ಬೆಂಗಳೂರು: ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯದ ಆದೇಶವಿದ್ದರೂ, ಅದನ್ನು ಪರಿಗಣಿಸಿದೆ ಕಾಂಪೌಂಡ್ ಗೋಡೆ ಕೆಡವಿದ ಆರೋಪಕಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಲೋಕೋಪಯೋಗಿ ಇಲಾಖೆಯ ಐವರು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವ ಪ್ರಕ್ರಿಯೆಯನ್ನು ಹೈಕೋರ್ಟ್ ಮಂಗಳವಾರ ಕೈ ಬಿಟ್ಟಿತು.
ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾ. ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ “ಪ್ರಕರಣದಲ್ಲಿ ಕೋರ್ಟ್ ಆದೇಶ ಉಲ್ಲಂಘನೆಯಾಗಿಲ್ಲ, ಅರ್ಜಿದಾರರ ಮನೆಯ ಕಾಂಪೌಂಡ್ ಕೆಡವಿಲ್ಲ. ಪಕ್ಕದ ಪೆಟ್ರೋಲ್ ಬಂಕ್ ಕಾಂಪೌಂಡ್ ಕೆಡವಲಾಗಿದೆ’ ಎಂದು ಮನವರಿಕೆ ಮಾಡಿಕೊಟ್ಟರು.
ಈ ಪ್ರಮಾಣ ಪತ್ರವನ್ನು ಮಾನ್ಯ ಮಾಡಿದ ನ್ಯಾಯಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹೇಮಲತಾ, ಸಹಾಯಕ ಎಂಜಿನಿಯರ್‌ಗಳಾದ ರಾಜಣ್ಣ, ಜಯಕುಮಾರ್, ಬಂಗಾರಸ್ವಾಮಿ ಹಾಗೂ ಸಬ್ ಇನ್‌ಸ್ಪೆಕ್ಟರ್ ಚೈತನ್ಯ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಕ್ರಮವನ್ನು ಕೈಬಿಟ್ಟಿತು.
ಚನ್ನಪಟ್ಟಣದ ಕುವೆಂಪುನಗರದ 1ನೇ ಕ್ರಾಸ್‌ನಲ್ಲಿರುವ ಜಿ.ಎಂ.ನಂದಿನಿ ಅವರ ಮನೆಯ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಪೆಟ್ರೋಲ್ ಬಂಕ್ ಗೋಡೆಯನ್ನು ರಸ್ತೆ ಅಗಲೀಕರಣದ ಉದ್ದೇಶಕ್ಕಾಗಿ ಅಧಿಕಾರಿಗಳು ಕೆಡವಿದ್ದರು.
ಈ ಸಂಬಂಧ ನಂದಿನಿ ಮತ್ತು ಅವರ ಇಬ್ಬರು ಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ಕಳೆದ ತಿಂಗಳ 5ರಂದು, ಗೋಡೆ ಕೆಡವಬಾರದು. ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂದು ಆದೇಶಿಸಿತ್ತು. ಆದರೆ, ಕಾಂಪೌಂಡ್ ಕೆಡವಲಾಗಿದೆ ಎಂದು ಹೈಕೋರ್ಟ್‌ಗೆ ದೂರಿದ್ದರು.