ಬೆಂಗಳೂರು: ಮಂಗಳೂರು ಕುಕ್ಕರ್ ಪ್ರಕರಣದ ಹೊಣೆ ಹೊತ್ತಿದ್ದ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್‌ಸಿ) ಅನ್ನು ಐಸಿಸ್ ಸಂಘಟನೆಯೇ ಹುಟ್ಟು ಹಾಕಿ “ಹೊಣೆಗಾರಿಕೆಯ ಪತ್ರ’ವನ್ನು ವೈರಲ್ ಮಾಡಿದೆ. ಈ ಮೂಲಕ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬಂದ ಕೆಲವು ದಿನ ಗಳ ಬಳಿಕ ಐಆರ್‌ಸಿ ಸಂಘಟನೆ ಸ್ಫೋಟದ ಹೊಣೆ ಹೊತ್ತು, ಕದ್ರಿ ದೇವಾಲಯ ತನ್ನ ಸದಸ್ಯ ಶಾರೀಕ್‌ನ ಗುರಿಯಾಗಿತ್ತು ಎಂದು ಹೇಳಿಕೊಂಡಿತ್ತು. ವೈರಲ್ ಆದ ಈ ಪತ್ರ ಪೊಲೀಸರಿಗೆ ತಲೆನೋವು ತಂದಿತ್ತು. ಇದು ಹೊಸ ಸಂಘಟನೆಯೇ ಎಂಬುದು ಯಕ್ಷ ಪ್ರಶ್ನೆಯಾಗಿತ್ತು.
ಭಯೋತ್ಪಾದಕ ಸಂಘಟನೆ ಗಳು ತಮ್ಮ ಮೇಲಿನ ನಿರಂತರ ಆರೋಪಗಳನ್ನು ತಳ್ಳಿ ಹಾಕಲು ಬಳಸುತ್ತಿರುವ ಸಂಚಿನ ಭಾಗ ಇದು ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಇಂಥ ವಿಧ್ವಂಸಕ ಕೃತ್ಯಗಳು ಜರಗಿದಾಗ ಕೆಲವು ಉಗ್ರ ಸಂಘಟನೆಗಳು ಘಟನೆಯ ಹೊಣೆ ಹೊತ್ತುಕೊಳ್ಳುತ್ತವೆ. ಆದರೆ ಐಸಿಸ್‌ನಂಥ ಸಂಘಟನೆಗಳು ತಮ್ಮ ಮೇಲಿನ ಆರೋಪಗಳನ್ನು ವರ್ಗಾಯಿಸಲು ಹೊಸ ಅಥವಾ ನಕಲಿ ಸಂಘಟನೆಗಳನ್ನು ಹುಟ್ಟು ಹಾಕಿ ತನಿಖೆಯ ದಿಕ್ಕು ತಪ್ಪಿಸುತ್ತವೆ ಎಂದು ಮೂಲಗಳು ತಿಳಿಸಿವೆ.
Related Articles
ಕೊಯಮತ್ತೂರಿನ ಪ್ರಕರಣದಲ್ಲಿ ಐಸಿಸ್ ಪಾತ್ರ ಪತ್ತೆಯಾಗಿತ್ತು. ಆದರೆ ಮಂಗಳೂರು ಪ್ರಕರಣದ ಹೊಣೆಯನ್ನು ಐಆರ್‌ಸಿ ಹೊತ್ತ ಪತ್ರ ವೈರಲ್ ಆಗಿದೆ. ಅಸಲಿಗೆ ಕೃತ್ಯದ ಮಾದರಿ ಹಾಗೂ ಶಂಕಿತ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸಿದಾಗ ಇದು ಕೂಡ ಐಸಿಸ್‌ನದ್ದೇ ಕೃತ್ಯ ಎಂಬುದು ಸಾಬೀತಾಗಿರುವುದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಪಾಕಿಸ್ಥಾನದ ಲಷ್ಕರ್-ಎ-ತಯ್ಯಬಾ ಮತ್ತು ಜೈಶ್ ಎ-ಮೊಹಮ್ಮದ್ ಸಂಘಟನೆಗಳು ಕೂಡ ಬೇರೆ ಬೇರೆ ಹೆಸರಿನಲ್ಲಿ ಕೆಲವು ಘಟನೆಗಳ ಹೊಣೆ ಹೊತ್ತುಕೊಂಡಿದ್ದವು. ಲಷ್ಕರ್-ಎ-ತಯ್ಯಬಾ “ದಿ ರೆಸಿಸ್ಟೆನ್ಸ್ ಫ್ರಂಟ್’ ಹೆಸರಿನಲ್ಲಿ ಸಕ್ರಿಯವಾಗಲು ಮುಂದಾಗಿತ್ತು. ಭಾರತದಲ್ಲಿ ನಿಷೇಧಿತ ಐಸಿಸ್ ಮತ್ತು ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ, ಅಲ್‌ಕಾಯಿದಾ ಸಂಘಟನೆಗಳು ದಕ್ಷಿಣ ಭಾರತದಲ್ಲಿ ಅಲ್-ಹಿಂದ್, ಸಿಮಿ ಹಾಗೂ ಅನ್ಸರುಲ್ಲಾ, ಅಲ್ -ಉಮ್ಮಾ, ಬೇಸ್ ಮೂವ್‌ಮೆಂಟ್ ಮತ್ತಿತರ ಹೆಸರಿನಲ್ಲಿ ಸಕ್ರಿಯವಾಗಿವೆ. ಕೇರಳದಲ್ಲಿ ಅಲ್-ಹಿಂದ್ ಮತ್ತು ಸಿಮಿ ಹೆಚ್ಚು ಸಕ್ರಿಯವಾಗಿದ್ದು, ಯುವಕರ ನೇಮಕ ಪ್ರಕ್ರಿಯೆಯಲ್ಲಿ ನಿರತವಾಗಿವೆ.
ಸ್ಫೋಟಕ ವಿಚಾರವೆಂದರೆ ಸಿಮಿಯು ಕೇರಳದಲ್ಲಿ 20ಕ್ಕೂ ಹೆಚ್ಚು ಸಂಘಟನೆಗಳ ಹೆಸರಿನಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದ್ದರೆ, ಅಲ್-ಕಾಯಿದಾ ಮತ್ತು ಐಸಿಸ್ ಪ್ರೇರಿತಗೊಂಡು ತಮಿಳುನಾಡಿನಲ್ಲಿ “ಅನ್ಸರುಲ್ಲಾ’ ಎಂಬ ಸಂಘಟನೆ ಸಕ್ರಿಯವಾಗಿದೆ ಎಂದು ಹೇಳಲಾಗಿದೆ.
ಶಾರೀಕ್ ಐಸಿಸ್‌ನಲ್ಲಿ ಸಕ್ರಿಯ
ಮಂಗಳೂರು ಪ್ರಕರಣದ ಶಂಕಿತ ಶಾರೀಕ್, ಐಸಿಸ್ ಮತ್ತು ಅದರ ಪ್ರೇರಿತ ಅಲ್-ಹಿಂದ್ ಸಂಘಟನೆಯ ಸದಸ್ಯನಾಗಿದ್ದ ಎಂಬುದು ಗೊತ್ತಾಗಿದೆ. ಆದರೆ ಮೊಹಮ್ಮದ್ ಮತೀನ್ ತಾಹಾ, ಶಾರೀಕ್‌ನನ್ನು ಸದಸ್ಯ ಎಂದು ಹೇಳಿಕೊಂಡಿರಲಿಲ್ಲ. ತನ್ನೊಂದಿಗೆ ದಕ್ಷಿಣ ರಾಜ್ಯಗಳ ಸುತ್ತಾಟ ನಡೆಸುವಾಗಲೂ ಸಂಘಟನೆಯ ಸದಸ್ಯ ಎಂದು ಹೇಳಿಕೊಳ್ಳದಂತೆ ಸೂಚಿಸಿದ್ದ. ಹೀಗಾಗಿ ತುಂಗಾನದಿ ತೀರದ ಪ್ರಕರಣ, ಮಂಗಳೂರಿನ ಗೋಡೆ ಬರಹ ಪ್ರಕರಣಗಳಲ್ಲಿ ಪೊಲೀಸರು ಈತನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಆತ ನಿರ್ಭೀತಿಯಿಂದಿದ್ದ. ಅಲ್ಲದೆ ಮಂಗಳೂರು ಪ್ರಕರಣದ ಹಿಂದೆ ಕೇರಳ ಮತ್ತು ವಿದೇಶದಲ್ಲಿರುವ 3-4 ಮಂದಿಯ ಕೈವಾಡ ಇರುವುದು ಪತ್ತೆಯಾಗಿದೆ. ಶಾರೀಕ್‌ನ ಮೊಬೈಲ್ ಸಿಡಿಆರ್, ವಾಟ್ಸ್ ಆ್ಯಪ್, ಟೆಲಿಗ್ರಾಂ ರಿಟ್ರೀವ್ ಮಾಡಲಾಗುತ್ತಿದೆ. ಆತ ಸಂಪರ್ಕಿಸಿದ ಕೆಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
-ಮೋಹನ್ ಭದ್ರಾವತಿ