Advertisement

ಹೈಕೋರ್ಟ್‌ ಮೆಟ್ಟಿಲೇರಿದ ಇಂದಿರಾ ಕ್ಯಾಂಟೀನ್‌ ವಿವಾದ

10:41 AM Aug 10, 2017 | Team Udayavani |

ಬೆಂಗಳೂರು: ಜಕ್ಕಸಂದ್ರ ವಾರ್ಡ್‌ನಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್‌ನ ಅಡುಗೆ ಕೋಣೆ ಜಾಗದಲ್ಲಿ ತಮ್ಮ ಜಮೀನು ಇದೆ ಎಂದು ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ಕೆ.ಎ.ಕೃಷ್ಣಮೂರ್ತಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ಪೀಠ, ಇಂದಿರಾ ಕ್ಯಾಂಟೀನ್‌ ಜಾಗ ಸೇರಿ ಸುತ್ತಲ 1 ಎಕರೆ 6 ಗುಂಟೆ ಜಾಗವನ್ನು ಬೆಂ.ದಕ್ಷಿಣ ತಾಲೂಕು ತಹಶೀಲ್ದಾರ್‌ ಸರ್ವೇ ನಡೆಸಿ, ಅರ್ಜಿದಾರರಿಗೆ ಸೇರಿದ ಜಾಗ ಎಲ್ಲಿ ಬರಲಿದೆ ಎಂಬ ಬಗ್ಗೆ ಮುಂದಿನ
ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿ ಬಿಬಿಎಂಪಿ ಹಾಗೂ ತಹಶೀಲ್ದಾರ್‌ಗೆ ನೋಟಿಸ್‌ ಜಾರಿಗೊಳಿಸಿ ಆಗಸ್ಟ್‌ 30ಕ್ಕೆ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ, ರಾಜ್ಯಸರ್ಕಾರ ಬಡವರಿಗಾಗಿ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಿದ್ದು, ಕ್ಯಾಂಟೀನ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅಲ್ಲದೆ ಕ್ಯಾಂಟೀನ್‌ನ ಅಡುಗೆಕೋಣೆ ನಿರ್ಮಾಣ ಜಾಗವು ಅರ್ಜಿದಾರರಿಗೆ ಸೇರಿಲ್ಲ, ಒಟ್ಟಾರೆ 1 ಎಕರೆ 6 ಗುಂಟೆ ಜಾಗದಲ್ಲಿ ಗಣಪತಿ ದೇವಾಲಯ,
ಉದ್ಯಾನವನದ ಜಾಗವಾಗಿದ್ದು 4,600 ಚದರ ಅಡಿಯಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್‌ ನಿರ್ಮಾಣವಾಗುತ್ತಿದೆ. ಜೊತೆಗೆ
ಅರ್ಜಿದಾರರಿಗೂ ತಮಗೆ ಸೇರಿದ 20 ಗುಂಟೆ ಜಾಗ ಎಲ್ಲಿ ಬರಲಿದೆ ಎಂಬ ಮಾಹಿತಿಯಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯ ಪೀಠ, ಮೊದಲು ಅರ್ಜಿದಾರರಿಗೆ 1 ಎಕರೆ ಪ್ರದೇಶದಲ್ಲಿ ತಮ್ಮ ಸ್ವತ್ತು ಎಲ್ಲಿ ಬರಲಿದೆ ಎಂಬ ಬಗ್ಗೆ ಗೊತ್ತಾಗಲಿ. ಹೀಗಾಗಿ ತಹಶೀಲ್ದಾರ್‌ ಇಡೀ ಪ್ರದೇಶವನ್ನು ಸರ್ವೇ ಮಾಡಿ ಕೋರ್ಟ್‌ಗೆ ವರದಿ ನೀಡಲಿ ಎಂದು ಸೂಚಿಸಿ ಪ್ರತಿವಾದಿಗಳಿಗೆ ನೋಟೀಸ್‌ ಜಾರಿಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next