Advertisement

ಜೈನಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ: ಜೈನಮುನಿ

10:27 AM Jan 26, 2020 | Suhan S |

ಹುಬ್ಬಳ್ಳಿ: ಜೈನ ಧರ್ಮದಲ್ಲಿ ತ್ಯಾಗಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ತ್ಯಾಗದ ಮಹತ್ವವನ್ನು ಜಗತ್ತಿಗೆ ತಿಳಿಸಿದ್ದೇ ನಮ್ಮ ಧರ್ಮ ಎಂದು ಆಚಾರ್ಯ ಶ್ರೀ ಮಹಾಶ್ರಮಣಜಿ ಮಹಾರಾಜ್‌ ಹೇಳಿದರು.

Advertisement

ಸಂಸ್ಕಾರ ನಗರದಲ್ಲಿ ನಡೆಯುತ್ತಿರುವ ಮರ್ಯಾದಾ ಮಹೋತ್ಸವದಲ್ಲಿ ಶನಿವಾರ ಜರುಗಿದ ಸಂತರ ಸಮಾಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭೋಗವಿಲ್ಲದ ಸಂದರ್ಭದಲ್ಲಿ ತ್ಯಾಗ ಮಾರ್ಗದಲ್ಲಿ ಸಾಗುವವನು ತ್ಯಾಗಿಯಲ್ಲ. ಭೋಗವಿದ್ದರೂ ಅದನ್ನು ಅನುಭವಿಸದೇ ತಿರಸ್ಕರಿಸುವವನೇ ನಿಜವಾದ ತ್ಯಾಗಿ ಎಂದರು.

ತ್ಯಾಗಕ್ಕೆ ಸಮಾನವಾದುದು ಮತ್ತೂಂದಿಲ್ಲ. ಜೀವನದಲ್ಲಿ ಶಾಂತಿ-ಸಮಾಧಾನ ಪಡೆಯಲು ತ್ಯಾಗ ಸಹಾಯಕವಾಗುತ್ತದೆ. ಅಹಿಂಸಾ ಪರಮೋಧರ್ಮ. ಹಿಂಸೆಯನ್ನು ತ್ಯಾಗ ಮಾಡಬೇಕು. ಸಣ್ಣ ಕ್ರಿಮಿ ಕೀಟಗಳ ಬಗ್ಗೆಯೂ ಪ್ರೀತಿ ಹೊಂದಿರಬೇಕು. ಎಲ್ಲ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು ಎಂಬುದನ್ನೇ ಜೈನ ಧರ್ಮ ಪ್ರತಿಪಾದಿಸುತ್ತದೆ ಎಂದು ತಿಳಿಸಿದರು.

ಜೀವನದಲ್ಲಿ ಶ್ರೇಷ್ಠ ದಾನ ಅಭಯದಾನ. ಮಿಥ್ಯೆಯನ್ನು ತ್ಯಾಗ ಮಾಡಬೇಕು. ರಾತ್ರಿ ಭೋಜನವನ್ನು ತ್ಯಾಗ ಮಾಡಬೇಕು. ಕಟು ಭಾಷೆ, ಹಿಂಸಾ ಭಾಷೆಯನ್ನು ತ್ಯಾಗ ಮಾಡಬೇಕು. ತ್ಯಾಗಮಯ ಜೀವನವನ್ನು ರೂಪಿಸಿಕೊಳ್ಳಬೇಕು. ಸಂಯಮ ಎಂಬುದು ರತ್ನಕ್ಕೆ ಸಮ. ಅದಕ್ಕೆ ಸಮನಾದುದು ಯಾವುದೂ ಇಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಲಿ: ವರೂರು ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜ ಮಾತನಾಡಿ, ಆಚಾರ್ಯ ಮಹಾಶ್ರಮಣ ಮಹಾರಾಜರು ಹುಬ್ಬಳ್ಳಿಯಲ್ಲಿ ಚಾತುರ್ಮಾಸ್ಯ ಮಾಡಬೇಕು. ಇಲ್ಲಿನ ಭಕ್ತರು ಅವರಿಗೆ ಚಾತುರ್ಮಾಸ್ಯದ ಎಲ್ಲ ವ್ಯವಸ್ಥೆ ಮಾಡಿಕೊಡಲು ಶಕ್ತರಾಗಿದ್ದಾರೆ. ಧರ್ಮದ ಎಲ್ಲ ಜನರ ಪರವಾಗಿ ನಾನು ಅವರಲ್ಲಿ ಮನವಿ ಮಾಡುತ್ತೇನೆ ಎಂದರು. ತ್ಯಾಗಕ್ಕೂ ಜೈನ ಧರ್ಮಕ್ಕೂ ಅನ್ಯೋನ್ಯ ಸಂಬಂಧವಿದೆ. ಬೆಣ್ಣೆಯಲ್ಲಿರುವ ತುಪ್ಪದಂತೆ ಜೈನಧರ್ಮದಲ್ಲಿ ತ್ಯಾಗ ಅಡಕವಾಗಿದೆ. ನಮ್ಮಲ್ಲಿರುವ ಇಚ್ಛೆಗಳನ್ನು ತ್ಯಾಗ ಮಾಡುವುದು ಸಾಧನೆಗೆ ಪೂರಕವಾಗುತ್ತದೆ. ಅಂತರಂಗ ತ್ಯಾಗ ಹಾಗೂ ಬಹಿರಂಗ ತ್ಯಾಗ ಎರಡೂ ಮುಖ್ಯ ಎಂದು ನುಡಿದರು.

Advertisement

ಆಚಾರ್ಯ ಶ್ರೀ ಅಜಿತ ಶೇಖರ ಸುರೀಶ್ವರಜಿ ಮಾತನಾಡಿ, ತ್ಯಾಗದಲ್ಲಿ ಎರಡು ಬಗೆ. ಸಂಸಾರ ತ್ಯಾಗ ಹಾಗೂ ಪರಮಾರ್ಥ ತ್ಯಾಗ. ಸಂಸಾರ ತ್ಯಾಗದಲ್ಲಿ ಸಂತೋಷ, ರಂಜನೆಯನ್ನು ತ್ಯಾಗ ಮಾಡುವುದು ಉಪಭೋಗ. ಪರಿವಾರವನ್ನು ತ್ಯಾಗ ಮಾಡುವುದು ಪರಿಭೋಗ. ಸಮಾಜಕ್ಕಾಗಿ ತ್ಯಾಗ ಮಾಡುವುದು ಉಪಯೋಗವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಮೂರುಜನ ಆಚಾರ್ಯರು ತ್ಯಾಗದ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ. ಆಚಾರ್ಯರ ಸಂದೇಶಗಳು ಎಲ್ಲರಿಗೆ ಮುಟ್ಟಿದಾಗ ನಮ್ಮ ದೇಶ ಶಾಂತಿ- ಸೌಹಾರ್ದತೆಯ ದೇಶವಾಗುತ್ತದೆ ಎಂದು ನುಡಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಮಾತನಾಡಿದರು. ಮಹೇಂದ್ರ ಸಿಂಘಿ, ಪುಖರಾಜ ಸಂಘವಿ, ಮಹಾವೀರ ಕುಂದೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next