Advertisement

ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್‌ ತರಾಟೆ

12:46 PM Aug 28, 2018 | Team Udayavani |

ಬೆಂಗಳೂರು: ಬಡವಾಣೆ ನಿರ್ಮಾಣ ಉದ್ದೇಶಕ್ಕಾಗಿ ಬಿಡಿಎಗೆ ಭೂಮಿ ಬಿಟ್ಟುಕೊಟ್ಟವರಿಗೆ ಪರ್ಯಾಯ ಭೂಮಿ ನೀಡದೆ ಸತಾಯಿಸುತ್ತಿರುವ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

Advertisement

ಈ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್‌. ಚೌಹಾಣ್‌ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಗೆ ಹಾಜರಿದ್ದ ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌, ನಗರಾಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡಿತು.

ಬಡಾವಣೆ ನಿರ್ಮಾಣಕ್ಕೆ ಜಮೀನು ಸ್ವಾಧೀನಪಡಿಸಿಕೊಳ್ಳುವಾಗ ರಾಜನ ತರಹ ಅತ್ಯುತ್ಸಾಹ ತೋರಿಸುತ್ತೀರಿ. ಅವರಿಗೆ ಪರ್ಯಾಯ ಭೂಮಿ ನೀಡುವಾಗ ಅನಗತ್ಯ ವಿಳಂಬ ಮಾಡುತ್ತೀರಿ. ಇದೊಂಥರಾ ವಿಮಾ ಕಂಪೆನಿಗಳು ಜನರಿಂದ ಪಾಲಿಸಿ ಮಾಡಿಸಿಕೊಂಡ ಬಳಿಕ, ವಿಮಾ ಸೌಲಭ್ಯಗಳನ್ನು ಪಡೆಯಲು ಬಂದಾಗ ಹತ್ತಾರು ನಿಯಮಗಳನ್ನು ಹೇರುವಂತಿದೆ ನಿಮ್ಮ ಕಾರ್ಯವೈಖರಿ ಎಂದು ನ್ಯಾಯಪೀಠ ಅಸಮಾಧಾನವ್ಯಕ್ತಪಡಿಸಿತು.

ಬಲಾಡ್ಯರು, ರಾಜಕಾರಣಿಗಳ ಕೆಲಸವಾಗಿದ್ದರೆ ಬೇಗ ಮುಗಿಸುತ್ತಿದ್ದಿರಿ. ಆವರು ಹೇಗೋ ಮಾಡಿ ಜಮೀನು ಪಡೆದುಕೊಳ್ಳುತ್ತಾರೆ. ಬಡವರು ನಿಮಗೆ ಜಮೀನು ಕೊಟ್ಟು ಪರ್ಯಾಯ ಭೂಮಿ ಸಿಗದಿದ್ದರೆ ಎಲ್ಲಿಗೆ ಹೋಗಬೇಕು. ಅರ್ಜಿದಾರರಿಗೆ ಭೂಮಿ ನೀಡುವಂತೆ  ತೀರ್ಪು ನೀಡಿ ಎರಡು ವರ್ಷ ಕಳೆದರೂ ಇದುವರೆಗೂ ಪಾಲಿಸಿಲ್ಲ ಎಂದರೆ ಏನರ್ಥ?  

ಪರ್ಯಾಯ ಭೂಮಿ ಕೊಡುತ್ತೇವೆ ಎಂದು ನೀವು ಹೇಳುತ್ತೀರಿ, ಸಚಿವ ಸಂಪುಟದಲ್ಲಿ ಏಕವ್ಯಕ್ತಿಗೆ ಜಮೀನು ಮಂಜೂರು ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನವಾಗುತ್ತದೆ ಎಂದು  ನ್ಯಾಯಪೀಠ ಖಾರವಾಗಿ  ಹೇಳಿತು. ಕೋರ್ಟ್‌ ಆದೇಶಗಳನ್ನು ಹಗುರವಾಗಿ ಪರಿಗಣಿಸಿ ಉಲ್ಲಂಘನೆ ಮಾಡುವುದು ಪದೇ ಪದೇ ಆಗುತ್ತಿದೆ. ಸರ್ಕಾರದ ಈ ಅಸಡ್ಡೆ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.

Advertisement

ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ರಾಜ್‌ ಕುಮಾರ್‌ ಖತ್ರಿ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪ ನಿಗದಿಗೆ ಸಂಬಂಧಿಸಿದಂತೆ  ಸೆ.5ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು. ಆ ದಿನ ವಿಚಾರಣೆಗೆ ಮೂವರು ಹಾಜರಿರುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣ ಏನು?: ಆರ್‌ಎಂವಿ ಬಡವಾಣೆ ನಿರ್ಮಾಣಕ್ಕೆ  ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರ್ಯಾಯ ಭೂಮಿ ನೀಡುವಂತೆ ಏಕಸದಸ್ಯ ಪೀಠ  2016ರಲ್ಲಿ ತೀರ್ಪು ನೀಡಿದ್ದರೂ ಇದುವೆರಗೂ ಪಾಲಿಸಿಲ್ಲ ಎಂದು ಎಸ್‌.ಎನ್‌ ನರಸಿಂಹ ಮೂರ್ತಿ, ಸುಧಾ ಎಂಬುವವರು ಬಿಡಿಎ,ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದಾರೆ. ಅರ್ಜಿದಾರರ ಪರವಾಗಿ  ವಕೀಲ ಚಂದ್ರನಾಥ ಅರಿಗ ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next