Advertisement

ನೆರೆ ಸಂತ್ರಸ್ತರು ಕೇಳಿದ ಜಾಗದಲ್ಲಿ ಮನೆ: ಶಾಸಕ

06:43 AM Jul 31, 2020 | mahesh |

ಹಾವೇರಿ: ನೆರೆಯಿಂದ ಮನೆ ಕಳೆದುಕೊಂಡಿರುವ ಸಂತ್ರಸ್ತರು ಇಚ್ಛಿಸಿದ ಬೇರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಹಾವೇರಿ
ಶಾಸಕ ನೆಹರು ಓಲೇಕಾರ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷ ಬಸನಗೌಡ ದೇಸಾಯಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಜಿಪಂ ಸದಸ್ಯರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

Advertisement

ಫಲಾನುಭವಿಗಳು ಇಚ್ಛಿಸಿದ  ಜಾಗಗಳನ್ನು ಗುರುತಿಸಿದರೆ ಆ ಜಾಗೆಯಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಯಾವುದೇ ಗೊಂದಲವಿಲ್ಲ ಎಂದರು.
ನೆರೆ ಪರಿಹಾರದಡಿ ಹೊಸ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ಮಂಜೂರಾದ ಫಲಾನುಭವಿಗಳಿಗೆ ಕೊನೆಯ ಕಂತಿನ ಹಣ ಪಾವತಿಯಾಗಿಲ್ಲ ಎಂಬ ಸದಸ್ಯರ ದೂರುಗಳಿಗೆ ಉತ್ತರಿಸಿದ ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಪರಿಹಾರ ಹಣ ಪಾವತಿಸಲು ಯಾವುದೇ ಹಣದ ಕೊರತೆ ಇಲ್ಲ. ಸಾಕಷ್ಟು ಹಣವಿದೆ. ತಾಂತ್ರಿಕ ತೊಂದರೆಯಿಂದ ವಿಳಂಬವಾಗಿರಬಹುದು. ಸಂಬಂಧಿಸಿದ
ಅಧಿಕಾರಿಗಳಿಗೆ ಸೂಚಿಸಿ ಜಿ.ಪಿ.ಎಸ್‌. ಸೇರಿದಂತೆ ಯಾವುದೇ ತಾಂತ್ರಿಕ ತೊಂದರೆ ಸರಿಪಡಿಸಿ ಕೊನೆಯ ಕಂತಿನ ಹಣ ಪಾವತಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸಂಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ನದಿ ದಂಡೆಯಲ್ಲಿ 30 ರಿಂದ 40 ಎಕರೆ ಬೆಳೆ ಹಾನಿಯಾಗಿದೆ. ಈ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಪಾವತಿಯಾಗಿಲ್ಲ. ಕೆಲ ಅಧಿಕಾರಿಗಳ ಬೆಳೆ ಪರಿಹಾರ ದುರುಪಯೋಗ ಕುರಿತಂತೆ ತನಿಖೆ ನಡೆಯುತ್ತಿದೆ. ಈ ತನಿಖೆ ಯಾವ ಹಂತದಲ್ಲಿದೆ, ಯಾರ ಮೇಲೆ ಕ್ರಮವಾಗಿದೆ ಎಂಬ  ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಪರ
ಜಿಲ್ಲಾಧಿಕಾರಿ, ಸರ್ಕಾರಿ ಜಮೀನಿಗೆ ಪರಿಹಾರ ಪಡೆದಿರುವ ಕುರಿತಂತೆ ಈಗಾಗಲೇ ದೂರು ದಾಖಲಾಗಿದೆ. ತನಿಖೆ ನಡೆಯುತ್ತಿದೆ. ಬೆಳೆ ಪರಿಹಾರದಲ್ಲಿ ಅವ್ಯವಹಾರ ಎಸಗಿದ 11 ಜನರ ಮೇಲೆ ಕೇಸ್‌ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೋವಿಡ್‌ ಕಾರಣದಿಂದ ವಿಚಾರಣೆ ವಿಳಂಬವಾಗಿದೆ ಎಂದರು. ಬೆಳೆ ಪರಿಹಾರವಾಗಿ ಜಿಲ್ಲೆಯಲ್ಲಿ 1.57 ಕೋಟಿ ರೂ. ಒಟ್ಟು ಪರಿಹಾರ ಪಾವತಿಸಬೇಕಾಗಿದೆ. ಇದರಲ್ಲಿ 1.52 ಕೋಟಿ ರೂ. ಹಣ ಪಾವತಿಸಲಾಗಿದೆ.  4,37,714 ಆರ್‌ಟಿಸಿಗಳಿಗೆ ಪರಿಹಾರ ನೀಡಲಾಗಿದೆ ಎಂದು ವಿವರಿಸಿದರು.

ಅನುಮೋದನೆ: ಸಾಮಾನ್ಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ  ಸಮಿತಿ, ಹಣಕಾಸು ಮತ್ತು ಲೆಕ್ಕ ಪರಿಶೋಧನಾ ಹಾಗೂ ಯೋಜನಾ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ
ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ನಡಾವಳಿಗಳನ್ನು ಸಭೆಯಲ್ಲಿ ಮಂಡಿಸಿ ಅನುಮೋದಿಸಲಾಯಿತು.  ಉಪಾಧ್ಯಕ್ಷೆ ಗಿರಿಜವ್ವ ಬ್ಯಾಲದಹಳ್ಳಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ
ಧಿಕಾರಿ ರಮೇಶ ದೇಸಾಯಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸದಸ್ಯರು, ಅ ಧಿಕಾರಿಗಳಿದ್ದರು.

ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 5 ಲಕ್ಷ ಪರಿಹಾರ
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಐದು ಲಕ್ಷ ರೂ. ಪರಿಹಾರ ನೀಡುವ ಕಾರ್ಯ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಮೊದಲು ಕಂದಾಯ ಇಲಾಖೆಯಿಂದ ಪಾವತಿಸಲಾಗುತ್ತಿತ್ತು. ಐದು ಲಕ್ಷ ರೂ. ಪರಿಹಾರ ಘೋಷಣೆಯಾದ ಮೇಲೆ ಕೃಷಿ ಇಲಾಖೆಯಿಂದ ನೀಡಲು ಆದೇಶವಾಗಿತ್ತು. ಆದರೆ, ಕೃಷಿ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಕಂದಾಯ ಇಲಾಖೆಯಿಂದಲೇ ಪರಿಹಾರ ಪಾವತಿಗೆ ವಿನಂತಿಸಿದ ಕಾರಣ ಈ ಕುರಿತಂತೆ ಆದೇಶ ಹೊರಡಿಸುವ ಪ್ರಕ್ರಿಯೆ ಕಾರಣ ವಿಳಂಬವಾಗಿದೆ. ಶೀಘ್ರವೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next