Advertisement

ಕೈಗಾರಿಕೆ ತಂದು 25 ಸಾವಿರ ಮಂದಿಗೆ ನೌಕರಿ ಕಲಿಸುವ

02:16 PM May 03, 2018 | |

 ತಾವು ಕ್ಷೇತ್ರದ ಶಾಸಕರಾಗಿ 5 ವರ್ಷದಲ್ಲಿ ಭವಿಷ್ಯದ ಪೀಳಿಗೆ ಗುರುತಿಸುವಂತಹ ಅಭಿವೃದ್ಧಿ ಏನಾಗಿದೆ?
ಜಿಲ್ಲೆಗೆ ಮೆಡಿಕಲ್‌ ಕಾಲೇಜು ಮಂಜೂರಾಗಿರು ವುದು. ಮಹಿಳಾ ಪದವಿ ಕಾಲೇಜು ಮಂಜೂರಾಗಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಜಿಲ್ಲಾಸ್ಪತ್ರೆ, ಹೊಸ ಬಸ್‌ ನಿಲ್ದಾಣ, ತಾಯಿ ಮಕ್ಕಳ ಆಸ್ಪತ್ರೆ, ವಿಶೇಷವಾಗಿ ಮುದ್ದೇನಹಳ್ಳಿ ಸಮೀಪ ಸರ್‌ ಎಂವಿ ವಿಶ್ವೇಶ್ವರಯ್ಯ ಹೆಸರಿನಲ್ಲಿ ತಾಂತ್ರಿಕ ಶಿಕ್ಷಣ ಸಂಶೋಧನೆ ಕೇಂದ್ರ ನಿರ್ಮಾಣ, ಜಿಲ್ಲಾ ಕೇಂದ್ರಕ್ಕೆ 100 ಕೋಟಿ ರೂ.ಗೂ ಮೀರಿ ಅನುದಾನ ತಂದಿದ್ದೇನೆ.

Advertisement

 ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಶಾಸಕರಾಗಿ ಯಾರೂ ಪುನರಾಯ್ಕೆ ಆಗಿಲ್ಲ ಎಂಬ ಮಾತಿದೆ?
ಯಾರು ಅಭಿವೃದ್ಧಿ ಪರ ನಿಂತು ಸಾಮಾಜಿಕ ನ್ಯಾಯ ಎತ್ತಿ ಹಿಡಿದಿದ್ದಾರೆ, ಅವರ ಕೈ ಹಿಡಿಯುತ್ತಾರೆ, ಅವರಿಗೆ ಪೂರ್ಣ ಬೆಂಬಲ ನೀಡಿ ಕ್ಷೇತ್ರದಲ್ಲಿರುವ ಇತಿಹಾಸವನ್ನು ಜನರೇ ಮುರಿಯುತ್ತಾರೆ ಎಂಬ ವಿಶ್ವಾಸವಿದೆ.

ಎರಡನೇ ಬಾರಿಗೆ ಶಾಸಕರಾದರೆ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ದೂರದೃಷ್ಟಿ ಏನು?
ಈ ಭಾಗಕ್ಕೆ ಶಾಶ್ವತ ನೀರಾವರಿ ಕಲ್ಪಿಸುವುದು, ಸದ್ಯ ಅನುಷ್ಠಾನದಲ್ಲಿರುವ ಎತ್ತಿನಹೊಳೆ ಯೋಜನೆಗೆ ಬೇಕಾದ ಅನುದಾನವನ್ನು ಬಿಡುಗೊಳಿಸಿ 2 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಈ ಭಾಗಕ್ಕೆ ಕುಡಿಯುವ ನೀರು ಕಲ್ಪಿಸುವುದು ನನ್ನ ಆದ್ಯತೆ. 8 ತಿಂಗಳ ಒಳಗೆ ತಾಲೂಕಿನ 26 ಕೆರೆಗಳಿಗೆ ಸಂಸ್ಕರಿಸಿದ ಕೊಳಚೆ ನೀರು ಹರಿಸಿ ಈ ಭಾಗದಲ್ಲಿ ಅಂತರ್ಜಲ ವೃದ್ಧಿಸುವುದು, ಕ್ಷೇತ್ರದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಿ ಕ್ಷೇತ್ರದಲ್ಲಿನ ಕನಿಷ್ಠ 25 ಸಾವಿರ ಯುವಕ, ಯುವತಿ ಯರಿಗೆ ಉದ್ಯೋಗ ಕಲ್ಪಿಸುವುದು ನನ್ನ ಗುರಿ.

 ತಾವು ಶಾಸಕರಾಗಿ ಕಳೆದ 5 ವರ್ಷಗಳ ಕ್ಷೇತ್ರದ ಅಭಿವೃದ್ಧಿ, ನಿಮ್ಮ ನಿರೀಕ್ಷೆಗಳ ಈಡೇರಿಕೆ ವಿಚಾರದಲ್ಲಿ ತೃಪ್ತಿ ತಂದಿದೆಯೆ?
ನನ್ನ ನಿರೀಕ್ಷೆಗಳು, ಕನಸುಗಳು ಸಾಕಷ್ಟಿವೆ. ಆದರೆ, ಸರ್ಕಾರದ ವಿಧಿ ವಿಧಾನಗಳು, ಅಧಿಕಾರಶಾಹಿ ಧೋರಣೆಯಿಂದ ಕೆಲವು ನಿಧಾನವಾಗಿವೆ. ಜತೆಗೆ ಐದು ವರ್ಷದಲ್ಲಿ ಎದುರಾದ ಹಲವು ಚುನಾವಣೆಗಳ ನೀತಿ ಸಂಹಿತೆಯಿಂದ ನಮಗೆ ಕೆಲಸ ಮಾಡಲು ಸಮಯ ಸಿಗಲಿಲ್ಲ. ಆದರೂ ನನ್ನ ಶಕ್ತಿ ಮೀರಿ ಅಭಿವೃದ್ಧಿಗೆ ಶ್ರಮಿಸಿದ್ದೇನೆಂಬ ಸಂತೃಪ್ತಿ ನನಗಿದೆ.

ಈ ಬಾರಿ ಚುನಾವಣೆಯಲ್ಲಿ ನಿಮ್ಮ ಗೆಲುವುಗೆ ಶ್ರೀರಕ್ಷೆ ಯಾವುದು? 
ಕ್ಷೇತ್ರದಲ್ಲಿ ಕಳೆದ 5 ವರ್ಷದಲ್ಲಿ ಆಗಿರುವ ಸಾವಿರಾರು ಕೋಟಿ ರೂ. ವೆಚ್ಚದ ಅಭಿವೃದ್ಧಿ, ಸಾಮಾಜಿಕ ನ್ಯಾಯದಡಿ ಆಡಳಿತ, ಮಹಿಳಾ ಸಬಲೀಕರಣ, ಯುವಕರ ಸಬಲೀಕರಣ, ಮುಖ್ಯವಾಗಿ ರೈತರಿಗೆ ನೀರು ತಂದುಕೊಡುವ
ಪ್ರಯತ್ನ ಹಾಗೂ ನಮ್ಮ ಕಾಂಗ್ರೆಸ್‌ ಸರ್ಕಾರದ ಐದು ವರ್ಷಗಳ ಜನಪರ ಆಡಳಿತ, ನುಡಿದಂತೆ ನಡೆದಿರುವುದು ನನಗೆ ಗೆಲುವು ತಂದುಕೊಡಲಿದೆ.

Advertisement

ನಿಮ್ಮ ಸರ್ಕಾರ ರೂಪಿಸಿರುವ ಸಂಸ್ಕರಿಸಿದ ತ್ಯಾಜ್ಯ ನೀರು ಯೋಜನೆ ಬಗ್ಗೆ ಸಾಕಷ್ಟು ವಿರೋಧ, ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ನಿಲುವು ಏನು?
ಸಂಸ್ಕರಿಸಿದ ಕೊಳಚೆ ನೀರಿನ ಬಗ್ಗೆ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಎರಡು ಬಾರಿ ಅಲ್ಲ, ಮೂರು ಬಾರಿ ಬೇಕಾದರೂ ಕೊಳಚೆ ನೀರನ್ನು ಸಂಸ್ಕರಿಸಿ ಈ ಭಾಗಕ್ಕೆ ಹರಿಸುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಅನುಮಾನ, ಗೊಂದಲ ಬೇಡ.

ಐದು ವರ್ಷಗಳ ನಿಮ್ಮ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಕೊಟ್ಟ ಒತ್ತು ಉದ್ಯೋಗಾವಕಾಶ ಒದಗಿಸುವಂತಹ ಕೈಗಾರಿಕೆಗಳ ಸ್ಥಾಪನೆಗೆ ನೀಡಲಿಲ್ಲ ಎಂಬ ಆರೋಪ ಇದೆ?
ಇದು ನಿಜ, ನಾನು ಒಪ್ಪಿಕೊಳ್ಳುತ್ತೇನೆ. ನೀರು ಇಲ್ಲದಿದ್ದರೆ ಯಾವ ಕೈಗಾರಿಕೆಗಳು ಬರಲ್ಲ ಎಂಬುದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನನ್ನ ಮೊದಲ ಆದ್ಯತೆ ನೀರಾವರಿ. ನೀರು ಬಂದ ನಂತರ ಜಮೀನು ಗುರುತಿಸಿ ಕನಿಷ್ಠ ಕ್ಷೇತ್ರದ 25 ಸಾವಿರ ಮಂದಿಗೆ ಉದ್ಯೋಗ ಒದಗಿಸುವಂತಹ ಕೈಗಾರಿಕೆ ತರಲು ಪ್ರಯತ್ನಿಸುವೆ.

 ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ನಿಮ್ಮ ವಿರೋಧಿಗಳು ಅನೇಕ ಅಪಾದನೆಗಳನ್ನು ಮಾಡುತ್ತಿದ್ದಾರೆ. ಇದು ಅವರ ಬಾಲಿಶತನದ ಪರಮಾವಧಿ, ಅವರ ಆರೋಪಗಳು ಸತ್ಯಕ್ಕೆ ದೂರ. ಆಧಾರ ರಹಿತ. ನನ್ನ ಜನಪ್ರಿಯತೆ, ಅವರ ಊಹೆಗೂ ಮೀರಿರುವುದದಿಂದ ಅದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ.
 
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಏನು ಹೇಳಕ್ಕೆ ಇಷ್ಟಪಡುತ್ತೀರಿ?
2013ರಲ್ಲಿ ನಾನೊಬ್ಬ ಯುವಕ ಅಂತ ಹೇಳಿ ನನ್ನನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಜನರ ಆಶಯಗಳಿಗೆ ಚ್ಯುತಿ ಬಾರದಂತೆ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಮುಂದಿನ 5 ವರ್ಷ ದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕನಸು ಹೊಂದಿದ್ದೇನೆ.

 ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಯನ್ನು ಯಾವುದಕ್ಕೆ ಹೋಲಿಕೆ ಮಾಡುತ್ತಿರಿ? ಇದೊಂದು ಧರ್ಮಯುದ್ಧ ಅಂತ ಭಾವಿಸಿದ್ದೇನೆ. ಈ ಚುನಾವಣೆಯಲ್ಲಿ ನನ್ನ ಹೋರಾಟ ಭೂಗಳ್ಳರ, ಮದ್ಯದ ದೊರೆಗಳ ಹಾಗೂ ಜಾತಿವಾದಿಗಳ ವಿರುದ್ಧವಾಗಿದೆ. ನನ್ನ ಹೋರಾಟ ಜನಪರ ಹಾಗೂ ಸಾಮಾಜಿಕ ನ್ಯಾಯದ ಪರವಾಗಿದೆ. ಈ ವಿಚಾರದಲ್ಲಿ ರಾಜೀ ಇಲ್ಲದ ಹೋರಾಟ ಮಾಡುತ್ತೇನೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next