Advertisement

ಏಕೀಕರಣ ಸಾಕಾರ ಮಾಡಿದ ಆಲೂರರು

01:19 PM Feb 26, 2017 | |

ಧಾರವಾಡ: ನಾಡಿನ ಎಲ್ಲ ಕನ್ನಡಿಗರನ್ನು ಕರ್ನಾಟಕ ಏಕೀಕರಣಕ್ಕೆ ಪ್ರೇರೇಪಿಸಿ ಹರಿದು ಹಂಚಿ ಹೋಗಿದ್ದ ಕರ್ನಾಟಕದ ಕನ್ನಡಿಗರ ಅಖಂಡತ್ವದ ಬೀಜ ಮಂತ್ರದಿಂದ ಏಕೀಕರಣ ಸಾಕಾರ ಮಾಡಿದ ಮಹಾನ್‌ ವ್ಯಕ್ತಿ ಆಲೂರರು ಎಂದು ಬೆಂಗಳೂರಿನ ಅಕಾಡೆಮಿ ಫಾರ್‌ ಕ್ರಿಯೇಟಿವ್‌ ಟೀಚಿಂಗ್‌ನ ನಿರ್ದೇಶಕ ಡಾ| ಗುರುರಾಜ ಕರ್ಜಗಿ ಹೇಳಿದರು. 

Advertisement

ಆಲೂರರ 53ನೇ ಪುಣ್ಯತಿಥಿ ಅಂಗವಾಗಿ ನಗರದ ಆಲೂರು ವೆಂಕಟರಾಯರ ಭವನದಲ್ಲಿ ಹಮ್ಮಿಕೊಂಡಿದ್ದ ಆಲೂರ ವೆಂಕಟರಾಯರ ಮೇರು ಕೃತಿ ಕರ್ನಾಟಕ ಗತ ವೈಭವ ಗ್ರಂಥ ಪ್ರಕಾಶನದ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ಕರ್ನಾಟಕತ್ವದ ಅಖಂಡತೆಯೇ ಜೀವನದ ಧ್ಯೇಯ ವಾಕ್ಯವಾಗಿ ದುಡಿದ ಸಿದ್ಧಪುರುಷ ಆಲೂರು ವೆಂಕಟರಾಯರು ಎಂದರು. 

ಏಕೀಕರಣದ ಮೊದಲು ಕರ್ನಾಟಕ ರಾಜ್ಯವು ಹೈದರಾಬಾದ ಕರ್ನಾಟಕ, ಮುಂಬೈ ಕರ್ನಾಟಕ, ಮದ್ರಾಸ್‌ ಕರ್ನಾಟಕಗಳಲ್ಲಿ ಹರಿದು ಹಂಚಿ ಹೋಗಿತ್ತು. ಹೆಚ್ಚಾಗಿ ಇಲ್ಲಿನ ಎಲ್ಲ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚಾಗಿ ಮರಾಠಿ ಶಿಕ್ಷಣ ನೀಡಲಾಗುತ್ತಿತ್ತು. ಇದಕ್ಕಾಗಿ ಕರ್ನಾಟಕದ ಸಂಸ್ಕೃತಿ ಇದನ್ನು ಮನಗಂಡು ಆಲೂರರು ಏಕೀಕರಣ ಚಳವಳಿ ನಡೆಸಲು ತಮ್ಮ ಶಾಲಾ ವಿದ್ಯಾರ್ಥಿಯಾಗಿದ್ದಾಗ ಅಂಗ-ಭಂಗ ಚಳವಳಿಯಿಂದ ಪ್ರೇರಿತಗೊಂಡು ಸಂಪೂರ್ಣವಾಗಿ ಏಕೀಕರಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದರು. 

ವೆಂಕಟರಾಯರ ಕರ್ನಾಟಕ ಗತ ವೈಭವ 1917ರಲ್ಲಿ ಪ್ರಕಾಶಿಸಿ 187 ಪುಟಗಳ ಕಿರು ಗ್ರಂಥ ಏಕೀಕರಣಕ್ಕೆ ಸಮಯದಲ್ಲಿ ನಾಡಿನ ಜನರನ್ನು ಹೆಚ್ಚಾಗಿ ಜಾಗೃತರಾಗಿ ಮಾಡಿದ ಮೇರು ಕೃತಿಯಾಗಿದೆ ಎಂದರು. ಆಲೂರರ “ಕರ್ನಾಟಕ ಏಕೀಕರಣ’ ಕುರಿತ ಹೋರಾಟಗಳು ಮತ್ತು ಅವರು ಏಕಕಾಲಕ್ಕೆ ಹತ್ತಾರು ಕ್ಷೇತ್ರಗಳಲ್ಲಿ ಮಾಡಿದ ಅದ್ಭುತ ಸಾಧನೆಗಳು ಈ ನಾಡ ಇತಿಹಾಸದಲ್ಲಿ ಮರೆಯಲಾಗದ ಹೆಜ್ಜೆ ಮೂಡಿಸಿವೆ. 

ಆಲೂರರು ಬರೆದ “ಕರ್ನಾಟಕ ಗತವೈಭವ’ ಪುಸ್ತಕವನ್ನೋದಿದಾಗ ಒಂದು ಕೃತಿಯು ಹೇಗೆ ಶತಮಾನೋತ್ಸವವನ್ನು ಆಚರಿಸಬಹುದಾದ ನಾಡಿನ ಸಾರಸತ್ವವನ್ನೆಲ್ಲ ತುಂಬಿಕೊಂಡಿದೆ ಎಂಬುದರ ಅರಿವಾಗುತ್ತದೆ ಎಂದರು. ಕಾದಂಬರಿಕಾರ ಪ್ರೊ|ರಾಘವೇಂದ್ರ ಪಾಟೀಲ, ಏಕೀಕರಣದ ಪೂರ್ವ ರಂಗ ಹಾಗೂ ಏಕೀಕರಣದ ಪ್ರಜ್ಞಾ ಪೂರ್ವ ಕ್ರಿಯಾರಂಗದ ಅನೇಕ ಮಹತ್ವದ ಘಟನಾವಳಿ ಮತ್ತು ಆ ಕಾಲದ ನಿಸ್ವಾರ್ಥ ಹೋರಾಟಗಾರರ ಸಾಧನೆಗಳನ್ನು ತೆರೆದಿಟ್ಟರು. 

Advertisement

ಡಾ|ಬಸವರಾಜ ಅಕ್ಕಿ ಮಾತನಾಡಿ, ಆಲೂರರು ರಚಿಸಿದ ಕರ್ನಾಟಕ ಗತವೈಭವ ಕೃತಿಯ ಚಾರಿತ್ರಿಕ  ಹಿನ್ನೆಲೆ, ಮೂಲ ಸಂಶೋಧನೆಗಳಿಗೆ ಆಕರವಾಗಬಲ್ಲ ಅದರಲ್ಲಿಯ ಮಹತ್ವದ ಸಾಮಗ್ರಿಗಳ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಎನ್‌ಎಸ್‌ ಎಸ್‌ ಯೋಜನಾಧಿಕಾರಿಗಳಿಗೆ ಆಲೂರರ ಭಾವಚಿತ್ರ ವಿತರಿಸಲಾಯಿತು. 

ನಾಡೋಜ ಚನ್ನವೀರ ಕಣವಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪ್ರೊ| ಎ.ಜಿ.ಸಬರದ, ಡಾ|ಬಾಳಣ್ಣ ಶೀಗಿಹಳ್ಳಿ, ಡಾ|ಆರ್‌.ಬಿ. ಚಿಲುಮಿ, ಡಾ|ಎಸ್‌.ಕೆ.ಜೋಶಿ, ಡಾ|ಎ.ಕೆ.ಶಾಸ್ತ್ರೀ, ಡಾ|ಆರ್‌. ಕೆ.ಮುಳಗುಂದ ಡಾ|ಜಿ.ಎಮ್‌.ಹೆಗಡೆ, ಶ್ರೀನಿವಾಸ ವಾಡಪ್ಪಿ, ವಸಂತ ವಾಯಿ, ಡಾ|ಮಾನಸಾ ಸಿ.ಟಿ.,  ಶೋಭಾ ದೇಶಪಾಂಡೆ, ಜಯಶ್ರೀ ಜೋಶಿ, ಪುಷ್ಪಾಗೋಡಖೀಂಡಿ, ಅನಿಲ ಕಾಖಂಡಿಕಿ, ಎಸ್‌.ಎಮ್‌ ದೇಶಪಾಂಡೆ, ರಮೇಶ ಪರ್ವತಿಕರ ಇದ್ದರು.  ಶ್ರೀಹರಿ ಅಂಬೇಕರ ಪ್ರಾರ್ಥಿಸಿದರು.

ಸಿದ್ಧಲಿಂಗೇಶ ರಂಗಣ್ಣವರ ಸ್ವಾಗತಿಸಿದರು. ದೀಪಕ ಆಲೂರ  ಪರಿಚಯಿಸಿದರು. ವೆಂಕಟೇಶ ದೇಸಾಯಿ ಟ್ರಸ್ಟ್‌ ಕುರಿತು ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಪರಾಂಜಪೆ ನಿರೂಪಿಸಿದರು. ಡಾ|ಎಲ್‌.ಟಿ.ಕಾಯಕ ವಂದಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಜರುಗಿದ ಕರ್ನಾಟಕ ಗತವೈಭವದ ಗ್ರಂಥದ ಸಾರ್ವಜನಿಕ ಮೆರವಣಿಗೆಯನ್ನು ಕವಿವಿ ಕುಲಪತಿ ಡಾ|ಪ್ರಮೋದ ಗಾಯಿ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ|ಎಸ್‌.ಬಿ. ಬೊಮ್ಮನಹಳ್ಳಿ ಆಲೂರರ ಪುತ್ಥಳಿಗೆ ಮಾಲಾರ್ಪಣೆ  ಮಾಡಿದರು.   

Advertisement

Udayavani is now on Telegram. Click here to join our channel and stay updated with the latest news.

Next