ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಗುಜರಾತ್‌ನ ಕೆಳ ಹಂತದ ನ್ಯಾಯಾಲಯದ 68 ನ್ಯಾಯಾಧೀಶರಿಗೆ ನೀಡಬೇಕಾಗಿದ್ದ ಪದೋನ್ನತಿಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆನೀಡಿದೆ. ಈ ನ್ಯಾಯಾಧೀಶರ ಪೈಕಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ 2 ವರ್ಷಗಳ ಜೈಲು ಶಿಕ್ಷೆ ತೀರ್ಪು ನೀಡಿದ ಸೂರತ್‌ನ ಮುಖ್ಯ ಜ್ಯುಡಿಷಿಯಸ್ ಮ್ಯಾಜಿಸ್ಟ್ರೇಟ್ ಹರೀಶ್ ಹನ್ಶುಖ್ ಭಾಯ್ ವರ್ಮಾ ಕೂಡ ಸೇರಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾ.ಎಂ.ಆರ್.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್ ನೇತೃತ್ವದ ನ್ಯಾಯಪೀಠ ಈ ಬಗ್ಗೆ ಆದೇಶ ನೀಡಿದ್ದು, “ಗುಜರಾತ್ ರಾಜ್ಯ ನ್ಯಾಯಾಂಗ ಸೇವಾ ನಿಯಮ 2005ರ ಅನ್ವಯ 68 ನ್ಯಾಯಾಧೀಶರಿಗೆ ನೀಡಲಾಗಿರುವ ಪದೋನ್ನತಿಯು ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ, ಪದೋನ್ನತಿ ಪಟ್ಟಿಗೆ ತಡೆಯಾಜ್ಞೆ ನೀಡುತ್ತಿದ್ದೇವೆ. ಪದೋನ್ನತಿಗೊಂಡ ನ್ಯಾಯಾಧೀಶರನ್ನು ಮೊದಲು ಯಾವ ಹುದ್ದೆಗಳಲ್ಲಿ ನಿಯುಕ್ತಿಯಾಗಿದ್ದರೋ, ಅಲ್ಲಿಗೇ ತೆರಳಿ ಕರ್ತವ್ಯ ಮುಂದುವರಿಸಬೇಕು. ಬಡ್ತಿ ವಿಚಾರ ನ್ಯಾಯಪೀಠದ ನಿರ್ದೇಶನಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದೆ.
ರವಿಕುಮಾರ್ ಮೆಹ್ತಾ ಮತ್ತು ಸಚಿನ್ ಪ್ರತಾಪ್ ರಾಯ್ ಮೆಹ್ತಾ ಎಂಬ ಇಬ್ಬರು ಬಡ್ತಿ ಆದೇಶ ಪ್ರಶ್ನೆ ಮಾಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ನ್ಯಾಯಪೀಠ ಈ ತೀರ್ಪು ನೀಡಿದೆ. ಗಮನಾರ್ಹ ಅಂಶವೆಂದರೆ ನ್ಯಾ.ಎಂ.ಆರ್.ಶಾ ಮೇ 15ರಂದು ನಿವೃತ್ತಿಯಾಗಲಿದ್ದಾರೆ.