Advertisement

ಬದುಕಿನ ಪ್ರೀತಿಯ ಊರು

12:16 PM Jul 25, 2021 | Team Udayavani |

ನನಗೆ ಬೆಂಗಳೂರು ಎಂದರೆ ವಿದ್ಯೆ, ಉದ್ಯೋಗ, ಜೀವನ, ಭರವಸೆ, ಧೈರ್ಯ, ಸ್ಫೂರ್ತಿ ನೀಡಿದ ಅಮ್ಮನೇ ಸರಿ. ಬೆಂಗಳೂರಿನಲ್ಲಿದ್ದು, ಜೀವನ ಕಟ್ಟಿಕೊಂಡು, ಕೊರೊನಾ ಕಾಲದಲ್ಲಿ ಬೈದುಕೊಂಡು ತವರಿಗೆ ಹೋಗಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರಿಗೆ ಆಸರೆ ನೀಡಿದ ಊರು ಎಂಬ ಕನಿಷ್ಠ ಭಾವನೆಯೂ ಅವರಿಗಿಲ್ಲವಾಗಿದೆ. ಅದೆಷ್ಟೋ ಅಕ್ಷರಸ್ಥರಿಗೆ, ಅನಕ್ಷರಸ್ಥರಿಗೆ, ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡು ಬೆಂಗಳೂರಿಗೆ ಬಂದಂತಹ ಎಳಸುಗಳಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದೇ ಈ ನಮ್ಮ ಬೆಂಗಳೂರು.

Advertisement

ಕೊರೊನಾ ವೈರಾಣುವಿಗೆ ಹೆದರಿ ತವರಿಗೆ ಹೋಗುವಾಗ “ಜೀವ ಇದ್ದರೆ ಬೆಲ್ಲ ಬೇಡಿ ತಿನ್ನಬಹುದು’ ಎನ್ನುವುದು. ಸೋಂಕು ಇಳಿಕೆ ಆದ ಕೂಡಲೇ “ಊರಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಜೀವನ ನಡೀಬೇಕಲ್ಲ’ ಎಂದು ಬೆಂಗಳೂರಿಗೆ ಮರಳುವುದು. ಸಂದರ್ಭಕ್ಕೆ ತಕ್ಕಂತೆ ಮಾತು ಬದಲಿಸುವ ಜನರು ಒಂದೆಡೆ ಆದರೆ, ಅನ್ನವನಿಕ್ಕಿದ, ಹಸಿವು ಮರೆಸಿದ ಬೆಂಗಳೂರನ್ನು ಬೈದುಕೊಂಡು ತಮ್ಮ ಊರಿಗೆ ತೆರಳುವವರು ಇನ್ನೊಂದೆಡೆ. ಸಣ್ಣ ವಯಸ್ಸಿನವರಿಂದ ವೃದ್ಧರವರೆಗೂ ದುಡಿದು ಬದುಕಲು ಅವಕಾಶಗಳಿರುವುದು ಬೆಂಗಳೂರಿನಲ್ಲಿ. ಕೇವಲ ನಮ್ಮ ರಾಜ್ಯದ ಹಳ್ಳಿಗಳಷ್ಟೇ ಅಲ್ಲ. ಹೊರ ರಾಜ್ಯದವರಿಗೂ ಶಿಕ್ಷಣ, ಉದ್ಯೋಗ ದೊರಕಿಸಿ ಸಲಹುತ್ತಿದೆ ಈ ನಮ್ಮ ಹೆಮ್ಮೆಯ ಬೆಂಗಳೂರು.  ಏನಾದರಾಗಲಿ ಇದ್ದಾಗ ಊಟ ಮಾಡಿ, ಇಲ್ಲದಿದ್ದಾಗ ಉಪವಾಸವಿದ್ದರೂ ಸ್ವತಂತ್ರ ನಿರ್ಧಾರ ತೆಗೆದುಕೊಂಡು, ಸ್ವತಂತ್ರ ಜೀವನ ಕಟ್ಟಿಕೊಳ್ಳಲು ಅವಕಾಶಗಳನ್ನು ಕಲ್ಪಿಸಿದ ಬೆಂಗಳೂರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಾನು ಹೊರ ಜಿಲ್ಲೆಯವಳೇ ಆದರೆ ಬೆಂಗಳೂರು ಎಂಬುದು ನನಗೆ ಕೇವಲ ಒಂದು ಜಿಲ್ಲೆಯಲ್ಲ. ಬೆಂಗಳೂರು ಎಂಬುದು ನನಗೆ ಭಾವನಾತ್ಮಕ ಸೆಲೆ…

 

ವಿದ್ಯಾ ಹೊಸಮನಿ

ಕನ್ನಡ ವಿ.ವಿ., ಹಂಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next