Advertisement
ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಕಾಶ್ ಜಾವಡೇಕರ್ ಭಾನುವಾರ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರ ಕೋರ್ ಕಮಿಟಿ, ರಾಜಕೀಯ ವ್ಯವಹಾರಗಳ ಸಮಿತಿ ಜತೆ ಸಭೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಪಡೆದಿರುವ ಜಾವಡೇಕರ್, ಚುನಾವಣಾ ಸಿದ್ಧತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಜತೆ ಈಗಾಗಲೇ ಒಂದು ಸುತ್ತು ಸಭೆ ನಡೆಸಿದ್ದಾರೆ. ಶಾ ಅವರೂ ಕೆಲವು ಸೂಚನೆಗಳನ್ನು ನೀಡಿದ್ದು, ಅದರಂತೆ ಜಾವಡೇಕರ್ ಅವರು ಮೊದಲು ಪಕ್ಷದ ಕೋರ್ ಕಮಿಟಿ ಸದಸ್ಯರ ಜತೆ ಚರ್ಚಿಸಿ ರಾಜ್ಯ ರಾಜಕಾರಣದ ಕುರಿತು ಸಮಗ್ರ ಮಾಹಿತಿ ಪಡೆಯಲಿದ್ದಾರೆ. ಇದಾದ ಬಳಿಕ ರಾಜಕೀಯ ವ್ಯವಹಾರಗಳ ಸಮಿತಿ ಜತೆಗೂ ಮಾತುಕತೆ ನಡೆಸಲಿದ್ದಾರೆ.
ಭಿನ್ನಮತೀಯ ಚಟುವಟಿಕೆ ನಡೆಸಿದವರಿಗೆ ಇನ್ನುಮುಂದೆ ಪಕ್ಷದಲ್ಲಿ ಅವಕಾಶವಿಲ್ಲ ಎಂಬ ಅಮಿತ್ ಶಾ ಅವರ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸಂಪೂರ್ಣ ಸ್ತಬ್ಧಗೊಂಡಿದೆ. ಯಾವೊಬ್ಬ ನಾಯಕರೂ ಧ್ವನಿ ಎತ್ತುತ್ತಿಲ್ಲ. ಹೀಗಾಗಿ ಎಲ್ಲರನ್ನೂ ಒಟ್ಟಾಗಿ ಕುಳ್ಳಿರಿಸಿ ಚುನಾವಣಾ ರಣತಂತ್ರಗಳನ್ನು ರೂಪಿಸುವ ಜಾವಡೇಕರ್ ಅವರ ಕೆಲಸವನ್ನು ಸುಲಭಗೊಳಿಸಿದೆ ಎನ್ನಲಾಗಿದೆ. ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾಗ ನೀಡಿದ ಸೂಚನೆಗಳನ್ನು ಆಧರಿಸಿ ಪಕ್ಷ ಕೈಗೊಂಡಿರುವ ಕಾರ್ಯಕ್ರಮ, ಹೋರಾಟಗಳ ಬಗ್ಗೆ ಜಾವಡೇಕರ್ ಅವರಿಗೆ ವಿವರ ನೀಡಲು ಸಿದ್ಧತೆ ನಡೆಸಿರುವ ರಾಜ್ಯ ನಾಯಕರು, ಚುನಾವಣೆ ದೃಷ್ಟಿಯಲ್ಲಿ ಮುಂದಿನ ಹೋರಾಟಗಳ ಬಗ್ಗೆಯೂ ಕೆಲವೊಂದು ಯೋಜನೆಗಳನ್ನು ರೂಪಿಸಿರುವ ಬಗ್ಗೆಯೂ ಮಾಹಿತಿ ನೀಡಲಿದ್ದಾರೆ. ಇದನ್ನು ಆಧರಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸುವ ಕಾರ್ಯ ಸೋಮವಾರದ ಸಭೆಯಲ್ಲಿ ಆಗಲಿದೆ ಎಂದು ತಿಳಿದುಬಂದಿದೆ.
Related Articles
Advertisement