Advertisement

ಕ್ಷೇತ್ರಗಳತ್ತ ಮುಖ ಮಾಡಿದ ಜೆಡಿಎಸ್‌-ಕಾಂಗ್ರೆಸ್‌ ಶಾಸಕರು

06:25 AM May 26, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫ‌ಲಿತಾಂಶದ ನಂತರ “ಆಪರೇಷನ್‌ ಕಮಲ’ ಕಾರ್ಯಾಚರಣೆ ಭೀತಿಯಿಂದ ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಶುಕ್ರವಾರ ವಿಶ್ವಾಸಮತಯಾಚನೆ ನಂತರ ಕ್ಷೇತ್ರಗಳತ್ತ  ಮುಖ ಮಾಡಿದರು.

Advertisement

ಮೇ 15 ರಂದು ಫ‌ಲಿತಾಂಶ ಪ್ರಕಟಗೊಂಡ ರಾತ್ರಿಯೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಬೆಂಗಳೂರಿಗೆ ಕರೆಸಲಾಗಿತ್ತು. ನಂತರ ಹತ್ತು ದಿನಗಳ ಕಾಲ ನಗರದ ವಿವಿಧ ಹೋಟೆಲ್‌, ಹೊರ ವಲಯದ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಇರಿಸಲಾಗಿತ್ತು.

ಕುಟುಂಬ ಸದಸ್ಯರು ಬಂದು ಶಾಸಕರನ್ನು ಕಾಣಲು ಮಾತ್ರ ಅವಕಾಶ ಕಲ್ಪಿಸಿ ಉಳಿದಂತೆ ಬೆಂಬಲಿಗರು-ಕ್ಷೇತ್ರದ ಕಾರ್ಯಕರ್ತರು, ಸಾರ್ವಜನಿಕರಿಗೆ ಸಂಪರ್ಕ ಇರಲಿಲ್ಲ. ಹತ್ತು ದಿನ ಬಹುತೇಕ ಹೋಟೆಲ್‌ ಹಾಗೂ ರೆಸಾರ್ಟ್‌ಗಳಲ್ಲಿ ಬಂಧಿಯಾಗಿದ್ದರು.

ಶುಕ್ರವಾರ ವಿಧಾನಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪಡೆಯುತ್ತಲೇ ಅವರಿಗೆ ಶುಭ ಕೋರಿದ  ಎರಡೂ ಪಕ್ಷಗಳ ಶಾಸಕರು ತಮ್ಮ ತಮ್ಮ ಕ್ಷೇತ್ರಗಳತ್ತ ತೆರಳಿದರು.ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಶುಕ್ರವಾರ ವಿಧಾನಸೌಧದಲ್ಲಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲೇ ಜೆಡಿಎಸ್‌ ಶಾಸಕರ ಜತೆ  ಊಟ ಮಾಡಿದ್ದು ವಿಶೇಷ.

ಮೊಕ್ಕಾಂ
ಈ ಮಧ್ಯೆ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಸಚಿವಾಕಾಂಕ್ಷಿಗಳು ಬೆಂಗಳೂರಿನಲ್ಲೇ ಉಳಿದಿದ್ದು ನಾಯಕರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಕಾಂಗ್ರೆಸ್‌ ಸಚಿವಾಕಾಂಕ್ಷಿಗಳು ದೆಹಲಿಗೂ ತೆರಳಿದ್ದಾರೆ ಎನ್ನಲಾಗಿದೆ.

Advertisement

ಬಿಗಿ ಭದ್ರತೆ
ಎಚ್‌.ಡಿ.ಕುಮಾರಸ್ವಾಮಿಯವರ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಶುಕ್ರವಾರವೂ ವಿಧಾನಸೌಧ ಸುತ್ತಮುತ್ತ ಬಿಗಿ ಭದ್ರತೆ ಆಯೋಜಿಸಲಾಗಿತ್ತು. ಹೋಟೆಲ್‌ ಹಾಗೂ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಖಾಸಗಿ ಬಸ್‌ಗಳಲ್ಲಿ ಬೆಳಗ್ಗೆ 11.30 ರ ವೇಳೆಗೆ ವಿಧಾನಸೌಧಕ್ಕೆ ಕರೆತರಲಾಯಿತು. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಯುವವರೆಗೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರ ಮೇಲೆ ಆಯಾ ಪಕ್ಷದ ನಾಯಕರು ನಿಗಾ ವಹಿಸಿದ್ದರು. ವಿಶ್ವಾಸಮತ ಮುಗಿಯುತ್ತಿದ್ದಂತೆ ಎರಡೂ ಪಕ್ಷದ ನಾಯಕರು ನಿಟ್ಟುಸಿರು ಬಿಟ್ಟರು.

ಸಂಭ್ರಮ
ವಿಧಾನಸಭೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಸಂಭ್ರಮಿಸಿದರು.  ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಜತೆಗೂಡಿ ಮಾಧ್ಯಮಗಳತ್ತ ವಿಜಯದ ಸಂಕೇತ ಪ್ರದರ್ಶಿಸಿದರು. ಆ ನಂತರ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೆ ಸಿದ್ದರಾಮಯ್ಯ,ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ್‌, ರೋಷನ್‌ಬೇಗ್‌, ಜಮೀರ್‌ ಅಹಮದ್‌, ಶ್ಯಾಮನೂರು ಶಿವಶಂಕರಪ್ಪ, ಎಂ.ಕೃಷ್ಣಪ್ಪ, ಎಚ್‌.ವಿಶ್ವನಾಥ್‌, ಜಿ.ಟಿ.ದೇವೇಗೌಡ, ಬಸವರಾಜ್‌ ಪಾಟೀಲ್‌ ಹುಮ್ನಾಬಾದ್‌ ಸೇರಿದಂತೆ ಉಭಯ ಪಕ್ಷಗಳ ಶಾಸಕರು ಅಭಿನಂದನೆ ಸಲ್ಲಿಸಿದರು.

ನಾಯಕರ ಉಪಸ್ಥಿತಿ
ಅಧಿಕಾರಿಗಳ ಗ್ಯಾಲರಿಯಲ್ಲಿ ರಾಜ್ಯ  ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ರಾಜ್ಯಸಭೆ ಸದಸ್ಯ ಎಲ್‌.ಹನುಮಂತಯ್ಯ, ಸಂಸದ ಧ್ರುವನಾರಾಯಣ ಕುಳಿತು ವಿಶ್ವಾಸಮತ ಯಾಚನೆ ಮುಗಿಯುವರೆಗೂ ಅಲ್ಲೇ ಇದ್ದು ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಾಜಿ ಸಚಿವ ಎಚ್‌.ಆಂಜನೇಯ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಮೋಟಮ್ಮ, ಜಯಮ್ಮ, ಮುಖಂಡರಾದ ಸಲೀಂ ಅಹಮದ್‌, ಪ್ರಕಾಶ್‌ ರಾಥೋಡ್‌ ಸೇರಿದಂತೆ ಹಲವಾರು ನಾಯಕರು ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಶ್ವಾಸಮತ ಕಲಾಪ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next