Advertisement

ಕೃಷ್ಣ ಶೆಟ್ಟಿಗಾರರ ಕಸೆಸೀರೆ

10:09 AM Jan 12, 2020 | mahesh |

ಯಕ್ಷಗಾನ ಕರಾವಳಿ ಜನರ ಬದುಕಿನ ಭಾಗ. ಅದರಲ್ಲಿನ ವೇಷ -ಭೂಷಣಗಳ ವಿಚಾರದಲ್ಲಿ ಬಡಗು ತಿಟ್ಟಿನಲ್ಲಿ ಬಹಳಷ್ಟು ಭಿನ್ನತೆಯನ್ನು ಕಾಣಬಹುದು. ಅದರಲ್ಲೂ ಬಡಗುತಿಟ್ಟಿನ ಯಕ್ಷಗಾನ ವಸ್ತ್ರಾಲಂಕಾರದಲ್ಲಿ ಕಸೆಸೀರೆ ಬಹುಮುಖ್ಯವಾದುದು. ಕೆಂಪು, ಹಳದಿ ಮಿಶ್ರಿತ ಚೌಕುಳಿ ಸೀರೆ.

Advertisement

ಗುಂಡ್ಮಿ ಸಾಸ್ತಾನದ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿ ಶೀನ ಶೆಟ್ಟಿಗಾರ ದಂಪತಿಯ ಮಗನಾದ ಕೃಷ್ಣ ಶೆಟ್ಟಿಗಾರ್‌ 40 ವರ್ಷಗಳಿಂದ ಕಸೆ ಸೀರೆ ತಯಾರಿ ಕಾಯಕದಲ್ಲಿ ತೊಡಗಿ ದ್ದಾರೆ. ತಂದೆ ಅಧ್ಯಾಪಕರಾಗಿದ್ದು ಬಿಡುವಿನಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದರು. ಬಳಿಕ ಕೃಷ್ಣ ಶೆಟ್ಟಿಗಾರರು ತಮ್ಮ ಪತ್ನಿ ಪದ್ಮಾವತಿಯ ಸಹಕಾರದೊಂದಿಗೆ ಕಸೆಸೀರೆ ತಯಾರಿಗೆ ತೊಡಗಿದರು. ಈ ಕೈ ಮಗ್ಗದ ಕೆಲಸಕ್ಕೆ ತುಂಬಾ ತಾಳ್ಮೆ ಬೇಕು. ಕೃಷ್ಣ ಶೆಟ್ಟಿಗಾರ್‌ ಪ್ರಕಾರ, ಒಂದು ಸೀರೆ ಮಾಡಲು 2 ದಿನ ಬೇಕು. ಒಂದು ಸೀರೆಯ ಬೆಲೆ 1,350/-ರೂ ಆದರೂ ಸಾಕಾಗದು.

ನೂಲನ್ನು ಹಳೆಯಂಗಡಿಯ ನೇಕಾರರ ಸಹಕಾರ ಸಂಘದಿಂದ ತರಲಾಗುತ್ತದೆ. ಈಗ ಒಂದು ಎರಡು ದಿನಗಳಲ್ಲಿ ನೂಲನ್ನು ಮಾಡುತ್ತಾರೆ. ಆದರೆ ಈ ಮೊದಲು ನೂಲನ್ನು 8 ದಿವಸ ನೆನಸಿ ಕಾಲಿನಲ್ಲಿ ತುಳಿದು, ಅನಂತರ ಬೇಯಿಸಿ ನಮಗೆ ಬೇಕಾದ ಬಣ್ಣಕ್ಕೆ ಮಾಡಿಕೊಳ್ಳಲಾಗುತ್ತಿತ್ತು. ಕೈ ಮಗ್ಗದ ಕಸೆಸೀರೆ ಮಾಡಲು ಹೇಳಿಕೊಟ್ಟವರು ನನ್ನ ಪ್ರಥಮ ಗುರು ಬ್ರಹ್ಮಾವರದ ಮಂಜುನಾಥ ಶೆಟ್ಟಿಗಾರರು ಎನ್ನುತ್ತಾರೆ ಕೃಷ್ಣ.

ಸ್ಪಲ್ಪ ನೆಮ್ಮದಿಯೆಂದರೆ ಇಂದು ಹೆಚ್ಚಾಗಿ ಎಲ್ಲ ಬಯಲಾಟ ಮೇಳ, ಸಂಘ- ಸಂಸ್ಥೆಗಳಿಗೆ, ಕಲಾವಿದರಿಗೆ ಯಾವ ಮಧ್ಯವರ್ತಿಯರ ಸಹಾಯವಲ್ಲದೆ ಮಾರಾಟ ಮಾಡುವುದರಿಂದ ಅಷ್ಟೋ ಇಷ್ಟೋ ಹಣ ದೊರೆಯುತ್ತದೆ. ಮೊದಲು ಶೆಟ್ಟಿಗಾರರು ನೇಕಾರರ ಸಹಕಾರಿ ಸಂಘಕ್ಕೆ ಕಸೆಸೀರೆ ಮಾಡಿಕೊಡುತ್ತಿದ್ದರು. ಅವರು 600-700 ರೂಪಾಯಿ ಕೊಡುತ್ತಿದ್ದರು. ಆ ಸೀರೆಯನ್ನು ಅವರು 1,000-1,200 ರೂ. ಗೆ ಮಾರುತ್ತಿದ್ದರು. ಕೆಲವು ಮಧ್ಯವರ್ತಿಗಳು ಇವರಿಂದ ಕಡಿಮೆ ಹಣದಲ್ಲಿ ತೆಗೆದುಕೊಂಡು ಹೋಗಿ ಅದರ ಎರಡರಷ್ಟು ಹಣ ಸಂಪಾ ದಿಸುತ್ತಿದ್ದ ಘಟನೆಗಳೂ ಇದ್ದವು.

ಈಗ ಕೃಷ್ಣ ಅವರು ಯಾರ ಸಹಾಯವಿಲ್ಲದೆ ವ್ಯಾಪಾರ ಮಾಡುತ್ತಿದ್ದರು. ಇಂದು ಈ ಕೆಲಸ ಮುಂದಿನ ಪೀಳಿಗೆಗೆ ರವಾನಿಸಲು ಯಕ್ಷಗಾನ ಅಕಾಡೆಮಿಯ ಸಹಕಾರದಲ್ಲಿ 5-6 ಆಸಕ್ತ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟವರು ಇವರು.

Advertisement

ಕೃಷ್ಣ ಶೆಟ್ಟಿಗಾರರ ಮಕ್ಕಳಾದ ವಾಸುದೇವ, ಭರತ್‌ ಇಬ್ಬರೂ ವಿದ್ಯಾಭ್ಯಾಸ ಪೂರೈಸಿ ಒಳ್ಳೆಯ ಉದ್ಯೋಗ ದಲ್ಲಿದ್ದಾರೆ. ಇಂದು ಕೃಷ್ಣ ಶೆಟ್ಟಿಗಾರ್‌ ನೈದ ಕಸೆಸೀರೆ ಒಳ್ಳೆಯ ಗುಣಮಟ್ಟದ್ದಾಗಿರುವುದರಿಂದ ಇವರ ಸೀರೆಗೆ ಸಾಕಷ್ಟು ಬೇಡಿಕೆ ಇದೆ. ಹಾಗೆ ಇವರ ಕಸುಬಿಗೆ ಹಲವು ಸಂಘ ಸಂಸ್ಥೆ, ಪದ್ಮಶಾಲಿ ಸಂಘದವರು ಗೌರವಿಸಿದೆ.

ಇಂಥವರ ಪರಿಶ್ರಮಕ್ಕೆ ಮತ್ತಷ್ಟು ಬೆಲೆ ಕಟ್ಟುವ ಕೆಲಸವಾಗಬೇಕು.

  ಕೋಟ ಸುದರ್ಶನ ಉರಾಳ. ಹಂದಟ್ಟು

Advertisement

Udayavani is now on Telegram. Click here to join our channel and stay updated with the latest news.

Next