ಬೆಂಗಳೂರು: ಆಸ್ತಿ ವಿಚಾರಕ್ಕೆ ಅಣ್ಣನೇ ತಮ್ಮನಿಗೆ ಚಾಕು ಇರಿದು ಕೊಲೆಗೈದು, ಬಳಿಕ ನಾಲ್ಕನೇ ಮಹಡಿಯಿಂದ ತಳ್ಳಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾವೇರಿಪುರದ ನಿವಾಸಿ ವಿನಯ್ ಕುಮಾರ್ (31) ಕೊಲೆಯಾದವ. ಕೃತ್ಯ ಎಸಗಿದ ಆತನ ಸಹೋದರ ಸತೀಶ್ ಕುಮಾರ್ (34) ಎಂಬಾತನನ್ನು ಬಂಧಿಸಲಾಗಿದೆ.
ಕೊಲೆಯಾದ ವಿನಯ್ ಮತ್ತು ಆರೋಪಿ ಸತೀಶ್ ಸಹೋದರರು. ಸತೀಶ್ ಕುಮಾರ್ ಖಾಸಗಿ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿದ್ದು, ಸಹೋದರ ವಿನಯ್ ಕುಮಾರ್ ತಾವರೆಕೆರೆಯ ಆಸ್ಪತ್ರೆಯಲ್ಲಿ ಲ್ಯಾಬ್ ಇಟ್ಟುಕೊಂಡಿದ್ದ. ಸತೀಶ್ ಕುಮಾರ್ ಪತ್ನಿ ಜತೆ ಮನೆಯ ಮೊದಲ ಮಹಡಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದ. ವಿನಯ್, ಪೋಷಕರ ಜತೆ ಅದೇ ಮನೆಯ 4ನೇ ಮಹಡಿಯ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಸತೀಶ್ ಕುಮಾರ್ ಸಾಲ ಮಾಡಿಕೊಂಡಿದ್ದು, ಆಸ್ತಿ ಮಾರಾಟ ಮಾಡುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದ. ಆದರೆ, ವಿನಯ್ ಅದಕ್ಕೆ ಆಕ್ಷೇಪಿಸಿದ್ದ. ಅದೇ ವಿಚಾರವಾಗಿ ಸಹೋದರ ನಡುವೆ ಜಗಳ ನಡೆಯುತ್ತಿತ್ತು. ಮಂಗಳವಾರ ಮಧ್ಯಾಹ್ನ ಕಾವೇರಿಪುರದ 5ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ಆರೋಪಿ ಸತೀಶ್ ಮದ್ಯ ಸೇವಿಸುತ್ತಿದ್ದ. ಈ ವೇಳೆ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿ ಸತೀಶ್ ಚಾಕು ತೆಗೆದುಕೊಂಡು ವಿನಯ್‌ನ ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಅಲ್ಲದೆ, ನಾಲ್ಕನೇ ಮಹಡಿಯಿಂದ ವಿನಯ್‌ನನ್ನು ತಳ್ಳಿ ಪರಾರಿಯಾಗಿದ್ದ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವಿನಯ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ:ಪ್ರತಿಭಟನೆ ನಡುವೆಯೇ ಲಂಕಾದ ಅಧ್ಯಕ್ಷರಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ
ಮದುವೆ ನಿಶ್ಚಯವಾಗಿತ್ತು
ಕೊಲೆಯಾದ ವಿನಯ್‌ಗೆ ಮೂರು ತಿಂಗಳ ಹಿಂದೆಯಷ್ಟೇ ವಿವಾಹ ನಿಶ್ಚಯವಾಗಿತ್ತು. ಕುಟುಂಬದವರು ನಿಶ್ಚಿತಾರ್ಥ ನೆರವೇರಿಸಿದ್ದರು. ಮದುವೆಗೆ ಇನ್ನು ಒಂದು ತಿಂಗಳು ಬಾಕಿ ಇತ್ತು ಎನ್ನಲಾಗಿದೆ.