ಬಾಲ್ಯದಿಂದಲೇ ಆತನಿಗೆ ಲಂಡನ್ ಕನಸು. ಅದಕ್ಕೆ ಕಾರಣ ಜ್ಯೋತಿಷ್ಯ. ಸಿಕ್ಕಾಪಟ್ಟೆ ಭವಿಷ್ಯ, ಜ್ಯೋತಿಷ್ಯ ನಂಬುವ ಲಂಬೋದರ ತುಂಬಾ ಸೊಂಬೇರಿ. ಈ ಸೊಂಬೇರಿ ಲಂಬೋದರನ ಬಾಲ್ಯದ ಕನಸು ಹೇಗೋ ನನಸಾಗಿ ಆತ ಲಂಡನ್‌ಗೆ ಹೋಗಿಯೇ ಬಿಡುತ್ತಾನೆ. ಅಲ್ಲಿಂದ ಆತನ ನಿಜವಾದ ಪೀಕಲಾಟ ಆರಂಭ. ಇದು “ಲಂಡನ್‌ನಲ್ಲಿ ಲಂಬೋದರ’ ಚಿತ್ರದ ಒನ್‌ಲೈನ್ ಸ್ಟೋರಿ.
ಇಷ್ಟು ಹೇಳಿದ ಮೇಲೆ ಈ ಸಿನಿಮಾ ಕಾಮಿಡಿ ಹಿನ್ನೆಲೆಯಲ್ಲಿ ಸಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿರ್ದೇಶಕ ರಾಜ್ ಸೂರ್ಯ ಒಂದಷ್ಟು ಘಟನೆಗಳನ್ನಿಟ್ಟು, ಆ ಮೂಲಕ ಒಂದು ಕಾಮಿಡಿ ಎಂಟರ್‌ಟೈನರ್ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮೊದಲೇ ಹೇಳಿದಂತೆ ಲಂಬೋದರ ಒಂದು ಕಾಮಿಡಿ ಸಬ್ಜೆಕ್ಟ್. ಇಡೀ ಸಿನಿಮಾದಲ್ಲಿ ನಿಮಗೆ ಸೀರಿಯಸ್ ಅಂಶಗಳು ಕಾಣಸಿಗೋದಿಲ್ಲ.
ಆ ಕಾರಣದಿಂದ ಆಗಾಗ ನಗುವ ಸರದಿ ನಿಮ್ಮದು. ನಿರ್ದೇಶಕರು ಮಾಡಿಕೊಂಡಿರುವ ಒನ್‌ಲೈನ್ ಚೆನ್ನಾಗಿದೆ. ಬದುಕು ಕಟ್ಟಿಕೊಳ್ಳಲು ಪರವೂರಿಗೆ ಹೋಗುವ ಮಂದಿಯ ಆಲೋಚನೆಯ ಜೊತೆಗೆ ಕೆಲವೊಮ್ಮೆ ಹೇಗೆ ಅವರು ಸಮಸ್ಯೆಗೆ ಸಿಲುಕುತ್ತಾರೆಂಬ ಅಂಶವನ್ನು ಇಲ್ಲಿ ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. “ಲಂಡನ್‌ನಲ್ಲಿ ಲಂಬೋದರ’ದಲ್ಲಿ ಒಬ್ಬ ಅಮಾಯಕ ಯುವಕನ ಬವಣೆಯನ್ನು ಮಜಾವಾಗಿ ತೋರಿಸಲಾಗಿದೆ.
ಜೊತೆಗೆ ಮೂಢನಂಬಿಕೆಯ ಹಿಂದೆ ಬೀಳಬಾರದು ಎಂಬ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕ ರಾಜ್, ಕಥೆಯನ್ನು ಬೆಳೆಸಿ, ನಿರೂಪಣೆಯಲ್ಲಿ ವೇಗ ಕಾಯ್ದುಕೊಂಡಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಆದರೆ, ಕೆಲವೊಮ್ಮೆ ಸಿನಿಮಾದ ಮೂಲ ಉದ್ದೇಶ ಮರೆತಂತೆ ಕೆಲವು ಪಾತ್ರಗಳು ವರ್ತಿಸುವುದು ಸಿನಿಮಾದ ಮೈನಸ್.
ಸಾಮಾನ್ಯವಾಗಿ ಒಬ್ಬ ಹೊಸ ನಾಯಕನ ಇಂಟ್ರೋಡಕ್ಷನ್ ಅಂದರೆ ಅಲ್ಲೊಂದಷ್ಟು ಬಿಲ್ಡಪ್‌ಗ್ಳಿರುತ್ತವೆ. ಆದರೆ, ಇಲ್ಲಿ ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ. ಒಬ್ಬ ಸಾಮಾನ್ಯ ಹುಡುಗ ಹೇಗಿರಬೇಕೋ, ಹಾಗೆಯೇ ಇಲ್ಲಿ ತೋರಿಸಿದ್ದಾರೆ. ಹಾಗಾಗಿ, ನಾಯಕ ಸಂತೋಷ್ ಕೂಡಾ ಇಮೇಜ್‌ನ ಆಸೆಬಿಟ್ಟು ನಟಿಸಿದ್ದಾರೆ. ಇನ್ನು, ಚಿತ್ರದಲ್ಲಿ ಕಾಮಿಡಿಯೇನೋ ಇದೆ.
ಆದರೆ, ಮತ್ತಷ್ಟು ಮಜಾ ಕೊಡುವ ಸನ್ನಿವೇಶವನ್ನು ಸೇರಿಸುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಅದರ ಬದಲು ಚಿತ್ರ ಕೆಲವು ಘಟನೆಗಳ ಸುತ್ತವೇ ಸುತ್ತುವುದರಿಂದ ನೋಡಿದ್ದನ್ನೇ ನೋಡುವ ಅನಿವಾರ್ಯತೆ ಪ್ರೇಕ್ಷಕನದು. ನಾಯಕ ಸಂತೋಷ್ ಪಾತ್ರಕ್ಕೆ ಒಗ್ಗಿಕೊಂಡರೂ, ನಟನೆಯಲ್ಲಿ ಇನ್ನಷ್ಟು ದೂರ ಸಾಗಬೇಕಿದೆ.
ಅದರಲ್ಲೂ ಅವರ ಹಾವಭಾವ, ಮ್ಯಾನರೀಸಂ ಎಲ್ಲಾ ಸನ್ನಿವೇಶಗಳಲ್ಲೂ ಒಂದೇ ರೀತಿ ಕಾಣುತ್ತದೆ. ನಾಯಕಿ ಶ್ರುತಿ ಪ್ರಕಾಶ್‌ಗೆ ಇಲ್ಲಿ ಹೆಚ್ಚೇನು ಅವಕಾಶವಿಲ್ಲ. ಉಳಿದಂತೆ ಅಚ್ಯುತ್‌ಕುಮಾರ್, ಸಂಪತ್, ಸುಧಾ ಬೆಳವಾಡಿ, ಸಾಧುಕೋಕಿಲ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಸನ್ನಿವೇಶಕ್ಕೆ ತಕ್ಕುದಾಗಿದೆ.
ಚಿತ್ರ: ಲಂಡನ್‌ನಲ್ಲಿ ಲಂಬೋದರ
ನಿರ್ಮಾಣ: ಲಂಡನ್ ಸ್ಕ್ರೀನ್ಸ್
ನಿರ್ದೇಶನ: ರಾಜ್ ಸೂರ್ಯ
ತಾರಾಗಣ: ಸಂತೋಷ್, ಶ್ರುತಿ ಪ್ರಕಾಶ್, ಸಂಪತ್, ಅಚ್ಯುತ್ ಕುಮಾರ್, ಸಾಧುಕೋಕಿಲ ಮತ್ತಿತರರು
* ರವಿ ರೈ