ವಾಡಿ: ಧಾನ ಧರ್ಮ ಹಾಗೂ ನ್ಯಾಯ ನಿಷ್ಠೆ ಕುರಿತು ವಿಚಾರವಿದ್ದು, ಅದನ್ನು ಆಚರಣೆಗೆ ತರದ ಬದುಕು ಅರ್ಥಹೀನ ಎಂದು ಪಾಳಾ ಮೂಲ ಕಟ್ಟಿಮನಿ ಹಿರೇಮಠದ ಡಾ| ಗುರುಮೂರ್ತಿ ಸ್ವಾಮೀಜಿ ನುಡಿದರು.
ಮಹಾಶಿವರಾತ್ರಿ ಆಚರಣೆ ನಿಮಿತ್ತ ಅಖೀಲ ಭಾರತ ವೀರಶೈವ ಮಹಾಸಭಾ, ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ, ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆ ಸಹಯೋಗದಲ್ಲಿ ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏರ್ಪಡಿಸಲಾಗಿರುವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸತ್ಯವಂತರಾದವರು ಗುರುವಿನ ಕೃಪೆಗೆ ಪಾತ್ರರಾಗುತ್ತಾರೆ. ಅಸತ್ಯ ಹಾಗೂ ಅನಾಚಾರಗಳಿಗೆ ಬಲಿಯಾದರೆ ನಮ್ಮ ದುಃಖಕ್ಕೆ ನಾವೇ ಮೊದಲು ಕಾರಣಿಕರ್ತರು. ಆಧ್ಯಾತ್ಮದ ಚಿಂತನೆಯತ್ತ ಚಿತ್ತ ಹರಿಸುವುದರಿಂದ ಕಷ್ಟದ ಚಿಂತೆಗಳು
ಕಳೆಯುತ್ತವೆ ಎಂದರು.
ವೀರಶೈವ ಮಹಾಸಭಾದ ಸ್ಥಳೀಯ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಆಧ್ಯಾತ್ಮಿಕ ಪವಾಡಗಳನ್ನು ತಿಳಿಯಲು ಪುರಾಣ ಚರಿತ್ರೆಯು ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಮುತ್ಯಾನ ಬಬಲಾದಿಯ ವಿರಕ್ತ ಮಠದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು ಪುರಾಣ ಪ್ರವಚನಕ್ಕೆ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಬಿಜೆಪಿ ಹಿರಿಯ ಮುಖಂಡರಾದ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಶ್ರೀನಿವಾಸ ಸಗರ, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷ ಶಿವಲಿಂಗಪ್ಪ ವಾಡೇದ, ಮುಸ್ಲಿಂ ಸಮಾಜದ ಅಧ್ಯಕ್ಷ ಮುಕ್ಬುಲ್ ಜಾನಿ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಲ್ಯಾಣರಾವ್ ಶೆಳ್ಳಗಿ, ಮುಖಂಡರಾದ ವಿಠ್ಠಲ ನಾಯಕ, ಸಿದ್ದಯ್ಯಶಾಸ್ತ್ರೀ ನಂದೂರಮಠ, ವೀರಣ್ಣ ಯಾರಿ ಹಾಗೂ ಮತ್ತಿತರರು ಇದ್ದರು.