Advertisement

ಸದನ ಕೋಲಾಹಲ: ಎಚ್‌ಡಿಕೆ, ಬಿಎಸ್‌ವೈ ನಡುವೆ ಮಾತಿನ ಚಕಮಕಿ

06:00 AM Dec 20, 2018 | |

ಸುವರ್ಣಸೌಧ (ವಿಧಾನಸಭೆ): ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ವಿಚಾರಕ್ಕೆ ಬುಧವಾರ ಸದನದಲ್ಲಿ ಕೋಲಾಹಲ ಉಂಟಾಯಿತು. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವಿನ ಆರೋಪ-ಪ್ರತ್ಯಾರೋಪ ಗದ್ದಲಕ್ಕೆ ತಿರುಗಿ, ಸದನ ಮುಂದೂಡಿದ ಪ್ರಸಂಗ ನಡೆಯಿತು.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ಕಳೆದ ಎಂಟು ದಿನಗಳಿಂದ ಸುಗಮವಾಗಿ ನಡೆದ ಕಲಾಪ ಕೊನೇ ಹಂತದಲ್ಲಿ ಕಾವೇರುವಂತೆ ಮಾಡಿತು. ಬರ ಕುರಿತ ಚರ್ಚೆಗೆ ಮುಖ್ಯಮಂತ್ರಿ ಉತ್ತರಿಸುತ್ತಿದ್ದಾಗ ಸಾಲಮನ್ನಾ ವಿಚಾರ ಪ್ರಸ್ತಾಪವಾಯಿತು. ಆಗ ಸಿಎಂ ಉತ್ತರಕ್ಕೆ ತೃಪ್ತರಾಗದ ಬಿ.ಎಸ್‌.ಯಡಿಯೂರಪ್ಪ, “”ನೀವು ಹರಿಕಥೆ ಹೇಳುವುದು ಬೇಡ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡುವುದಾಗಿ ಹೇಳಿದೀªರಿ. ಆದರೆ, ಇದುವರೆಗೆ ಮನ್ನಾ ಆಗಿರುವುದು 50 ಕೋಟಿ ರೂ. ಮಾತ್ರ. ಈಗ ಐದು ವರ್ಷ ಸಮಯ ಕೇಳುತ್ತಿದೀªರಿ. ಅಲ್ಲಿಯವರೆಗೂ ರೈತರು ಏನಾಗಬೇಕು” ಎಂದು ಗುಡುಗಿದರು.

ಇದರಿಂದ ಕುಪಿತರಾದ ಸಿಎಂ, “”ರಾಷ್ಟ್ರೀಕೃತ ಬ್ಯಾಂಕ್‌ಗಳ ಅಸಹಕಾರದ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿದೆ” ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಛೇಡಿಸಿದರು. ಇದಕ್ಕೆ ಖಾರವಾಗಿಯೇ ಉತ್ತರಿಸಿದ ಯಡಿಯೂರಪ್ಪ, “”ನಾವ್ಯಾಕೆ ಬ್ಯಾಂಕ್‌ಗಳ ಜತೆ ಸಂಪರ್ಕದಲ್ಲಿರಬೇಕು. ಪದೇ ಪದೆ ಅದನ್ನೇ ಯಾಕೆ ಹೇಳುತೀ¤ರಿ? ನಿಮ್ಮ ಉದ್ದೇಶವಾದರೂ ಏನು? ಮುಖ್ಯಮಂತ್ರಿಯಾದವರು ಜವಾಬ್ದಾರಿಯಿಂದ ಮಾತನಾಡಬೇಕು” ಎಂದು ತಾಕೀತು ಮಾಡಿದರು. ಆಗ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. “ರೈತ ವಿರೋಧಿ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ, ಸಾಲಮನ್ನಾ ಆಗಲೇಬೇಕು’ ಎಂದು ಘೋಷಣೆ ಕೂಗಿದರು.

ಪ್ರತಿಯಾಗಿ, ಆಡಳಿತ ಪಕ್ಷದ ಸದಸ್ಯರು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡದ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂದು ತಿರುಗೇಟು ನೀಡಿದರು. ಸದನದಲ್ಲಿ ಗದ್ದಲದ ವಾತಾವರಣ ಉಂಟಾದಾಗ 20 ನಿಮಿಷ ಸದನ ಮುಂದೂಡಲಾಯಿತು. ಈ ನಡುವೆ ಆಡಳಿತ ಹಾಗೂ ಪ್ರತಿಪಕ್ಷದವರ ನಡುವೆ ಸಂಧಾನಕ್ಕೆ ಸ್ಪೀಕರ್‌ ರಮೇಶ್‌ಕುಮಾರ್‌ ತಮ್ಮ ಕೊಠಡಿಗೆ ಬರುವಂತೆ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಅವರನ್ನು ಕರೆದರು. ಆದರೆ, ಯಡಿಯೂರಪ್ಪ ಹೋಗಲಿಲ್ಲ. ಸದನ ಮತ್ತೆ ಪ್ರಾರಂಭವಾದಾಗ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಆಗಲೇಬೇಕು ಎಂದು ಘೋಷಣೆ ಹಾಕಿದರು. ಅದಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಮೋದಿ ಅವರನ್ನು ಒತ್ತಾಯಿಸಿ ಎಂದು ಛೇಡಿಸಿದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಮುಖ್ಯಮಂತ್ರಿಯವರು ಮಾತನಾಡುವಾಗ ನಮ್ಮ ನಾಯಕರನ್ನು (ಯಡಿಯೂರಪ್ಪ) ಹೀಯಾಳಿಸುವ ರೀತಿ ಉತ್ತರ ನೀಡಿ ಗೌರವಯುತವಾಗಿ ನಡೆಸಿಕೊಳ್ಳಲಿಲ್ಲ. ಜತೆಗೆ ಆಡಳಿತ ಪಕ್ಷದ ಶಾಸಕರನ್ನು ಎತ್ತಿ ಕಟ್ಟಿ, ಪ್ರಚೋದನೆ ನೀಡಿದರು ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೆ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ಉಂಟಾಗಿ ಸದನದಲ್ಲಿ ಗದ್ದಲ ಕೋಲಾಹಲದ ವಾತಾವರಣ ಉಂಟಾದಾಗ ಸದಸ್ಯರನ್ನು ಸಮಾಧಾನಪಡಿಸಲು ಸೀ³ಕರ್‌ ರಮೇಶ್‌ಕುಮಾರ್‌ ಪ್ರಯತ್ನಿಸಿದರು. ಆದರೆ, ಯಾರೂ ಯಾರ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರದ ಕಾರಣ ಸದನ ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

Advertisement

ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ
ಸಾಲಮನ್ನಾ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿರುವ ಬಿಜೆಪಿ ತಕ್ಷಣವೇ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಮನ್ನಾಗೆ ಪಟ್ಟು ಹಿಡಿದು ಉಭಯ ಸದನಗಳಲ್ಲಿ ಧರಣಿ ನಡೆಸಲು ಚಿಂತನೆ ನಡೆಸಿದೆ. ಐದು ವರ್ಷಗಳ ಕಾಲ ಸಾಲಮನ್ನಾಗೆ ಅವಕಾಶ ಪಡೆಯುವುದು ಬೇಡ, ಈಗಲೇ ರೈತರ ಸಾಲ ಮನ್ನಾ ಆಗಬೇಕು. ಬ್ಯಾಂಕ್‌ಗಳು ಸಾಲ ಮನ್ನಾಗೆ ಒಪ್ಪಿದ್ದಾವಾ ಎಂದು ಸದನಕ್ಕೆ ತಿಳಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸಿದೆ. ಗುರುವಾರ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ.

ಕೇಂದ್ರ ಸರ್ಕಾರದ ನೆರವು ಇಲ್ಲದಿದ್ದರೂ ನನ್ನ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಸದೃಢವಾಗಿದೆ. ಆರ್ಥಿಕವಾಗಿಯೂ ನನ್ನ ಸರ್ಕಾರ ಭದ್ರವಾಗಿದೆ. ನಾನು ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನ ನಿಮಗಿಲ್ಲ .
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಮುಖ್ಯಮಂತ್ರಿಗಳು ಪ್ರತಿಪಕ್ಷ ನಾಯಕರನ್ನು ಅವಮಾನಿಸಿ ಉಡಾಫೆ ರೀತಿಯಲ್ಲಿ ಸದನದಲ್ಲಿ ಉತ್ತರಿಸುತ್ತಿದ್ದಾರೆ. ಬರ ನಿರ್ವಹಣೆ ಹಾಗೂ ಸಾಲ ಮನ್ನಾ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರತಿಪಕ್ಷಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
– ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next