ಟ್ಯಾಕ್ಸ್ ರಹಿತ ಮಾಡಿದ್ದೇವೆʼ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಇದನ್ನೂ ಓದಿ:
‘ದಿ ಕೇರಳ ಸ್ಟೋರಿʼ 1st Day ಕಲೆಕ್ಷನ್: ಮೊದಲ ದಿನವೇ ಕಾಶ್ಮೀರ್ ಫೈಲ್ಸ್ ಮೀರಿಸಿದ ಚಿತ್ರ