Advertisement
ಆಕೆ ನಗುತ್ತ ಮಗಳ ಫೋನಿನ ಕಥೆಯನ್ನು ದೊಡ್ಡ ಸ್ವರದಲ್ಲಿ ಹೇಳತೊಡಗಿದಳು. “ನೋಡಿ, ನಿಮ್ಮ ಪುಳ್ಳಿಕೂಸಿನ ಪೆದ್ದುತನ. ಅವಳತ್ತೆ ಪಾಪ ! ತರಕಾರಿ ಕತ್ತರಿಸಿ ಇಟ್ಟಿದ್ದೇನೆ. ಕಾಯಿ ತುರಿದೂ ಆಗಿದೆ, ನಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ. ನಿನ್ನ ಮಾವ ಊಟಕ್ಕಿದ್ದಾರೆ. ಬೇಗ ಅಡುಗೆ ಮಾಡಿಬಿಡು’ ಎಂದು ಹೇಳಿ ಹೊರಗೆ ಹೋಗಿದ್ದಾರಂತೆ. ಈಕೆಗೀಗ ಗಾಬರಿ. ಅತ್ತೆ ಸೌತೆಕಾಯಿಯನ್ನು ದೊಡ್ಡದಾಗಿ ತುಂಡು ಮಾಡಿಟ್ಟಿದ್ದಾರೆ. ಇಷ್ಟು ದೊಡ್ಡ ತುಂಡುಗಳು ಯಾಕೆ? ಸಣ್ಣದಾಗಿ ಕತ್ತರಿಸೋಣ- ಎಂದರೆ ಅತ್ತೆ ಏನೆಂದುಕೊಂಡಾರೋ ಎಂದು ತಲೆಬಿಸಿ. “ಜೊತೆಗೆ ಹೆರೆದಿಟ್ಟ ಒಂದ್ರಾಶಿ ಕಾಯಿಗೆ ಹಾಕಬೇಕಾದ ಮಸಾಲೆಯಾದರೂ ಏನು ಅಂತಲೂ ಮಂಡೆಗೆ ಹೋಗುತ್ತಿಲ್ಲವಂತೆ ನೋಡಿ’ ಎಂದು ನಗು ಮುಂದುವರಿಸಿದಳು.
Related Articles
Advertisement
ನಮ್ಮಲ್ಲಿ ಸಮಾರಂಭಗಳ ಮುನ್ನಾ ದಿನದ ರಾತ್ರೆ ಈ ತರಕಾರಿ ಕತ್ತರಿಸುವುದೇ ಒಂದು ಗೌಜು. ಆಪೆ¤àಷ್ಟರು ಮನೆಗೆ ಬರುವಾಗ ತಮ್ಮ ಮನೆಗಳಿಂದ ತರಕಾರಿ ಕತ್ತರಿಸಲು ಬೇಕಾದ ಚಾಕುಚೂರಿಗಳನ್ನು ತೆಗೆದುಕೊಂಡೇ ಬರುವುದು. ಅಡುಗೆಯ ಭಟ್ಟರ ಮೇಲ್ವಿಚಾರಿಕೆಯಲ್ಲಿ ಮರುದಿನದ ಅಡುಗೆಯ ಅಟ್ಟಣೆಗೆ ಬೇಕಾಗುವುದೆಷ್ಟು ಎಂಬಳತೆಯಂತೆ ತಂದ ತರಕಾರಿಗಳು ಬಂದವರೆದುರು ಕುಳಿತುಕೊಳ್ಳುತ್ತಿದ್ದವು. ಮೆಟ್ಟುಕತ್ತಿಯಲ್ಲಿ ಕುಳಿತ ಗಟ್ಟಿಗರಿಗೆ ದೊಡ್ಡ ಗಾತ್ರದ ಗಟ್ಟಿ ತರಕಾರಿಗಳು. ಅವರು ಸಿಪ್ಪೆಯನ್ನೋ, ಬೀಜಗಳನ್ನೋ ತೆಗೆದು ಪಕ್ಕದಲ್ಲಿಟ್ಟುಬಿಟ್ಟರಾಯಿತು. ಮುಂದಿನ ಕೆಲಸಕ್ಕೆ ಮಣೆಯೆದುರು ಚಾಕು ಹಿಡಿದು ಕುಳಿತವರಿಗೆ ಖೋ.
ಎಷ್ಟು ದೊಡ್ಡಕ್ಕೆ ಹೆಚ್ಚಬೇಕು ಎಂಬುದಕ್ಕೆ ಒಂದಿಬ್ಬರು ಕತ್ತರಿಸಿ ತೋರಿಸುವವರೂ ಇರಬಹುದು. ಅದಿಲ್ಲದಿದ್ದರೂ ಅಕ್ಕಪಕ್ಕದ ಸಮಾಚಾರ ಮಾತನಾಡುತ್ತ ಕುತ್ತಿಗೆ ಬಗ್ಗಿಸಿ ಎಲ್ಲರೂ ಕತ್ತರಿಸಿದ ತರಕಾರಿ ತುಂಡುಗಳು ಪಾತ್ರೆ ತುಂಬಿದಾಗ ಅಚ್ಚರಿಯೆಂಬಂತೆ ಒಂದೇ ಅಳತೆ. ಮುಖ ಕಂಡರೇ ಆಗದಷ್ಟು ಸಿಟ್ಟಿರುವ ಎದುರು ಮನೆಯವ ಕತ್ತರಿಸಿದ ತರಕಾರಿ ತುಂಡು, ಇವನು ಕತ್ತರಿಸಿದ ತರಕಾರಿ ತುಂಡಿನ ಪಕ್ಕದಲ್ಲಿ ಕುಳಿತು ನಗುತ್ತಿದ್ದರೆ ಒಂದು ಕ್ಷಣಕ್ಕೆ ಅವರಿಗೇ ದ್ವೇಷ ಮರೆಯಬೇಕು ಅಂಥ ಸಾಮ್ಯ!
ಅವಳೊಬ್ಬಳಿದ್ದಳು. ಎಲ್ಲದಕ್ಕೂ ಪ್ರಶ್ನೆ ಮಾಡಬೇಕು. ಹಿರಿಯರು ಹೇಳಿದ್ದಕ್ಕೆಲ್ಲಾ ಸೈ ಅನ್ನಬಾರದು ಎಂದವಳ ಹಠ. “”ನಾಳೆ ನನ್ನ ಟಿಫಿನ್ ಬಾಕ್ಸಿಗೆ ಅವಿಯಲ್ ಮಾಡಿ ಕೊಡ್ತೀಯಾ, ಅಮ್ಮಾ?” ಎಂದು ಶಾಲೆಯಿಂದ ಬಂದ ಮಗಳು ಬೆನ್ನಿನ ಬ್ಯಾಗಿಗೆ ಇಳಿಸದೇ ಕೇಳಿದ್ದಳು. ಮಗಳು ಹೇಳಿದ್ದನ್ನು ಮಾಡದಿರುವುದುಂಟೆ? “ಸೈ’ ಎಂದ ಅವಳು ಮರೆತಿದ್ದ ಅಡುಗೆಯನ್ನು ನೆನಪಿಸಿಕೊಳ್ಳಲು ಈಗಿನವರ ಅಡುಗೆ ಪುಸ್ತಕವಾದ ಯೂ ಟ್ಯೂಬಿಗೆ ಮೊರೆ ಹೊಕ್ಕಳು. ಒಂದಷ್ಟು ಜನ ಮಾಡಿದ ವೀಡಿಯೋಗಳನ್ನು ನೋಡಿದ್ದಾಯಿತು. ಮಾಡುವ ವಿಧಾನ ಕಲಿತದ್ದೂ ಆಯಿತು. ತರಹೇವಾರಿ ತರಕಾರಿಗಳನ್ನು ಕತ್ತರಿಸಲು ಕುಳಿತಳು. ಎಲ್ಲವೂ ಉದ್ದುದ್ದಕ್ಕೆ ಕತ್ತರಿಸಿ ಎಂದೇ ವೀಡಿಯೋ ಪಾಠ ಮಾಡಿತ್ತು. ಅದನ್ನೆಲ್ಲ ಕೇಳಲೇಬೇಕೆ? ನನಗೆ ಬೇಕಾದಂತೆ ಕತ್ತರಿಸುತ್ತೇನೆ ಎಂದುಕೊಂಡವಳು ಎಲ್ಲವನ್ನೂ ತರಕಾರಿ ಕತ್ತರಿಸುವ ಮೆಷಿನ್ನಿಗೆ ಹಾಕಿ ಹೊರತೆಗೆದಳು. ಸಣ್ಣಕ್ಕೆ ಹುಡಿ ಹುಡಿಯಾದ ತರಕಾರಿ. ಮತ್ತುಳಿದದ್ದೆಲ್ಲ ಅವಿಯಲ್ ಮಾಡುವ ಬಗೆಯೇ.
ಮರುದಿನ ಬೆಳಗ್ಗೆ ಅವಿಯಲ್ಲಿನ ಪರಿಮಳಕ್ಕೆ ಮಾರು ಹೋಗುತ್ತ ಎದ್ದು ಬಂದ ಮಗಳು ಪಾತ್ರೆಯ ಮುಚ್ಚಳ ಸರಿಸಿದರೆ, ಮಡ್ಡಿ ಬೇಯಿಸಿದಂತೆ ಬೆಂದು ಮುದ್ದೆಯಾದ ತರಕಾರಿ ರಾಶಿ. ಮೊದಲ ದಿನ ಶಾಲೆಯಲ್ಲಿ ತಂದಿದ್ದ ಗೆಳತಿಯ ಬಾಕ್ಸಿನಲ್ಲಿ ಗೀಟು ಹಿಡಿದು ಕತ್ತರಿಸಿದಂತಿದ್ದ ಉದ್ದುದ್ದ ತುಂಡುಗಳನ್ನು ನೋಡಿಯೇ ಬಾಯಲ್ಲಿ ನೀರಿಳಿಸಿಕೊಂಡಿದ್ದ ಮಗಳೀಗ, “ಇದಲ್ಲ ಅವಿಯಲ್. ಅದರಲ್ಲಿ ಉದ್ದುದ್ದ ತುಂಡಿತ್ತು ಅದೇ ಬೇಕು, ಅದಿಲ್ಲದೇ ಶಾಲೆಗೆ ಹೋಗುವುದಿಲ್ಲ’ ಎಂದು ಕುಳಿತೇಬಿಟ್ಟಳು. ಎಲ್ಲೋ ತಪ್ಪಾಗಿದೆ ಎನ್ನಿಸಿದ್ದು ಆಗಲೇ.
ಪ್ರತಿ ತರಕಾರಿಯ ತುಂಡುಗಳೂ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡೇ ಅಡುಗೆಯೊಂದಕ್ಕೆ, ಬಣ್ಣ ರುಚಿಯನ್ನು ನೀಡುತ್ತವೆ. ನಾವು ಕೂಡ ಅಮ್ಮ, ಅಕ್ಕ, ತಂಗಿ, ಮಡದಿ, ಅತ್ತೆ, ಅಜ್ಜಿ ಎಂಬೆಲ್ಲಾ ಹಲವು ಅವತಾರಗಳನ್ನು ಎತ್ತಬೇಕಾದರೆ ನಮ್ಮತನವನ್ನುಳಿಸಿಕೊಂಡು ಆಯಾ ಆಕಾರಕ್ಕೆ ಕತ್ತರಿಸಿಕೊಂಡಾಗಲೇ ಯಶಸ್ವಿಯಾಗುವುದು.
ಅನಿತಾ ನರೇಶ ಮಂಚಿ