ಕಾಸರಗೋಡು, ಎ. 29: ಜಲ ಪ್ರಾಧಿಕಾರದಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ಪೂರೈಕೆಯಾಗುತ್ತಿದ್ದ ನೀರು ನಿಲುಗಡೆಯಿಂದ ಆಸ್ಪತ್ರೆಯ ರೋಗಿಗಳು ಮತ್ತು ಸಿಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪಯಸ್ವಿನಿ ಹೊಳೆಯ ಬಾವಿಕ್ಕೆರೆ ಜಲ ದಾಸ್ತಾನು ಕೇಂದ್ರದಲ್ಲಿ ನೀರು ಪಂಪಿಂಗ್ ನಿಲುಗಡೆಗೊಂಡಿರುವುದರಿಂದ ಆಸ್ಪತ್ರೆಗೆ ನೀರು ಪೂರೈಕೆ ನಿಲುಗಡೆಗೆ ಪ್ರಮುಖ ಕಾರಣವಾಗಿದೆ. ಜನರಲ್ ಆಸ್ಪತ್ರೆಯ ದೈನಂದಿನ ನಿರ್ವಹಣೆಗೆ ಎರಡು ಲಕ್ಷ ಲೀಟರ್‌ಗಳಷ್ಟು ನೀರಿನ ಅಗತ್ಯವಿದೆ. ಇದರಲ್ಲಿ ಜಲ ಪ್ರಾಧಿಕಾರದ ಮೂಲಕ ಒಂದು ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿತ್ತು.
ನೀರು ಪೂರೈಕೆ ಮೊಟಕುಗೊಂಡಿರುವುದರಿಂದಾಗಿ ಜನರಲ್ ಆಸ್ಪತ್ರೆಯ ಏಳು ಅಂತಸ್ತಿನ ಕಟ್ಟಡ ಮತ್ತು ಇತರ ಕಟ್ಟಡಗಳ ನೀರಿನ ಟ್ಯಾಂಕ್ ಬರಿದಾಗಿದೆ. ಜನರಲ್ ಆಸ್ಪತ್ರೆಯಲ್ಲಿ ರೋಗಿ ಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯ ಶೌಚಾಲಯ, ಸ್ನಾನದ ಕೊಠಡಿ, ಲ್ಯಾಬ್ ಮತ್ತಿತರ ಎಲ್ಲ ವಾರ್ಡ್‌ಗಳಿಗೂ ನೀರು ಪೂರೈಕೆ ಮೊಟಕುಗೊಂಡಿದೆ. ಈಗ ಆಸ್ಪತ್ರೆಯ ಬಾವಿಯಿಂದ ನೀರು ಅತ್ಯಗತ್ಯಕ್ಕೆ ಬಳಸಲಾ ಗುತ್ತಿದೆ. ಜಲ ಪ್ರಾಧಿಕಾರದಿಂದ ಪೂರೈಕೆ ಗೊಳ್ಳುತ್ತಿದ್ದ ನೀರಿನಲ್ಲಿ ಉಪ್ಪಿನ ಅಂಶ ಇರುವು ದರಿಂದ ಉಪಯೋಗಿಸಲು ಅಸಾಧ್ಯವಾಗಿದೆ.
ಆಸ್ಪತ್ರೆಯ ಬಾವಿಯಿಂದ ಅಪರಿಮಿತ ಪಂಪಿಂಗ್ ಮಾಡುತ್ತಿರುವುದರಿಂದ ಈ ಬಾವಿ ಯಲ್ಲೂ ನೀರು ಬತ್ತ ತೊಡಗಿದೆ. ಕಳೆದ ವರ್ಷ ಬೇಸಗೆ ಕಾಲದಲ್ಲಿ ತಲಾ 3,000 ಲೀಟರ್‌ಗೆ ತಲಾ 800 ರೂ. ತೆತ್ತು ಖಾಸಗಿ ವಲಯದಿಂದ ಆಸ್ಪತ್ರೆಗೆ ನೀರು ಪೂರೈಸುವ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಬಾರಿ ಕಾಸರ ಗೋಡಿನಲ್ಲಿ ಜಲಸಂಪನ್ಮೂಲಗಳಲ್ಲಿ ನೀರಿನ ಮಟ್ಟ ಗಣನೀಯ ಕುಸಿದಿರುವುದರಿಂದಾಗಿ ಆಸ್ಪತ್ರೆಗೆ ಅಗತ್ಯದ ನೀರನ್ನು ಖಾಸಗಿ ವಲಯದಿಂದಲೂ ಪೂರೈಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಆಸ್ಪತ್ರೆಯ ಡಯಾಲಿಸಿಸ್ ಪ್ರಕ್ರಿಯೆ ಮೇಲೂ ಇದು ಪರಿಣಾಮ ಬೀರ ತೊಡಗಿದೆ. ನೀರಿನ ಸಮಸ್ಯೆ ಆಸ್ಪತ್ರೆಯ ದೈನಂದಿನ ಚಟುವಟಿಕೆ ಮತ್ತು ಆಪರೇಷನ್‌ಗಳಿಗೂ ಪ್ರತಿಕೂಲಕರವಾಗಿ ಪರಿಣಮಿ ಸಿದೆ. ಇನ್ನೊಂದೆಡೆ ನೀರು ಲಭಿಸದೆ ರೋಗಿ ಗಳು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ನೀರಿನ ಅಲಭ್ಯ ಸಾಂಕ್ರಾಮಿಕ ರೋಗ ಹರಡು ವಿಕೆಗೂ ಕಾರಣವಾಗಬಹುದೆಂಬ ಆತಂಕವನ್ನು ಆಸ್ಪತ್ರೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್‌ಗಳ ಮೂಲಕ ಹೊರಗಡೆಯಿಂದ ನೀರು ಪೂರೈಸುವ ಯತ್ನದಲ್ಲಿ ಆಸ್ಪತ್ರೆಯ ಸಂಬಂಧಪಟ್ಟವರು ತೊಡಗಿದ್ದಾರೆ.