ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದ್ದು, ಬಿರುಸಿನಿಂದ ಮತಚಲಾಯಿಸಲು ಮತದಾರರು ಮತಗಟ್ಟೆಗೆ ಆಗಮಿಸುತ್ತಿದ್ದಾರೆ. ಕೆಲವೆಡೆ ಇವಿಎಂ ದೋಷದಿಂದಾಗಿ ಮತದಾನ ವಿಳಂಬವಾಗಿದ್ದರೆ. ಬೆಂಗಳೂರು, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಹಿರಿಯರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತಚಲಾಯಿಸುವ ಮೂಲಕ ಯುವ ಮತದಾರರಿಗೆ ಸ್ಫೂರ್ತಿ ತುಂಬಿದ್ದಾರೆ.
ಗಮನಸೆಳೆದ ಅಂಶಗಳು:
ಮತದಾನ ಮಾಡಿ, ಉಚಿತ ಬೆಣ್ಣೆದೋಸೆ, ತಿಂಡಿ ತಿನ್ನಿ:
ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ಮತದಾನ ಮಾಡಿದವರಿಗೆ ಭರ್ಜರಿ ಆಫರ್ ನೀಡಿದೆ. ಮತದಾನ ಮಾಡಿ ಬಂದು ಗುರುತು ತೋರಿಸಿದವರಿಗೆ ಉಚಿತ ಕಾಫಿ, ಬೆಣ್ಣೆ ದೋಸೆ, ತಿಂಡಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಮತಚಲಾಯಿಸಿ ಬಂದು ಸಾಲುಗಟ್ಟಿ ಸಾರ್ವಜನಿಕರು ಹೋಟೆಲ್ ಮುಂದೆ ನಿಂತಿರುವುದು ವಿಶೇಷತೆಯಾಗಿದೆ.
ಮತಗಟ್ಟೆ ಅಧಿಕಾರಿ ನಿಧನ:
ಬೆಂಗಳೂರಿನ ಸುಲ್ತಾನ್ ಷರೀಫ್ ಸರ್ಕಲ್ ಬಳಿ ಇರುವ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್ಚುವರಿ ಮತಗಟ್ಟೆ ಅಧಿಕಾರಿ ಶಾಂತಮೂರ್ತಿ ಹೃದಯಾಘಾತದಿಂದ ನಿಧನರಾದ ಘಟನೆ ನಡೆದಿದೆ. ಶಾಂತಮೂರ್ತಿಯವರು ಹನೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಗಿಡಕೊಟ್ಟು ಮತಜಾಗೃತಿ:
ಬೆಂಗಳೂರಿನ ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್ ವಿಶಿಷ್ಟ ಮತದಾನ ಜಾಗೃತಿಗೆ ಮುಂದಾಗಿದೆ. ಬಿ ಪ್ಯಾಕ್ ಎಂಬ ಎನ್ ಜಿಒ ಸಂಸ್ಥೆ ಮೊದಲ ಬಾರಿಗೆ ಹಾಗೂ ಹಲವು ವರ್ಷಗಳಿಂದ ಮತದಾನ ಮಾಡುತ್ತಿರುವ ಹಿರಿಯ ನಾಗರಿಕರಿಗೆ ಹಾಗೂ ಯುವಕ, ಯುವತಿಯರಿಗೆ ಗಿಡ ಕೊಡುವ ಮೂಲಕ ಮತದಾನ ಮಾಡೋದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಕಂಡು ಬಂತು.