ಬೆಂಗಳೂರು: “ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾನೆ. ದಯಮಾಡಿ ಹುಡುಕಿಕೊಡಿ’ ಎಂದು ಛತ್ತೀಸ್‌ಗಢ ಮೂಲದ ಕುಂತಲ್ ಬ್ಯಾನರ್ಜಿ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಅದಕ್ಕೆ ದೂರು ಸ್ವೀಕರಿಸುವುದಾಗಿ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರ ಕಚೇರಿಯ ಸಾಮಾಜಿಕ ಜಾಲತಾಣ ನಿರ್ವಾಹಣ ವಿಭಾಗದ ಸಿಬ್ಬಂದಿ ಸಂಬಂಧ ಪಟ್ಟ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಆದರೆ, ಸದ್ಯ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
‘ನಾನು ನನ್ನ ಪತ್ನಿ ಜತೆ ಛತ್ತೀಸ್ ಗಢದಲ್ಲಿ ವಾಸವಾಗಿದ್ದೆ. ಈ ವೇಳೆ ಪತ್ನಿಯನ್ನು ಪರಿಚಯಿಸಿಕೊಂಡಿರುವ ವ್ಯಕ್ತಿಯೊಬ್ಬ ಆಕೆಯನ್ನು ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾನೆ. ಸದ್ಯ ಆತ ಬೆಂಗಳೂರಿನಲ್ಲಿ ವಾಸವಾಗಿದ್ದಾನೆ ಎಂಬುದು ಗೊತ್ತಾಗಿದೆ’ ಎಂದು, ಆತನ ಮೊಬೈಲ್ ನಂಬರ್ ಹಾಗೂ ಫೋಟೋವನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.