Advertisement

ಜೈವಿಕ ವಿದ್ಯುತ್‌ ಘಟಕಕ್ಕೆ ಚಾಲನೆ

11:43 AM Jan 21, 2018 | |

ಬೆಂಗಳೂರು: ಯಡಿಯೂರು ವಾರ್ಡ್‌ನಲ್ಲಿ ನಿರ್ಮಿಸಿರುವ ಜೈವಿಕ ಅನಿಲದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಪ್ರಾರಂಭಗೊಂಡಿದೆ. ಯಡಿಯೂರು ವಾರ್ಡ್‌ನ ಸೌತ್‌ ಎಂಡ್‌ ವೃತ್ತದ ಬಳಿ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಅನಿಲವಾಗಿಸುವ ಘಟಕ ಸ್ಥಾಪಿಸಲಾಗಿದೆ.

Advertisement

ಘಟಕದಲ್ಲಿ ನಿತ್ಯ 4.5 ಟನ್‌ ತ್ಯಾಜ್ಯವನ್ನು ಸಂಸ್ಕರಿಸಿ ಜೈವಿಕ ಅನಿಲವಾಗಿ ಪರಿವರ್ತಿಸಲಾಗುತ್ತಿದ್ದು, ಅನಿಲವನ್ನು ಬಳಸಿ ನಿತ್ಯ 250 ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ಘಟಕವನ್ನು ಶನಿವಾರ ಕೇಂದ್ರ ಸಚಿವ ಅನಂತಕುಮಾರ್‌ ಹಾಗೂ ಮೇಯರ್‌ ಆರ್‌.ಸಂಪತ್‌ರಾಜ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅನಂತಕುಮಾರ್‌, 2015ರಿಂದಲೂ ಜೈವಿಕ ಗೊಬ್ಬರಕ್ಕೆ ಕೇಂದ್ರದಿಂದ ಸಬ್ಸಿಡಿ ನೀಡಲಾಗುತ್ತಿದೆ. ಅದೇ ರೀತಿ ದ್ರವ ರೂಪದ ಬಯೋ ಆರ್ಗಾನಿಕ್‌ಗೂ ಸಬ್ಸಿಡಿ ನೀಡಲು ಸಿದ್ಧವಿದ್ದು, ಬಿಬಿಎಂಪಿ ಮೇಯರ್‌ ವತಿಯಿಂದ ಸಬ್ಸಿಡಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರವೇ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು. 

ಮೇಯರ್‌ ಆರ್‌.ಸಂಪತ್‌ರಾಜ್‌ ಮಾತನಾಡಿ, ಪ್ರತಿಯೊಂದು ವಾರ್ಡ್‌ನಲ್ಲಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪಿಸಿದರೆ, ನಗರದಲ್ಲಿನ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಗರದಲ್ಲಿ ಪಾಲಿಕೆಯಿಂದ ಸ್ಥಾಪಿಸಲಾಗಿರುವ 13 ಜೈವಿಕ ಅನಿಲ ಘಟಕಗಳು ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದು, ಶೀಘ್ರವೇ ಅವುಗಳನ್ನು ಪುನರಾರಂಭಿಸಲಾಗುವುದು. ಅದಕ್ಕಾಗಿ ಮುಂದಿನ ಬಜೆಟ್‌ನಲ್ಲಿ 500 ಕೋಟಿ ರೂ. ಮೀಸಲಿಡಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್‌.ಆರ್‌.ರಮೇಶ್‌ ಮಾತನಾಡಿ, ತ್ಯಾಜ್ಯದಿಂದ ಉತ್ಪಾದಿಸುವ 250 ಕಿಲೋ ವ್ಯಾಟ್‌ ವಿದ್ಯುತ್‌ನ್ನು ವಾರ್ಡ್‌ನ 7 ಉದ್ಯಾನಗಳಲ್ಲಿನ ದೀಪಗಳು, ಪಾದಚಾರಿ ಮಾರ್ಗದ ಅಲಂಕಾರಿಕ ದೀಪಗಳು, 6 ಕೊಳವೆ ಬಾವಿಗಳ ಬಳಕೆಗೆ ವಿದ್ಯುತ್‌ ಬಳಸಲಾಗುತ್ತಿದೆ.

Advertisement

ಇದರಿಂದ ಪಾಲಿಕೆಗೆ ಪ್ರತಿತಿಂಗಳು ಬೆಸ್ಕಾಂಗೆ ಪಾವತಿಸಬೇಕಾದ 4 ಲಕ್ಷ ರೂ. ಮತ್ತು ವಾರ್ಡ್‌ನಲ್ಲಿ ಉತ್ಪತ್ತಿಯಾಗುವ 4.5 ಹಸಿ ತ್ಯಾಜ್ಯವನ್ನು ಕನ್ನಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಾಗಿಸಲು ವೆಚ್ಚವಾಗುತ್ತಿದ್ದ 2.5 ಲಕ್ಷ ರೂ. ಸೇರಿ ಒಟ್ಟು 6.50 ಲಕ್ಷ ರೂ. ಉಳಿತಾಯವಾಗುತ್ತಿದೆ ಎಂದು ಹೇಳಿದರು. ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌, ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸಫ್ರಾಜ್‌ ಖಾನ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

ದೀಪ ದರ್ಶನ: ಘಟಕದಲ್ಲಿ ಅಳವಳವಡಿಸಿದ ಸ್ವಿಚ್‌ ಹೊತ್ತಿದ ಕೂಡಲೇ ಘಟಕದೊಂದಿಗೆ ಅಂಬರ-ಚುಂಬನ ಗಡಿಯಾರ ಗೋಪುರ, ನವತಾರೆ ಬ್ಯಾಡ್ಮಿಂಟನ್‌ ಅಕಾಡೆಮಿ, ರಣವೀರ ಕಂಠೀರವ ಉದ್ಯಾನ, ಚೈತನ್ಯ ಉದ್ಯಾನ, ಚಂದವಳ್ಳಿಯ ತೋಟ, ಧನ್ವಂತರಿ ಉದ್ಯಾನ, ಸಂಜೀವಿನಿ ವನಗಳಲ್ಲಿ ಅಳವಡಿಸಲಾಗಿದ್ದ ದೀಪಗಳು ಹಾಗೂ ಪಾದಚಾರಿ ಮಾರ್ಗದಲ್ಲಿನ ಅಲಂಕಾರಿಕ ದೀಪಗಳು ಏಕಕಾಲದಲ್ಲಿ ಬೆಳಗಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next