ಹುಣಸೂರು: ತಾಲೂಕಿನಾದ್ಯಂತ ಅಬಕಾರಿ ಹಾಗೂ ಪೊಲೀಸ್ ಇಲಾಖೆಯು ವಿವಿಧೆಡೆ ದಾಳಿ ನಡೆಸಿ ಮುಟ್ಟುಗೋಲು ಹಾಕಿಕೊಂಡಿದ್ದ 535 ಲೀ. ಮದ್ಯ ಹಾಗೂ 3.6 ಲೀಟರ್ ಬಿಯರ್‌ನ್ನು ತಹಶೀಲ್ದಾರ್, ತಾಲೂಕು ಪಂಚಾಯ್ತಿ ಇಒ ಸಮ್ಮಖದಲ್ಲಿ ನಾಶ ಪಡಿಸಲಾಯಿತು.
ಹುಣಸೂರು ವಲಯ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಅಬಕಾರಿ ಇಲಾಖೆಯ 160 ಹಾಗೂ ಪೊಲೀಸ್ ಇಲಾಖೆಯ 60 ಪ್ರಕರಣ ಸೇರಿದಂತೆ ಒಟ್ಟು 220 ಪ್ರಕರಣಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಎಲ್ಲ ಮದ್ಯವನ್ನು ತಹಶೀಲ್ದಾರ್ ಪಿ.ಸಿ.ಮೋಹನ್, ತಾಪಂ ಇಒ ಕೃಷ್ಣಕುಮಾರ್, ಅಬಕಾರಿ ಇಲಾಖೆ ಡಿವೈಎಸ್‌ಪಿ ರಮೇಶ್ ಹಾಗೂ
ಕೆಎಸ್‌ಬಿಸಿಎಲ್‌ನ ವ್ಯವಸ್ಥಾಪಕ ವೆಂಕಟೇಶ್ ಹಾಗೂ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿಗಳು ಒಟ್ಟಿಗೆ ಸುರಿದು ನಂತರ ವಿಲೇವಾರಿ ಮಾಡಿದರು. ವಶಪಡಿಸಿಕೊಂಡ ಮದ್ಯವನ್ನು ತನ್ನದೆಂದು ಮಾಲಿಕತ್ವ ನಿರೂಪಿಸಲು ಯಾರೊಬ್ಬರೂ ಹಾಜರಾಗದ ಕಾರಣ ಜಪ್ತಿ ಮಾಡಿದ ಮದ್ಯವನ್ನು ಅಬಕಾರಿ ಕಾಯ್ದೆಯನ್ವಯ ನಾಶಪಡಿಸಲಾಯಿತೆಂದು ಅಬಕಾರಿ ಇಲಾಖೆ ಡಿವೈಎಸ್‌ಪಿ ರಮೇಶ್ ತಿಳಿಸಿದರು. ಈ ಸಂದರ್ಭದಲ್ಲಿ ಅಬಕಾರಿ ವೃತ್ತ ನಿರೀಕ್ಷಕ ಧರ್ಮರಾಜ್, ಎಸ್‌ಐಗಳಾದ ಮಾನಸ, ಮೋಹನ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
26 ಸಾ. ಬಾಕ್ಸ್ ಮದ್ಯ ಮಾರಾಟ: ಹುಣಸೂರು ತಾಲೂಕಿನಲ್ಲಿ ಸಿ.ಎಲ್.7ನ 15 ಮದ್ಯದಂಗಡಿ, 6 ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಎಂಎಸ್‌ಐಎಲ್‌ನ ಎರಡು ಮದ್ಯದಂಗಡಿಗಳಿದ್ದು, ಸರಕಾರ ತಾಲೂಕಿಗೆ ವಿವಿಧ ಬ್ರಾಂಡ್ ಸೇರಿದಂತೆ ತಿಂಗಳಿಗೆ 26 ಸಾವಿರ(2.30 ಲಕ್ಷ ಲೀ)ಬಾಕ್ಸ್ ಮದ್ಯ ಮಾರಾಟ ಗುರಿ ನಿಗದಿ ಪಡಿಸಿದ್ದು, ಕಳೆದ ನಾಲ್ಕು ತಿಂಗಳಿನಿಂದೀಚೆಗೆ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿದ್ದು, ಶೇ.100 ರಷ್ಟು ಗುರಿ ಸಾಧನೆಯಾಗಿದೆ ಎಂದು ಅಬಕಾರಿ ಡಿ.ವೈ.ಎಸ್.ಪಿ.ರಮೇಶ್ ತಿಳಿಸಿದ್ದಾರೆ.