Advertisement

ಗೃಹ ಇಲಾಖೆಗೆ ಸಲಹೆಗಾರ ಬೇಕಿಲ್ಲ

06:00 AM Jun 01, 2018 | Team Udayavani |

ಬೆಂಗಳೂರು: ಗೃಹ ಇಲಾಖೆಗೆ ಯಾವುದೇ ಸಲಹೆಗಾರರ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಸಮರ್ಥರಿದ್ದಾರೆ ಎಂದು ಹೇಳಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಪರೋಕ್ಷವಾಗಿ ಹಿಂದಿನ ಸರ್ಕಾರದಲ್ಲಿ ಗೃಹ ಇಲಾಖೆ ಸಲಹೆಗಾರರಾಗಿದ್ದ ಕೆಂಪಯ್ಯ ಅವರಿಗೆ “ಟಾಂಗ್‌’ ನೀಡಿದ್ದಾರೆ. 

Advertisement

ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಗೃಹ ಸಚಿವರ ಸಲಹೆಗಾರರಾಗಿ ಕೆಂಪಯ್ಯ ಮುಂದುವರಿಯುವುದಕ್ಕೆ ತಮ್ಮ ವಿರೋಧವಿದೆ ಎಂಬ ಸಂದೇಶವನ್ನು ಕುಮಾರ ಸ್ವಾಮಿ, ಈ ಮೂಲಕ ಮಿತ್ರಪಕ್ಷ ಕಾಂಗ್ರೆಸ್‌ಗೆ ರವಾನಿಸಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ನಂತರ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳು ಸಮರ್ಥರಿದ್ದಾರೆ. ಯಾವುದಾದರೂ ಇಲಾಖೆಗೆ ಸಲಹೆಗಾರರು ಅಗತ್ಯವಿದ್ದರೆ, ಕಾಂಗ್ರೆಸ್‌ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು. ಪೊಲೀಸ್‌ ಇಲಾಖೆಯಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡಲ್ಲ. ಅಧಿಕಾರಿಗಳೂ ಸಹ ಯಾವುದೇ ರಾಜಕೀಯ ಹಸ್ತಕ್ಷೇಪಗಳಿಗೆ ಮಣಿಯದೆ ನಿರ್ಭೀತಿಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಹಿರಿಯ ಪೊಲೀಸ್‌ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಪೊಲೀಸ್‌ ಇಲಾಖೆ ಯಾವುದೇ ರೀತಿಯ ಹಸ್ತಕ್ಷೇಪ ಇಲ್ಲದೆ ಕೆಲಸ ಮಾಡಲು ನಾನು ಮುಕ್ತವಾಗಿದ್ದೇನೆ. ಕಾನೂನು ಸುವ್ಯವಸ್ಥೆ ಪಾಲನೆ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಮಹಿಳೆಯರು, ಹಿರಿಯನಾಗರಿಕರು, ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಎಂದು ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಕಾನುನು ಬಾಹಿರ ಚಟುವಟಿಕೆಗಳನ್ನು ನಾನು ಸಹಿಸುವುದಿಲ್ಲ. ಅಂತಹ ಚಟುವಟಿಕೆಗಳನ್ನು ಮಟ್ಟ ಹಾಕಬೇಕು. ಪೊಲೀಸ್‌ ಠಾಣೆಗಳಲ್ಲಿ ಸಿವಿಲ್‌ ವ್ಯಾಜ್ಯಗಳು ಇತ್ಯರ್ಥಪಡಿಸುವುದು, ಪೊಲೀಸ್‌ ಅಧಿಕಾರಿಗಳು ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರ ಜತೆ ಕೈ ಜೋಡಿಸುವುದು ಮಾಡಬಾರದು ಎಂದು ತಾಕೀತು ಮಾಡಿದರು. ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ರಾಜು, ರಾಜ್ಯದಲ್ಲಿ ಮಕ್ಕಳ ಅಪಹರಣ ಕುರಿತ ವದಂತಿಗಳ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ  ಗೊಳ್ಳಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next