Advertisement

ರಾಜೀವ ಗಾಂಧಿ ವಿವಿ ಸ್ಥಳಾಂತರಕ್ಕೆ ತಡೆ ನೀಡಲು ಹೈಕೋರ್ಟ್‌ ನಕಾರ

12:58 PM Mar 22, 2017 | |

ಬೆಂಗಳೂರು: ಜಯನಗರದಲ್ಲಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಸ್ಥಳಾಂತರ ಮಾಡುವ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನಿರಾಕರಿಸಿರುವ ಹೈಕೋರ್ಟ್‌, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ  ಸರ್ಕಾರಕ್ಕೆ ನಿರ್ದೇಶನ ನೀಡಿದೆ.

Advertisement

ರಾಜ್ಯ ಸರ್ಕಾರ ರಾಮನಗರ ಜಿಲ್ಲೆಯ ಚುನಾವಣೆ ರಾಜಕೀಯ ಉದ್ದೇಶ‌ದಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸದೇ ಸ್ವ ಹಿತಾಸಕ್ತಿಯಿಂದ ಸ್ಥಳಾಂತರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ವಾಯತ್ತ ಕಾಲೇಜುಗಳು ಅರ್ಜಿ ಸಲ್ಲಿಸಿದ್ದವು.

ಈ ಸಂಬಂಧ ಮಂಗಳವಾರ ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ನಡೆಸಿದ ಅರ್ಜಿವಿಚಾರಣೆ ವೇಳೆ ಹಾಜರಿದ್ದ ವಿಶ್ವವಿದ್ಯಾಲಯದ ಪರ ವಕೀಲರು, ಸಿಂಡಿಕೇಟ್‌ ಸಭೆಯ ನಿರ್ಧಾರದಂತೆ ಜಯನಗರದಿಂದ ಕೇವಲ ತಾಂತ್ರಿಕ ವಿಭಾಗವನ್ನು ಮಾತ್ರ ಮೊದಲು ಸ್ಥಳಾಂತರ ಮಾಡಲಾಗುತ್ತದೆ ಒಂದೇ ಬಾರಿಗೆ  ಪರೀಕ್ಷಾ ವಿಭಾಗವನ್ನು ಸ್ಥಳಾಂತರ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದರಿಂದ ಹಂತ ಹಂತವಾಗಿ ಸ್ಥಳಾಂತರ ಮಾಡುವುದಾಗಿ ನಿರ್ಧರಿಸಲಾಗಿದೆ ಎಂಬ ಪ್ರಮಾಣ ಪತ್ರ ಸಲ್ಲಿಸಿದರು.

ರಾಜ್ಯಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಪೊನ್ನಣ್ಣ , ರಾಜ್ಯ ಸರಕಾರ ವಿವಿ ಸ್ಥಳಾಂತರ ಮಾಡಲು ತೀರ್ಮಾನಿಸಿ 2007 ರಲ್ಲಿಯೇ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರ ತಗೆದುಕೊಳ್ಳಲು ಸರ್ಕಾರಕ್ಕೆ ವಿವೇಚನಾ ಅಧಿಕಾರವಿದೆ. ಆದರೆ ಕೆಲ ಅರ್ಜಿದಾರರು ಸ್ವ ಹಿತಾಸಕ್ತಿಗಾಗಿ   ಪದೇ ಪದೇ ತಕರಾರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ.

ಹೀಗಾಗಿ ಇಂತಹ ಅರ್ಜಿಗಳನ್ನು ಮಾನ್ಯ ಮಾಡದೆ ವಜಾಗೊಳಿಸಬೇಕು ಎಂದು ಕೋರಿದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅಲ್ಲದೆ ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ವಿಶ್ವವಿದ್ಯಾಲಯ ಹಾಗೂ ಸರ್ಕಾರಕ್ಕೆ ಸೂಚಿಸಿ  ಅರ್ಜಿ ವಿಚಾರಣೆ ಮುಂದೂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next