ಬೆಂಗಳೂರು: “ಫೇಸ್‌ಬುಕ್‌ನಲ್ಲಿ ಸಾವಿರಾರು ಸ್ನೇಹಿತರಿದ್ದರೂ ಹಿಂದೆಂದಿಗಿಂತ ಹೆಚ್ಚು ಏಕಾಂಗಿತನ. ಲಕ್ಷಗಟ್ಟಲೆ ಗಳಿಸುತ್ತಿದ್ದರೂ ನೆಮ್ಮದಿ ಇಲ್ಲದ ಬದುಕು. ಮನೆ ಹಿಂದಿನ ಬೇವಿನ ಮರ ಮರೆಯಾಗಿದ್ದರೂ, ನಮ್ಮ ನಡೆ-ನುಡಿಗಳಲ್ಲಿ ಉಳಿದ ಬೇವಿನೆಲೆಯ ಕಹಿ. ಈ ಅಸಮತೋಲನಗಳೇ ಸಮಾಜದ ಈಗಿನ ಎಲ್ಲ ಸಮಸ್ಯೆಗಳ ಮೂಲ,’ ಎಂದು ಸದ್ಗುರು ಮಾತಾ ಅಮೃತಾನಂದಮಯಿ ಅಭಿಪ್ರಾಯಪಟ್ಟರು.
ಉಲ್ಲಾಳ ಉಪನಗರದ ಜ್ಞಾನಭಾರತಿ ಆಶ್ರಮದಲ್ಲಿರುವ ಬ್ರಹ್ಮಸ್ಥಾನಂ ವಾರ್ಷಿಕೋತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಸ್ವಾರ್ಥ ಮತ್ತು ಬ್ಯುಸಿನೆಸ್‌ಗಳೇ ಇಂದು ಬಹುಮುಖ್ಯ ಮೌಲ್ಯಗಳಾಗಿವೆ. ಪ್ರಪಂಚದಾದ್ಯಂತ ಇದಕ್ಕೆ ಬೇಡಿಕೆ ಬಂದಿದೆ. ಮನೆಗಳಲ್ಲೂ ಇವುಗಳನ್ನು ಪೋಷಿಸುವ ವಾತಾವರಣ ನಿರ್ಮಾಣವಾಗಿದೆ. ಇಡೀ ಸಮಾಜವೇ ಇದರ ಹಿಡಿತದಲ್ಲಿ ಸಿಲುಕಿರುವುದರಿಂದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಕ್ಷಾಂತರ ರೂ. ಗಳಿಸುತ್ತಿದ್ದರೂ ಬದುಕಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಭಯೋತ್ಪಾದನೆ, ಕೊಲೆ, ಮತ-ರಾಜಕೀಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳಲ್ಲಿ ಸಮಾಜ ನಲುಗಿದೆ. ಆದರೆ, ನಿಜವಾದ ಸಂತೋಷ ಅಂತರಂಗದಿಂದ ಬರುವುದು. ಹಾಗೂ ಅದು ಮಾತ್ರ ಶಾಶ್ವತವಾಗಿರುತ್ತದೆ ಎಂದರು.
ಮುಖವಾಡದ ಬದುಕು: ಪ್ರಸ್ತುತ ಬರೀ ಮುಖವಾಡ ತೊಟ್ಟ ಜನರೇ ನಮ್ಮ ಮಧ್ಯೆ ಇದ್ದಾರೆ. ದೈಹಿಕ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯತೆ ಮಾನಸಿಕ ಆರೋಗ್ಯಕ್ಕೆ ಸಿಗುತ್ತಿಲ್ಲ. ಹಾಗಾಗಿ, ಒಂದೇ ಕುಟುಂಬದಲ್ಲಿದ್ದೂ ಪರಸ್ಪರ ನಂಬಲಾರದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಮಾತಾ ಅಮೃತಾನಂದಮಯಿ, ಜಗತ್ತಿನ ಎಲ್ಲ ಚರಾಚರಗಳಿಗೆ ಎರಡೆರಡು ಭಾವಗಳಿವೆ. ಹೊರಗೊಂದು ಮತ್ತು ಒಳಗೊಂದು. ಇವೆರಡೂ ಮೇಳೈಸಿದಾಗ ಬದುಕು ಪರಿಪೂರ್ಣವಾಗುತ್ತದೆ. ಈ ಪರಿಪೂರ್ಣತೆಯತ್ತ ಸಮಾಜ ಸಾಗಬೇಕಿದೆ ಎಂದು ಅಮೃತಾನಂದಮಯಿ ಸಲಹೆ ಮಾಡಿದರು.
ಮನೋದೌರ್ಬಲ್ಯದ ನಿವಾರಣಾ ಶಕ್ತಿ ನಮ್ಮೊಳಗೇ ಇರುತ್ತದೆ. ಅದು ಸದಾ ಜಾಗೃತವಾಗಿರುವಂತೆ ನೋಡಿಕೊಳ್ಳಬೇಕು ಎಂದ ಅವರು, ವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಆದರೆ, ಅದಕ್ಕಿಂತ ಮಿಗಿಲಾದುದು ಕುಟುಂಬ. ಇಡೀ ವಿಶ್ವವೇ ಒಂದು ಕುಟುಂಬವಾಗಿರುವುದರಿಂದ ವ್ಯಕ್ತಿಗಿಂತ ಸಮಾಜ ಮುಖ್ಯವಾಗುತ್ತದೆ. ಈ ದೃಷ್ಟಿಕೋನದಲ್ಲಿ ನಮ್ಮ ಆಲೋಚನೆಗಳಿರಬೇಕು. ನಮ್ಮ ಸ್ವಾತಂತ್ರ್ಯ ಮತ್ತೂಬ್ಬರ ಹಿತಕ್ಕೆ ಧಕ್ಕೆ ತರುವಂತಿರಬಾರದು ಎಂದು ಸೂಚ್ಯವಾಗಿ ಹೇಳಿದರು.
ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಯಾ ಮಾತನಾಡಿ, ಕೊಪ್ಪಳ, ಬೀದರ್‌ನಲ್ಲಿ ನೆರೆ ಉಂಟಾದಾಗ ನಿರಾಶ್ರಿತರಿಗೆ ಸಾವಿರಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿ, ಆಶ್ರಯ ನೀಡಿದರು. ಗಂಗಾ ಕಲುಷಿತಗೊಂಡಾಗ ಪುನಶ್ಚೇತನದ ಕಾರ್ಯಕ್ರಮದಲ್ಲಿ ಸುತ್ತಲಿನ ನಿವಾಸಿಗಳಿಗೆ ಶೌಚಾಲಯಗಳು, ಅಲ್ಲಿನ ಮಕ್ಕಳಿಗೆ ಶಾಲೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸುವ ಮೂಲಕ ಸಮಾಜಕ್ಕೆ ನಿಜವಾಗಿಯೂ “ಅಮ್ಮ’ ಆಗಿದ್ದಾರೆ ಎಂದು ಸ್ಮರಿಸಿದರು. ನಟಿ ನಂದಿನಿ ಮತ್ತಿತರರು ಉಪಸ್ಥಿತರಿದ್ದರು.