ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಹಾಗೂ ಬಂಟಿಂಗ್ಸ್ ತೆರವುಗೊಳಿಸದ ಪಾಲಿಕೆ ಕ್ರಮಕ್ಕೆ ಅಧಿಕಾರಿಗಳನ್ನು ಬುಧವಾರ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಜತೆಗೆ ಮಧ್ಯಾಹ್ನದೊಳಗೆ ವರದಿ ನೀಡುವಂತೆ ಸೂಚಿನೆ ನೀಡಿತ್ತು.
ಆ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು, ಪಾಲಿಕೆಯ ಅಧಿಕಾರಿಗಳು ಎಲ್ಲ ಕೆಲಸಗಳನ್ನು ಬದಿಗೊತ್ತಿ ಕೂಡಲೇ ನಗರದಲ್ಲಿರುವ ಫ್ಲೆಕ್ಸ್, ಬ್ಯಾನರ್‌ಗಳ ತೆರವು ಕಾರ್ಯಾಚರಣೆ ಆರಂಭಿಸುವುದಂತೆ ಆದೇಶ ಹೊರಡಿಸಿ, ಮಧ್ಯಾಹ್ನ 2 ಗಂಟೆಯೊಳಗೆ ನಗರದಲ್ಲಿರುವ ಫ್ಲೆಕ್ಸ್ ಬ್ಯಾನರ್‌ಗಳನ್ನು ತೆರವು ಮಾಡಿ ಫೋಟೋಗಳನ್ನು ವಾಟ್ಸಾಪ್ ಮೂಲಕ ತಮಗೆ ಮಾಹಿತಿ ನೀಡುವಂತೆ ಆದೇಶಿಸಿದ್ದರು.
ಆ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿದ ಪಾಲಿಕೆ ಸಿಬ್ಬಂದಿ, ಮಧ್ಯಾಹ್ನ 2 ಗಂಟೆ ವೇಳೆಗೆ ಕೇಂದ್ರ ಭಾಗದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿದ್ದ 5 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಾರೆ.
ಫ್ಲೆಕ್ಸ್ ಅಳವಡಿಸಿದರೆ ಜೈಲುವಾಸ ಗ್ಯಾರೆಂಟಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಗೂ ಬಾವುಟನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಅದರಂತೆ ತಪ್ಪಿತಸ್ಥರ ವಿರುದ್ಧ ಕೆಎಂಸಿ ಕಾಯ್ದೆ 1976ರ ಮತ್ತು ಕರ್ನಾಟಕ ಮುಕ್ತ ಪ್ರದೇಶಗಳ (ಸಂರಕ್ಷಣೆ) ಕಾಯ್ದೆ 1981ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ಕಾಯ್ದೆಯಂತೆ ತಪ್ಪಿತಸ್ಥರಿಗೆ 6 ತಿಂಗಳವರೆಗೆ ಜೈಲುವಾಸ ಅಥವಾ 1000 ರೂ. ದಂಡ ಅಥವಾ ದಂಡದೊಂದಿಗೆ ಜೈಲುವಾಸ ವಿಧಿಸಲಾಗುತ್ತದೆ.
ನಗರದಲ್ಲಿ 12 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್ ಬ್ಯಾನರ್‌ಗಳಿವೆ ಎಂದು ಅಂದಾಜಿಸಲಾಗಿದ್ದು, ಬುಧವಾರ ತಡರಾತ್ರಿಯವರೆಗೆ ಸುಮಾರು 8 ಸಾವಿರ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ. ಗುರುವಾರ ಕಾರ್ಯಾಚರಣೆ ಪೂರ್ಣವಾಗಲಿದ್ದು, ಉಪಮುಖ್ಯಮಂತ್ರಿಗಳು ಫ್ಲೆಕ್ಸ್ ಅಳವಡಿಕೆ ಮಾಡುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ