ಸಂಜೆಯ ಹೊತ್ತದು. ಒಂದು ಪಕ್ಕದಲ್ಲಿ ಬೆಳಗ್ಗೆ ನೆನೆ ಹಾಕಿದ ಅಕ್ಕಿಯೋ, ಬೇಳೆಯೋ, ಅದರ ಎದುರೊಂದು ನೀರಿನ ಪಾತ್ರೆ, ನೀರಿನ ಪಾತ್ರೆಯೊಳಗೆ ತೇಲುವ ನೊಂಪಾದ ತೆಂಗಿನಕರಟ, ಅದರಾಚೆ ತಟ್ಟೆಯೊಂದರಲ್ಲಿ ಉಪ್ಪು, ಎಲ್ಲಾ ಸಿದ್ಧವಾಯಿತೇ ಎಂದು ಇನ್ನೊಮ್ಮೆ ನೋಡಿ ಕಾಯಿ ಹೆರೆಯುವ ತುರಿಮಣೆಯೋ, ಮೆಟ್ಟುಗತ್ತಿಯೋ ಏನಾದರೊಂದನ್ನು ಕಡೆಯುವ ಕಲ್ಲಿನ ಎದುರಿಟ್ಟು ಆಕೆ ಕುಳಿತುಕೊಳ್ಳುತ್ತಿದ್ದಳು. ರುಬ್ಬುವ ಗುಂಡಿನ ಸುತ್ತಿಗೂ ನುಣ್ಣಗಾಗಬೇಕಿರುವ ಸಾಮಗ್ರಿಯನ್ನು ಹರವಿದರಾಯಿತು. ಮತ್ತೆಲ್ಲ ಕೆಲಸ ಎರಡೂ ಕೈಗಳಿಗೇ. ಆ ಹೊತ್ತಿನಲ್ಲಿ ಆಕೆ ಆ ದಿನ ತಾನು ಮಾಡಲೇಬೇಕಾಗಿರುವ ಕೆಲಸಗಳ ಬಗ್ಗೆ ಯೋಚಿಸುತ್ತಿರಲಿಲ್ಲ. ಇನ್ನೆಂದಿಗೂ ಬಾರದಿರುವ ತನ್ನ ಬಾಲ್ಯವೋ, ಕಳೆದುಹೋದ ಹರೆಯದ ರಭಸವೋ, ಮುಂದಿನ ಭವಿಷ್ಯವೋ ಆಕೆಯನ್ನು ಕಾಡುತ್ತಿರಲಿಲ್ಲ. ಆಕೆಯ ಯೋಚನೆ ಇದ್ದುದು ಪಕ್ಕದಲ್ಲಿ ಕಾಯುತ್ತ ಕುಳಿತ ತನ್ನ ಕರುಳ ಕುಡಿಗಳಿಗೆ ತಾನೀಗ ಹೇಳಲೇಬೇಕಿರುವ ಕಥೆ ಯಾವುದು ಎಂಬ ಬಗ್ಗೆ ಮಾತ್ರ.
ಪುಣ್ಯಕೋಟಿ ಕಥೆ ಕೇಳಿ ಮಕ್ಕಳು ಅಳುತ್ತಿದ್ದರೆ, ಆಕೆಯ ಸೆರಗೂ ಕಥೆ ಹೇಳುತ್ತಲೇ ಕಣ್ಣಿನತ್ತ ಚಲಿಸುತ್ತಿತ್ತು. ಅದ್ಯಾವುದೋ ರಾಜಕುಮಾರಿಯನ್ನು, ರಾಜಕುಮಾರನೊಬ್ಬ ಏಳು ಸಾಗರದಾಚೆಯ ಏಳು ಬೆಟ್ಟಗಳನ್ನು ದಾಟಿ, ಅಲ್ಲಿದ್ದ ಒಂಟಿ ಕಣ್ಣಿನ ರಕ್ಕಸನನ್ನು ಕೊಂದು ಕೋಟೆಯ ಒಳಗಿಂದ ರಾಜಕುಮಾರಿಯ ಕೈಹಿಡಿದು ಕರೆದುಕೊಂಡು ಬರುವ ವರ್ಣನೆಗೆ ಕೇಳುತ್ತ ಕುಳಿತ ಮಕ್ಕಳು ತಾವೂ ರಾಜಕುಮಾರರೇ ಆಗಿಬಿಡುವುದಿತ್ತು.
ಕಾಡಿನ ಕಥೆಗಳ ಗಮ್ಮತ್ತಿನ ಜೊತೆ ಜೊತೆಗೆ ರಾಮಾಯಣ, ಮಹಾಭಾರತದ ಕಥೆಗಳ ಪರಿಚಯವಾಗುತ್ತಿದ್ದುದೂ ಅÇÉೇ. ಹಿಟ್ಟು ನುಣ್ಣಗಾಗುತ್ತಿದ್ದಂತೆ ನಿಲ್ಲುತ್ತಿದ್ದ ಕಥೆಯಿಂದಾಗಿ ಮಕ್ಕಳಿಗೆ ರುಬ್ಬುಕಲ್ಲಿನ ಮೇಲೇ ಸಿಟ್ಟು. ಮೊದಮೊದಲು ಮನೆಯ ಮಕ್ಕಳು ಮಾತ್ರ ಕೇಳುತ್ತಿದ್ದ ಆಕೆಯ ಕಥೆಗಳಿಗೆ ಅಕ್ಕಪಕ್ಕದ ಮಕ್ಕಳ ಕಿವಿಗಳೂ ತೆರೆದುಕೊಂಡಿದ್ದು ಆಕೆಯ ಕಥೆ ಹೇಳುವ ಕೆಲಸಕ್ಕೆ ಸಿಕ್ಕ ಪುರಸ್ಕಾರ. ರುಬ್ಬುಗುಂಡನ್ನು ಲೀಲಾಜಾಲವಾಗಿ ಎತ್ತಿ ಪಕ್ಕಕ್ಕಿಟ್ಟು ಹಿಟ್ಟನ್ನೆಲ್ಲ ಪಾತ್ರೆಗೆ ಬಳಿದುಕೊಳ್ಳುವಾಗಲೇ ಆಕೆಯೂ ಕಥಾಲೋಕದಿಂದ ವಾಸ್ತವಕ್ಕೆ ಮರಳುತ್ತಿದ್ದುದು.
ಕದ್ದುಮುಚ್ಚಿ ಮನೆಯವರ ಅರಿವಿಗೆ ಬಾರದಂತೆ ತನ್ನ ತವರಿಂದ ತಂದ ಪುಸ್ತಕವೊಂದನ್ನು ಓದಬೇಕಾದ ಅನಿವಾರ್ಯತೆ ಅವಳಿಗೆ. ಕಥೆ-ಕಾದಂಬರಿಗಳನ್ನು ಓದಿಯೇ ಹೆಣ್ಣುಮಕ್ಕಳು ಹಾಳಾಗುವುದು ಎಂದು ದಿನಕ್ಕೆ ಹತ್ತಾರು ಬಾರಿ ಹೇಳುವ ಮನೆಯ ಹಿರಿಯರ ಕಣ್ಣು ತಪ್ಪಿಸಿ ಓದುವುದು ಆಕೆಗಷ್ಟು ಸುಲಭದ್ದೂ ಆಗಿರಲಿಲ್ಲ. ಬಟ್ಟೆ ಒಗೆಯಲೆಂದು ಪಕ್ಕದ ಹಳ್ಳಕ್ಕೆ ಹೊರಡುವಾಗ ಒಗೆಯದ ಬಟ್ಟೆಗಳ ರಾಶಿಯ ಕೆಳಗೆ ಪುಸ್ತಕ, ಬಡಬಡನೆ ಬಟ್ಟೆ ಒಗೆದು ಪಕ್ಕದ ಬಂಡೆಗೆ ಹರವಿ, ನೀರಿಗೆ ಬೇರಿಳಿಬಿಟ್ಟ ಕೆಂಡಸಂಪಿಗೆ ಮರಕ್ಕೊರಗಿ ಪುಸ್ತಕ ಹಿಡಿದಳೆಂದರೆ ಅದೊಂದು ರೀತಿಯ ಧ್ಯಾನದಂತೆ. ಒಂದೊಂದೇ ಪದಗಳನ್ನು ಒಳಗಿಳಿಸಿಕೊಂಡು ಓದುತ್ತಿದ್ದವಳವಳು. ಅವಳ ಜೊತೆಗಾತಿಯರು ಅವಳ ಕಾವಲಿಗೆ ಕುಳಿತು ಮನೆಮಂದಿ ಬಂದರೆ ಸೂಚನೆ ಕೊಡುತ್ತಿದ್ದರು. ಯಾಕೆಂದರೆ, ಅವಳು ಅಂದು ಓದಿದ ಕಥೆಯನ್ನು ಅವರಿಗೂ ಹೇಳಬೇಕಿತ್ತಲ್ಲ. ಮತ್ತದೇ ರೀತಿ ಬಟ್ಟೆಯ ಗಂಟಿನೊಳಗೇ ಬಚ್ಚಿಟ್ಟುಕೊಂಡು ಮನೆಗೆ ಸಾಗಿ ಅವಳ ಕಬ್ಬಿಣದ ಕವಾಟಿನೊಳಗೆ ಬಂಧಿಯಾಗುತ್ತಿದ್ದ ಪುಸ್ತಕ ತವರ ದಾರಿ ಹಿಡಿಯುವವರೆಗೂ ಹೀಗೆ ಕಣ್ಣಾಮುಚ್ಚಾಲೆಯಲ್ಲಿಯೇ ಬದುಕುತ್ತಿತ್ತು.
ಇದೀಗ ಮೊಮ್ಮಗಳ ಮನೆಗೆ ಬಂದ ಅಜ್ಜಿಗೆ ಕನ್ನಡಕ ಹಾಕಿದರೂ ಕಣ್ಣು ಮಂದವಾಗಿಯೇ ಕಾಣಿಸುತ್ತಿದ್ದುದು. ಅಕ್ಷರ ಪ್ರೀತಿಯ ಅವಳು ಪುಸ್ತಕಗಳನ್ನು ಅವರಿವರ ಮನೆಯಿಂದ ಕಾಡಿಬೇಡಿ ತಂದು ಓದಿ¨ªೆಷ್ಟೋ ಅಷ್ಟೇ. ಮೊಮ್ಮಗಳ ಮನೆಯ ಕವಾಟಿನಲ್ಲಿ ತುಂಬಿಟ್ಟಿರುವ ರಾಶಿ ರಾಶಿ ಪುಸ್ತಕ ಅವಳಿಗೆ ಹೊನ್ನ ಕೊಪ್ಪರಿಗೆಯಂತೆ ಕಂಡುದರಲ್ಲಿ ಅಚ್ಚರಿಯಿಲ್ಲ. ಅಜ್ಜಿಯ ಪುಸ್ತಕ ಓದುವ ಹುಚ್ಚು ಮೊಮ್ಮಗಳಿಗೂ ಗೊತ್ತಿಲ್ಲದ್ದೇನಲ್ಲ. ತನ್ನ ಬಾಲ್ಯದಲ್ಲಿ ಇದೇ ಅಜ್ಜಿ ತಾನೇ ಹುಟ್ಟುಹಾಕಿದ ಕಥೆಗಳನ್ನು ಹೇಳುತ್ತಿದ್ದುದೂ ನೆನಪಿತ್ತಲ್ಲ. ಸಂಜೆ ಆಫೀಸಿನಿಂದ ಬಂದವಳೇ ಅಜ್ಜಿಯ ಕೈಗಿಷ್ಟು ಬಿಡಿ ಮಲ್ಲಿಗೆ ಹೂಗಳನ್ನು ಕೊಟ್ಟು, ಪಕ್ಕದಲ್ಲೇ ಕುಳಿತುಬಿಡುತ್ತಿದ್ದಳು. ಅಜ್ಜಿಗಿಷ್ಟದ ಕಾದಂಬರಿಗಳನ್ನಾಕೆ ದೊಡ್ಡದಾಗಿ ಓದುತ್ತ ಹೋದಂತೆ ಅಜ್ಜಿಯ ಕೈಯಲ್ಲಿದ್ದ ಬಿಡಿ ಹೂಗಳು ಮಾಲೆಯಾಗುತ್ತಾ ಹೋಗುತ್ತಿತ್ತು. ಮಾಲೆ ಕಟ್ಟಿ ಆಗುವವರೆಗೆ ಕಥೆ. ನಾಳೆಯಿಂದ ಹೆಚ್ಚು ಮಲ್ಲಿಗೆ ತಂದುಕೊಡುವಂತೆ ಆದೇಶ ಅಜ್ಜಿಯದ್ದು.
ಆಫೀಸು, ಮನೆ, ಕೆಲಸಗಳ ಮಧ್ಯೆ ಸಿಕ್ಕ ಬಿಡುವಿನಲ್ಲಿ ಆಕೆಗೆ ಪುಸ್ತಕದಂಗಡಿಗೆ ನುಗ್ಗುವುದೆಂದರೆ ಇಷ್ಟ. ತನ್ನ ಬಾಲ್ಯದಲ್ಲಿ ತಾನೆಂದೂ ಹೊಸ ಪುಸ್ತಕದ ಪರಿಮಳವನ್ನು ಆಘ್ರಾಣಿಸಿದ್ದೇ ನೆನಪಿರದ ಆಕೆಗೆ ಆ ಭಾಗ್ಯವನ್ನು ನೀಡುವ ಕಾತರ ಮಕ್ಕಳಿಗೆ. ಮಕ್ಕಳಿಗೆಂದು ಪುಸ್ತಕ ಹುಡುಕವವಳಿಗೀಗ ನೂರು ಕಣ್ಣು. ಮಕ್ಕಳು ಓದುವ ಕಥೆಗಳಲ್ಲಿ ಮಾನವೀಯ ಮೌಲ್ಯವಿರಬೇಕು ಎಂದೆಲ್ಲಾ ತಡಕಾಡುತ್ತ ಹೊತ್ತು ಕಳೆದೇಬಿಡುತ್ತಿದ್ದಳು. ಮಕ್ಕಳ್ಳೋ ಈಗಿನವು. ಮೊಬೈಲಿನ ಗುಂಡಿಗಳನ್ನೊತ್ತುತ್ತಲೇ ವಿಡಿಯೋ ಗೇಮುಗಳ ಹೊಡಿಬಡಿಯನ್ನು ಆಡುವುದೇ ಅವರಿಗೆ ಪ್ರಿಯ. ಓದುವುದಕ್ಕಿಂತಲೂ ದೃಶ್ಯ ಮಾಧ್ಯಮದ ಮೂಲಕ ನೋಡುವುದೇ ಅತಿ ಪ್ರಿಯವಾದುದವರಿಗೆ. ಅಕ್ಷರಗಳಿರುವುದು ಕೇವಲ ಪರೀಕ್ಷೆಯಲ್ಲಿ ಉತ್ತರಗಳನ್ನು ಬರೆಯಲು ಮಾತ್ರವೇ ಎಂದುಕೊಂಡು ಕಥೆಗಳನ್ನೋದುವ ಸುಖದಿಂದ ವಂಚಿತರಾಗುವ ಮಕ್ಕಳ ಬಗೆಗೆ ಆಕೆಗೆ ಖೇದ. ತನ್ನ ಬಾಲ್ಯದಂತೆ ಹಿರಿಯರಿಂದ ಕೇಳಿಸಿಕೊಳ್ಳುತ್ತಿದ್ದ ಕಥೆಗಳ ಲೋಕಕ್ಕೆ ಮಕ್ಕಳನ್ನೂ ಎಳೆದೊಯ್ಯುವ ಆತುರ ಆಕೆಯದ್ದು. ತಾನಾರಿಸಿ ತಂದ ಪುಸ್ತಕಗಳ ಕಥೆಯನ್ನು ಅಭಿನಯ ಸಮೇತ ಹೇಳುತ್ತಾ ಮಕ್ಕಳ ಮನಸ್ಸನ್ನು ಕದ್ದಿದ್ದು ಸಾಮಾನ್ಯ ಸಾಧನೆಯಂತೂ ಆಗಿರಲಿಲ್ಲ ಎಂಬುದೇ ಸಮಾಧಾನ.
ಹೊಗೆ ಮುಸುಕಿದ ಅಡುಗೆ ಮನೆಯಿಂದ ಹೊರಗೆ ಕಾಲಿಡಲೂ ಸಮಯವಿಲ್ಲದ ಅವಳಿಗೆ ಬದುಕನ್ನು ಸಹನೀಯಗೊಳಿಸಿದ್ದು ಗಂಡ ಲೈಬ್ರರಿಯಿಂದ ಹೆಂಡತಿಗೆಂದೇ ತರುತ್ತಿದ್ದ ಕಥೆಯ ಪುಸ್ತಕಗಳು. ತವರ ಮನೆಯವರಿಗೆ ತಮ್ಮ ಮಗಳನ್ನು ಅಳಿಯ ತುಂಬಾ ಪ್ರೀತಿಸುತ್ತಿದ್ದಾನೆ ಎಂಬುದಕ್ಕೆ ಸಾಕ್ಷಿ ಹೇಳುತ್ತಿದ್ದುದು ಆತ ತರುತ್ತಿದ್ದ ಪುಸ್ತಕಗಳೇ. ಅಕ್ಷರಗಳನ್ನು ಕಣ್ಣಿಂದ ನೋಡುವುದೂ ಭಾಗ್ಯವೆಂದುಕೊಂಡಿದ್ದ ಆ ಸಮಯದಲ್ಲಿ ಅವಳ ಬಿಡುವಿನ ವೇಳೆಯನ್ನು ಈ ಪುಸ್ತಕಗಳು ಆವರಿಸುತ್ತಿದ್ದವೋ, ಅಥವಾ ಓದಲೆಂದೇ ಬಿಡುವು ಮಾಡಿಕೊಳ್ಳುತ್ತಿದ್ದಳ್ಳೋ ಗೊತ್ತಿಲ್ಲ.
ಅಂದು ಓದುವುದೇ ಕಷ್ಟವಾಗಿದ್ದ ಕಾಲವೊಂದಿತ್ತೆಂಬುದೂ ನೆನಪಾಗದಂತೆ ಈಗ ಅದೇ ಅಕ್ಷರಗಳು ತಮ್ಮನ್ನು ತಬ್ಬಿದವರ ಕೈ ಕೂಸುಗಳಾಗುತ್ತಿರುವುದೂ, ಅವರ ಪ್ರೀತಿಗೆ ಮನಸೋತಿರುವುದೂ ಸಿಹಿ ಸತ್ಯ.
-ಅನಿತಾ ನರೇಶ ಮಂಚಿ