Advertisement

ಮಂಡ್ಯದಲ್ಲಿ ಜೆಡಿಎಸ್‌ ಭದ್ರಕೋಟೆ ಇನ್ನಷ್ಟು ಸುಭದ್ರ

06:00 AM Nov 08, 2018 | |

ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆ ಗೆಲುವಿನೊಂದಿಗೆ ಜಿಲ್ಲೆಯಲ್ಲಿ ಜೆಡಿಎಸ್‌ ತನ್ನ ಭದ್ರಕೋಟೆಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಪಕ್ಷದ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡರ ಗೆಲುವು ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದರೆ, ಜೆಡಿಎಸ್‌ ಮಡಿಲಿಗೆ ಗೆಲುವನ್ನು ಸಮರ್ಪಿಸಿರುವ ಕಾಂಗ್ರೆಸ್‌ನೊಳಗೆ  ನಿರುತ್ಸಾಹ, ಗೊಂದಲ ಸ್ಥಿತಿ ಮನೆಮಾಡಿದೆ.

Advertisement

ಜೆಡಿಎಸ್‌ ಅಭ್ಯರ್ಥಿ ಎಲ್‌.ಆರ್‌.ಶಿವರಾಮೇಗೌಡರನ್ನು 3,24,943 ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಗೆಲುವಿನ ಅಂತರದ ಎಲ್ಲಾ ದಾಖಲೆಗಳನ್ನು ಅಳಿಸಿ ಐತಿಹಾಸಿಕ ದಿಗ್ವಿಜಯ ತಂದುಕೊಟ್ಟ ಸಂಭ್ರಮ ನಾಯಕರಲ್ಲಿ ಮನೆ ಮಾಡಿದೆ. ಪಕ್ಷದ ಗೆಲುವು ಜೆಡಿಎಸ್‌ನವರಿಗೆ ಜಿಲ್ಲೆಯೊಳಗೆ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವುದರೊಂದಿಗೆ ಆತ್ಮವಿಶ್ವಾಸ, ಸಂಘಟನಾ ಶಕ್ತಿ ಹೆಚ್ಚಿಸುವಂತೆ ಮಾಡಿದೆ. ಪಕ್ಷದ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗೆ ಲೀಡ್‌ ದೊರಕಿಸಿಕೊಡುವ ಮೂಲಕ ವರ್ಚಸ್ಸನ್ನು ಕಾಪಾಡಿಕೊಂಡಿದ್ದಾರೆ.

ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವನ್ನು ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಗೆಲುವೆಂದೇ ವಿಜೃಂಭಿಸುತ್ತಿದ್ದಾರೆ.  ಕಾಂಗ್ರೆಸ್‌ ಬೆಂಬಲದಿಂದ ಇಂತಹದೊಂದು ದಿಗ್ವಿಜಯ ಸಾಧ್ಯವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಜೆಡಿಎಸ್‌ನವರು ಇಲ್ಲ. ಜೆಡಿಎಸ್‌ ಅಭ್ಯರ್ಥಿಯ ಗೆಲುವು ಸಂಪೂರ್ಣ ತಮ್ಮದೇ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್‌ನಲ್ಲಿ ಅತಂತ್ರ, ನಿರುತ್ಸಾಹ: ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಗೆಲುವು ಆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಂತಸ ತಂದಿಲ್ಲ. ಜಿಲ್ಲೆಯಲ್ಲಿ ಸಾಂಪ್ರದಾಯಿಕ ಎದುರಾಳಿ ಜೆಡಿಎಸ್‌ನೊಂದಿಗೆ ಗೆಲುವಿನ ವಿಜಯೋತ್ಸವ ಆಚರಿಸಲಾಗದೆ ಅತಂತ್ರ, ಗೊಂದಲದ ಸ್ಥಿತಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ಪ್ರಸ್ತುತ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವು ಸಾಧಿಸಿರುವುದು ಕಾಂಗ್ರೆಸ್ಸಿಗರ ಮತ್ತೂಂದು ಆತಂಕಕ್ಕೂ ಕಾರಣವಾಗಿದೆ. ಲೋಕಸಭಾ ಉಪ ಚುನಾವಣಾ ಮೈತ್ರಿಯಿಂದ ದೊರಕಿರುವ ಗೆಲುವಿನಿಂದ ಪ್ರೇರಣೆಗೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರು ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಮೈತ್ರಿಯನ್ನು ಮುಂದುವರಿಸಿದರೆ ಪಕ್ಷಕ್ಕೆ ಇನ್ನಷ್ಟು ಹೊಡೆತ ಬೀಳುವುದು ನಿಶ್ಚಿತವಾಗಲಿದೆ. ಆಗಲೂ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಜೆಡಿಎಸ್‌ನವರಿಗೇ ಕ್ಷೇತ್ರವನ್ನು ಬಿಟ್ಟುಕೊಟ್ಟಲ್ಲಿ ಕಾಂಗ್ರೆಸ್‌ ಅಸ್ತಿತ್ವ ಮತ್ತೆ ಜಿಲ್ಲೆಯಲ್ಲಿ ನಿರ್ನಾಮವಾಗಬಹುದೆಂಬ ಭೀತಿ ಎಲ್ಲರನ್ನೂ ಆವರಿಸಿದೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕಾಂಗ್ರೆಸ್‌ ಪಕ್ಷದ ಎಲ್ಲಾ ಪರಾಜಿತ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಸಭೆಗಳನ್ನು ನಡೆಸಿ ಎಲ್‌.ಆರ್‌.ಶಿವರಾಮೇಗೌಡರ ಪರ ಒಲ್ಲದ ಮನಸ್ಸಿನಿಂದಲೇ ಮತಯಾಚನೆ ನಡೆಸಿದ್ದರು. ಶಿವರಾಮೇಗೌಡರ ದಾಖಲೆಯ ದಿಗ್ವಿಜಯದಲ್ಲಿ ಕಾಂಗ್ರೆಸ್‌ನವರ ಪಾಲೂ ಇದೆ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮನಸ್ಥಿತಿಯಲ್ಲಿ ಕಾಂಗ್ರೆಸ್ಸಿಗರಿಲ್ಲ. ಹಾಗಾಗಿ ಎಲ್ಲರೂ ನೀರವ ಮೌನಕ್ಕೆ ಶರಣಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next