Advertisement

ಹಣದಾಸೆಗೆ ಮಾನವೀಯ ಮೌಲ್ಯ ಮಾಯ

11:48 AM Jun 15, 2018 | |

ಬೆಂಗಳೂರು: ಹಣ ಗಳಿಕೆ ಹಿಂದೆ ಬಿದ್ದಿರುವ ಜನ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.

Advertisement

ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನದ ಅಂಗವಾಗಿ ಗುರುವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ, ಹೆಲ್ಪ್ ಏಜ್‌ ಇಂಡಿಯಾ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಲ್ಡರ್ ಅಬ್ಯೂಸ್‌ ಇನ್‌ ಇಂಡಿಯಾ-2018ರ (ಭಾರತದಲ್ಲಿ ಹಿರಿಯರ ನಿಂದನೆ) ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಸ್ತುತ ಎಲ್ಲರೂ ಹಣವಂತರಾಗಬೇಕೆಂದು ಆಸೆ ಪಡುತ್ತಾ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನೆಲಮಂಗಲದ ಸಮೀಪ ಹರೀಶ್‌ ಎಂಬುವವರು ಅಪಘಾತದಲ್ಲಿ ತನ್ನ ಅರ್ಧ ದೇಹವನ್ನು ಕಳೆದುಕೊಂಡು ಸಹಾಯಕ್ಕಾಗಿ ಅಂಗಲಾಚಿದ್ದರು. ಆದರೆ ಅಂದು ಯಾರೋಬ್ಬರೂ ಹರೀಶ್‌ ಸಹಾಯಕ್ಕೆ ಹೋಗಲಿಲ್ಲ.

ಬದಲಾಗಿ ತಮ್ಮ ಮೊಬೈಲ್‌ ತೆಗೆದುಕೊಂಡು, ಹರೀಶ್‌ ನರಳಾಡುವ ವಿಡಿಯೋ ಚಿತ್ರಿಕರಿಸುತ್ತಿದ್ದರು. ಕೊನೆಗೆ ಸಾವು ಬದುಕಿನ ಹೋರಾಟದ ನಡುವೆಯೂ ಹರೀಶ್‌ ತಮ್ಮ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದರು. ಆದರೆ, ಇಂತಹ ಘಟನೆಗಳಿಂದಾಗಿ ದಿನೇ ದಿನೆ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ, ಹಣ ಸಂಪಾದನೆ ಹಿಂದೆ ಬಿದ್ದಿದ್ದು, ಸಾಮಾಜಿಕ ಮೌಲ್ಯಗಳು ಬದಲಾಗಿದೆ. ಭ್ರಷ್ಟಾಚಾರವೆಸಗಿ ಜೈಲಿಗೆ ಹೋಗಿ ಬಂದವರಿಗೆ ಯಾವುದೇ ಪಶ್ಚಾತಾಪ ಇಲ್ಲದೇ ಏನನ್ನೋ ಸಾಧಿಸಿ ಬಂದವರಂತೆ ಕೈ ಬೀಸಿ ವಿಜಯದ ನಗೆ ಬೀರುತ್ತಾರೆ. ಇಂತಹ ವ್ಯಕ್ತಿಗಳಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಹಣಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ.

Advertisement

ಮಾನವೀಯತೆ ಮೌಲ್ಯಗಳು ಇದ್ದಾಗ ಹಿರಿಯರು ಮಾತ್ರವಲ್ಲ ಪ್ರತಿಯೊಬ್ಬರನ್ನು ಗೌರಯುತವಾಗಿ ಕಾಣುತ್ತಾರೆ ಎಂದರು. ರಾಷ್ಟ್ರಕವಿ ಕುವೆಂಪು ಅವರು “ಏನಾದರು ಆಗು ಮೊದಲು ಮಾನವನಾಗು’ ಆದರೀಗ ಅದನ್ನು ಮುಂದುವರೆಸಿ ಇಂದಾದರೂ ಬದಲಾಗಿ ಮೊದಲು ಮಾನವನಾಗು ಎನ್ನುವಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌, ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸೀಮಂತ್‌ ಕುಮಾರ್‌ ಸಿಂಗ್‌, ಬಿ.ಕೆ.ಸಿಂಗ್‌, ಎಂ.ನಂಜುಂಡಸ್ವಾಮಿ, ಡಿಸಿಪಿ ವರ್ತಿಕಾ ಕಟಿಯಾರ್‌, ಹೆಲ್ಪ್ ಏಜ್‌ ಇಂಡಿಯಾದ ಮುಖ್ಯಸ್ಥರಾದ ರೇಖಾ ಮೂರ್ತಿ, ಬೆಂಗಳೂರು ವಿವಿಯ ಪ್ರೊ ಡಾ ಇಂದಿರಾ ಜೈಪ್ರಕಾಶ್‌ ಇತರರು ಇದ್ದರು.

ಮಂಗಳೂರು ಮೊದಲ ಸ್ಥಾನ – ಬೇಸರ: “ಗುರುವಾರ ಹೆಲ್ಪ್ ಏಜ್‌ ಇಂಡಿಯಾ ಬಿಡುಗಡೆ ಮಾಡಿದ ವರದಿಯಲ್ಲಿ ಮಂಗಳೂರು ಮೊದಲ ಸ್ಥಾನದಲ್ಲಿರುವುದು ಬೇಸರ ತಂದಿದೆ’ ಎಂದು ಸಂತೋಷ್‌ ಹೆಗ್ಡೆ ಹೇಳಿದರು. ಮಂಗಳೂರು ನನ್ನ ಹುಟ್ಟೂರು. ಹೆಚ್ಚು ಶಿಕ್ಷಿತರು ಹಾಗೂ ಆರ್ಥಿಕವಾಗಿ ಸದೃಢ ಹೊಂದಿದವರು ಇರುವ ಕ್ಷೇತ್ರದಲ್ಲೇ ಈ ರೀತಿ ಆಗಿದೆ. ಇಂತಹ ನಗರದಲ್ಲಿಯೇ ಹಿರಿಯರ ನಿಂದನೆ ಪ್ರಕರಣಗಳು ಹೆಚ್ಚಾಗಿರುವುದು ದುಖದ‌ ಸಂಗತಿ ಎಂದರು.

ಶೇ.82 ಮಂದಿ ದೂರು ನೀಡಿಲ್ಲ: ಸಮೀಕ್ಷೆಯಿಂದ ತಿಳಿದು ಬಂದ ಪ್ರಮುಖ ಅಂಶವೇನೆಂದರೆ ಶೇ.56 ಮಂದಿ ಅಗೌರವ, ಶೇ.49 ಮಂದಿ ನಿಂದನೆ ಮತ್ತು ಶೇ.33 ಮಂದಿ ನಿರ್ಲಕ್ಷ್ಯ ಅನುಭವಿಸುತ್ತಿರುವುದಾಗಿ ಹಿರಿಯರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನು ಶೇ.82ರಷ್ಟು ಮಂದಿ ಹಿರಿಯರು ನಿಂದನೆ ಬಗ್ಗೆ ದೂರು ನೀಡಲು ಹಿಂಜರಿಯುತ್ತಾರೆ ಎಂಬುದು ತಿಳಿದು ಬಂದಿದೆ.

ಪ್ರಮುಖ ನಗರಗಳಲ್ಲಿ ನಿಂದನೆ
ನಗರ    ನಿಂದನೆ ಪ್ರಮಾಣ

ಮಂಗಳೂರು    ಶೇ.47
ಅಹಮದಾಬಾದ್‌    ಶೇ.46
ಅಮೃತ್‌ಸರ್‌    ಶೇ.35
ದೆಹಲಿ    ಶೇ.33
ಚೆನ್ನೈ    ಶೇ. 27
ಬೆಂಗಳೂರು    ಶೇ.26
ಹೈದರಾಬಾದ್‌    ಶೇ.24
ಕೊಲ್ಕೋತ್ತಾ    ಶೇ. 23
ಮುಂಬೈ    ಶೇ.13
ಕೊಚ್ಚಿ    ಶೇ.15
ವೈಜಾಕ್‌    ಶೇ.13

Advertisement

Udayavani is now on Telegram. Click here to join our channel and stay updated with the latest news.

Next