Advertisement

ಮನೆ ಬಾಗಿಲಿಗೇ ಮಳೆ ಹಾನಿ ಪರಿಹಾರ

11:23 AM Aug 19, 2018 | |

ನಂಜನಗೂಡು: ಜಲಾವೃತವಾಗಿರುವ ಶ್ರೀಕಂಠೇಶ್ವರ ದೇವಾಲಯಕ್ಕೆ ಕಂದಾಯ ಸಚಿವ ಆರ್‌.ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿ, ದೇವರ ದರ್ಶನ ಪಡೆದು, “ಮಳೆ ನಿಲ್ಲಿಸಿ ನೆರೆ ಹಾವಳಿಯಿಂದ ಕಾಪಾಡು’ ಎಂದು ಪ್ರಾರ್ಥನೆ ಸಲ್ಲಿಸಿದರು. 

Advertisement

ಮೈಸೂರು-ನಂಜನಗೂಡು ರಸ್ತೆ ಮಲ್ಲನಮೂಲೆಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ನೀರು ಹರಿಯುತ್ತಿರುವುದನ್ನು ವೀಕ್ಷಿಸಿದ ಅವರು ನಂತರ ನಗರಕ್ಕೆ ಆಗಮಿಸಿ ಇಲ್ಲಿನ ಹಳ್ಳದಕೇರಿ, ಕುರುಬಗೇರಿ, ಕಪಿಲಾಸ್ನಾನ ಘಟ್ಟ ಮುಳುಗಿರುವುದರನ್ನು ಪರಿಶೀಲಿಸಿದರು. ಬಳಿಕ ಗಿರಿಜಾ ಕಲ್ಯಾಣ ಮಂದಿರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದರು. 

ಇದೇ ವೇಳೆ ಸಚಿವ ದೇಶಪಾಂಡೆ ಮಾತನಾಡಿ, ತಾವು ಇಂತಹ ಮಳೆಯನ್ನು ನೋಡಿರಲಿಲ್ಲ. ಕೊಡಗು ಹಾಗೂ ಕೇರಳ ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನದಿಗಳಲ್ಲಿ ನೀರು ಹರಿವು ಹೆಚ್ಚಾಗಿ ಹಲವಾರು ಗ್ರಾಮಗಳು ಜಲಾವೃತಗೊಂಡು ಸಾವಿರಾರು ಎಕರೆ ಬೆಳೆ ನಾಶಗೊಂಡಿದೆ.

ನೂರಾರು ಮನೆಗಳು ಕುಸಿದು ಜನರು ನಿರಾಶ್ರಿತರಾಗಿದ್ದಾರೆ. ಹೀಗಾಗಿ ಶ್ರೀಕಂಠೇಶ್ವರನ ದರ್ಶನ ಪಡೆದು ಇಲ್ಲಿಯವರೆಗೆ ಮಳೆ ಸುರಿಸು ಎಂದು ಬೇಡಿಕೊಳ್ಳುತ್ತಿದ್ದೆವು. ಆದರೆ, ಇದೀಗ ಮಳೆ ನಿಲ್ಲಿಸಿ ಪ್ರವಾಹ ನಿಯಂತ್ರಿಸು ಎಂದು ಬೇಡಿಕೊಂಡಿದ್ದೇನೆ ಎಂದು ತಿಳಿಸಿದರು.

ಮನೆಬಾಗಿಲಿಗೆ ಬೆಳೆನಷ್ಟ ಪರಿಹಾರ: ಪ್ರವಾಹ ಪೀಡಿತರಿಗೆ ಪರಿಹಾರ ಕೈಗೊಳ್ಳಲು ಹಣದ ಕೊರತೆಯಿಲ್ಲ. ಎಷ್ಟೇ ವೆಚ್ಚವಾದರೂ ಭರಿಸಲಾಗುವುದು. ತುರ್ತು ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

Advertisement

ಪ್ರತಿ ಜಿಲ್ಲಾಧಿಕಾರಿ ಖಾತೆಗೆ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬೆಳೆ ನಷ್ಟದ ಕುರಿತು ಇಲಾಖೆಗೆ ಯಾರೂ ಅರ್ಜಿ ಹಿಡಿದು ಬರಬೇಕಾಗಿಲ್ಲ. ನಿಮ್ಮ ಮನೆ ಬಾಗಿಲಿಗೆ ಅಧಿಕಾರಿಗಳೇ ಬಂದು ಅರ್ಜಿ ಪಡೆದು ಬೆಳೆ ನಷ್ಟವನ್ನು ಸಂಪೂರ್ಣವಾಗಿ ತುಂಬಿ ಕೊಡಲಿದ್ದಾರೆ ಎಂದು ಭರವಸೆ ನೀಡಿದರು.

30 ಕೋಟಿ ಬಿಡುಗಡೆ: ರಾಜ್ಯದಲ್ಲಿ ಮಳೆಹಾನಿ ಪರಿಹಾರಕ್ಕಾಗಿ 30 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಜೊತೆಗೆ ಇನ್ನಷ್ಟು ಪರಿಹಾರಕ್ಕಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ಆತಂಕ ಬೇಡ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಅಧಿಕಾರಿಗಳ ಮುಂಜಾಗ್ರತಾ ಕ್ರಮದಿಂದಾಗಿ ಕಾವೇರಿ ಮತ್ತು ಕಪಿಲೆ ನದಿ ಪ್ರವಾಹದಿಂದ ಸಾವು-ನೋವು ಸಂಭವಿಸಿಲ್ಲ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಮನೆ-ಬೆಳೆ ಕಳೆದುಕೊಂಡ ರೈತರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ. ಸರ್ಕಾರ ಪ್ರಾಮಾಣಿಕವಾಗಿ ಸಹಾಯ ಹಸ್ತ ನೀಡಲು ಸಿದ್ಧವಿದೆ ಎಂದರು.

ನೆರವು ನೀಡಿ: ಮೈಸೂರು ಜಿಲ್ಲಾಧಿಕಾರಿಗಳು ಮೈಸೂರಿನ ಸಂತ್ರಸ್ತರಿಗೆ ನೆರವು ನೀಡುವ ಎಲ್ಲಾ ರೀತಿಯ ಪ್ರಯತ್ನ ಕೈಗೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರು, ಕೈಗಾರಿಕೋದ್ಯಮಿಗಳು ನೆರವು ನೀಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ| ಯತೀಂದ್ರ ಸಿದ್ದರಾಮಯ್ಯ, ಬಿ.ಹರ್ಷವರ್ಧನ್‌, ಮಾಜಿ ಶಾಸಕರಾದ ಕೇಶವಮೂರ್ತಿ, ವಾಸು, ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಉಪಾಧ್ಯಕ್ಷ ಗೋಂದರಾಜನ್‌, ಜಿಪಂ ಸದಸ್ಯರಾದ ಸದಾನಂದ, ಹೆಚ್‌.ಎಸ್‌. ದಯಾನಂದಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ತಾಪಂ ಸದಸ್ಯ ಶಿವಣ್ಣ, ನಗರಸಭೆ ಸದಸ್ಯ ಮಂಜುನಾಥ್‌,

ಟಿಎಪಿಸಿಎಂಎಸ್‌ ಅಧ್ಯಕ್ಷ ಕುರಹಟ್ಟಿ ಮಹೇಶ್‌, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಶಂಕರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ಸಿಂಗ್‌, ತಹಶೀಲ್ದಾರ್‌ ದಯಾನಂದ್‌, ನಗರಸಭಾ ಆಯುಕ್ತ ವಿಜಯ್‌, ಎಂಜಿನಿಯರ್‌ ಭಾಸ್ಕರ್‌, ದೇವಸ್ಥಾನದ ಅಧಿಕಾರಿ ಕುಮಾರಸ್ವಾಮಿ, ಸಿಪಿಐ. ಶಿವಮೂರ್ತಿ, ಪಿಎಸ್‌ಐಗಳಾದ ಸ. ರಶಂಕರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥತರಿದ್ದರು.

ಮತ್ತೆ ಅಪಾಯಮಟ್ಟ ಮೀರಿದ ಕಪಿಲೆ: ಕಬಿನಿ ಜಲಾಶಯದಿಂದ ಶನಿವಾರ ಬೆಳಗ್ಗೆ  75 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಟ್ಟ ಹಿನ್ನೆಲೆಯಲ್ಲಿ ಕಪಿಲಾ ನದಿ ಪ್ರವಾಹ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಸಂಪೂರ್ಕ ಸಂಪರ್ಕ ಕಡಿತಗೊಂಡಿದೆ.

ಶ್ರೀಕಂಠೇಶ್ವರನ ದೇವಸ್ಥಾನದ ಸನ್ನಿಧಿಯ ಸಮೀಪವಿರುವ ಎಲ್ಲಾ ದೇಗುಲಗಳು ಜಲಾವೃತಗೊಂಡಿವೆ. ದಾಸೋಹ ಭವನ, ಭಕ್ತಿಮಾರ್ಗ ರಸ್ತೆಗಳು ಮುಳುಗಡೆಯಾಗಿವೆ. ಅಂಬೇಡ್ಕರ್‌ ಸರ್ಕಲ್‌ನಿಂದ ಮುಡಿಕಟ್ಟೆಯವರೆಗೆ ಎಡಭಾಗದ ರಸ್ತೆಯಲ್ಲಿ ನೀರು ಹರಿದಿರುವ ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next