ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಆದಾಯ ತೆರಿಗೆ ವಂಚನೆ, ಸುಳ್ಳು ಮಾಹಿತಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ ಶಿವಕುಮಾರ್ ಆಪ್ತ ಉದ್ಯಮಿ ಸಚಿನ್ ನಾರಾಯಣ್ ಸೇರಿದಂತೆ ಇತರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣ ರದ್ದುಕೋರಿ ಆರೋಪಿ ಸಚಿನ್ ನಾರಾಯಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾ. ಬಿ. ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆದಾಯ ತೆರಿಗೆ ಇಲಾಖೆ ಕಾಯಿದೆಯನ್ವಯ ಆರ್ಥಿಕ ಅಪರಾಧ, ತೆರಿಗೆ ವಂಚನೆ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳುವ ಮುನ್ನ ಸಕ್ಷಮ ಪ್ರಾಧಿಕಾರವಾದ ಐಟಿ ಆಯುಕ್ತರ ಅನುಮತಿ ಪಡೆದುಕೊಳ್ಳಬೇಕು. ಆದರೆ, ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲು ಐಟಿ ಪ್ರಧಾನ ನಿರ್ದೇಶಕರ ಮುಂದೆ ಅನುಮತಿ ಪಡೆಯಲಾಗಿದೆ. ಈ ಪ್ರಕ್ರಿಯೆ ಕಾನೂನು ಬಾಹಿರ. ಹೀಗಾಗಿ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡುವಂತೆ ನ್ಯಾಯಪೀಠಕ್ಕೆ ಕೋರಿದರು. ಈ ವಾದ ಪರಿಗಣಿಸಿದ ನ್ಯಾಯಪೀಠ, ತಡೆಯಾಜ್ಞೆ ನೀಡಿದೆ.
ಪ್ರಕರಣದ ಆರೋಪಿಗಳು ಆ. 2ರಂದು ವಿಚಾರಣೆಗೆ ಹಾಜರಾಗು ವಂತೆ ವಿಶೇಷ ನ್ಯಾಯಾಲಯ ಸೂಚಿಸಿತ್ತು. ಇದೀಗ ಪ್ರಕರಣಕ್ಕೆ ತಡೆಯಾಜ್ಞೆ ದೊರೆತಿರುವ ಕಾರಣ ಪ್ರಕರಣದ ಎರಡನೇ ಆರೋಪಿ ಸಚಿನ್ ನಾರಾಯಣ್‌ಗೆ ರಿಲೀಫ್ಸಿ ಕ್ಕಂತಾಗಿದೆ. 2017ರಲ್ಲಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸ ಹಾಗೂ ದೆಹಲಿಯ ಕರ್ನಾಟಕ ಭವನ, ಸಫರ್ ಜಂಗ್ ಫ್ಲ್ಯಾಟ್‌ಗಳಲ್ಲಿ ದಾಳಿ ನಡೆಸಿದ್ದ ವೇಳೆ ದೊರೆತ ಹಣ, ಡೈರಿ ಸೇರಿ ಇನ್ನಿತರೆ ದಾಖಲೆಗಳನ್ನು ವಶಪಡಿಸಿ ಕೊಂಡಿದ್ದ ಐಟಿ ಅಧಿಕಾರಿಗಳು, ಸಚಿನ್ ನಾರಾಯಣ್ ಸೇರಿ ಇನ್ನಿತರರನ್ನು ವಿಚಾರಣೆ ಗೊಳಪಡಿಸಿದ್ದರು.
ವಿಚಾರಣೆ ವೇಳೆ ಸಚಿನ್ ನಾರಾಯಣ್ ಸೇರಿ ಇತರೆ ಆರೋಪಿಗಳು ನೀಡಿದ ಮಾಹಿತಿಗೂ ದಾಖಲೆ ಗಳಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡು ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದ ಐಟಿ ಇಲಾಖೆ ಉಪ ನಿರ್ದೇಶಕ ಟಿ.ಸುನಿಲ್ ಗೌತಮ್ ಜೂನ್ 20ರಂದು ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದು, ಪ್ರಕರಣದಲ್ಲಿ ಡಿಕೆ, ಸಚಿನ್ ನಾರಾಯಣ್, ಸುನೀಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ, ಎನ್.ರಾಜೇಂದ್ರ ಅವರನ್ನು
1ರಿಂದ 5 ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.