ಇಂಥದ್ದೊಂದು ಸಂದೇಶ ಹೊತ್ತು ಮಕ್ಕಳ ಸಿನಿಮಾವೊಂದು ಬರುತ್ತಿದೆ. ಆ ಚಿತ್ರಕ್ಕೆ “1098′ ಎಂದು ನಾಮಕರಣ ಮಾಡಲಾಗಿದೆ. “ಸೇವ್ ಚೈಲ್ಡ್‌ಹುಡ್’ ಎಂಬ ಅಡಿಬರಹವೂ ಇದೆ. ಅಲ್ಲಿಗೆ ಇದು ಪಕ್ಕಾ ಮಕ್ಕಳ ಕುರಿತಾದ ಚಿತ್ರ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಚಿತ್ರದ ಮೂಲಕ ಶ್ವೇತಾ ಎನ್.ಎ.ಶೆಟ್ಟಿ ನಿರ್ದೇಶಕರಾಗಿದ್ದಾರೆ. ಕಥೆ, ಚಿತ್ರಕಥೆಯ ಜವಾಬ್ದಾರಿಯೂ ಇವರದೇ. ಚಿತ್ರ ಪೂರ್ಣಗೊಳಿಸಿರುವ ನಿರ್ದೇಶಕಿ ಶ್ವೇತಾ, ಇದೇ ಜೂನ್ 12 ರಂದು ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದಾರೆ. ಜೂನ್ 12 ಮಂಗಳವಾರ. ಅಂದು ಚಿತ್ರ ಬಿಡುಗಡೆಯೇ? ಈ ಪ್ರಶ್ನೆ ಎದುರಾಗಬಹುದು. ಅದಕ್ಕೆ ಕಾರಣ ಕೊಡುವ ಶ್ವೇತಾ, ಅಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಹಾಗಾಗಿ ಅಂದೇ ಚಿತ್ರ ಬಿಡುಗಡೆ ಮಾಡುವುದು ತಂಡದ ಉದ್ದೇಶ ಎನ್ನುತ್ತಾರೆ ಶ್ವೇತಾ.
Advertisement
“1098′ ಅನ್ನೋದು ಮಕ್ಕಳ ಸಹಾಯವಾಣಿ ಸಂಖ್ಯೆ. ಹಲವು ಸಂಸ್ಥೆಗಳು ಈ ನಂಬರ್ ಬಳಕೆ ಮಾಡುತ್ತವೆ. ನಮ್ಮ ಕಥೆಗೆ ಈ ಶೀರ್ಷಿಕೆಯೇ ಸರಿಹೊಂದುತ್ತೆ ಎಂಬ ಕಾರಣಕ್ಕೆ ನಾಮಕರಣ ಮಾಡಲಾಗಿದೆ. ಚಿತ್ರ ಕಳೆದ 2016 ರಲ್ಲೇ ರೆಡಿಯಾಗಿತ್ತು. ಆದರೆ, ಒಂದಷ್ಟು ಸಮಸ್ಯೆಗಳು ಎದುರಾದವು. ಹಲವು ಅಡೆತಡೆ ಎದುರಿಸಿ ಬರಬೇಕಾಯಿತು. ಚಿತ್ರದಲ್ಲಿ ಸಾಕಷ್ಟು ಅಂಶಗಳಿವೆ. ತಾಯಿ ಸೆಂಟಿಮೆಂಟ್ ಇದೆ, ಮುಗ್ಧ ಬಾಲಕರ ನೋವು, ನಲಿವಿನ ಚಿತ್ರಣವಿದೆ, ಬ್ರೋಕರ್‌ಗಳು ಮಕ್ಕಳನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ತಾರೆ ಎಂಬ ಸಂದೇಶವಿದೆ, ವಿನಾಕಾರಣ ಮನೆಬಿಟ್ಟು ಬರುವ ಮಕ್ಕಳು ಹೇಗೆಲ್ಲಾ ಸಮಸ್ಯೆಗೆ ಸಿಲುಕಿ ಪರದಾಡುತ್ತಾರೆ ಎಂಬ ಮನಕಲಕುವ ಚಿತ್ರಣವೂ ಇದೆ. ನಾನು ಈ ಹಿಂದೆ ಹಲವು ಎನ್‌ಜಿಓ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಹತ್ತಿರದಿಂದ ಬಾಲಕಾರ್ಮಿಕರ ಸಮಸ್ಯೆ ನೋಡಿದ್ದೇನೆ. ಕೆಲವು ಬೀದಿ ನಾಟಕ, ಶಾರ್ಟ್ ಫಿಲ್ಮ್ ಮಾಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದುಂಟು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಕ್ಕಳ ಕುರಿತ ಸಮಸ್ಯೆಯನ್ನು ಎಲ್ಲರಿಗೂ ಗೊತ್ತಾಗುವಂತೆ ಮಾಡಬೇಕು ಅದರಲ್ಲೂ 1098 ಅಂದರೆ ಏನೆಂಬುದು ತಿಳಿಯಬೇಕು. ಅದಕ್ಕಾಗಿ ಈ ಚಿತ್ರ ಮಾಡಿದ್ದೇವೆ’ ಎಂದು ವಿವರ ಕೊಡುತ್ತಾರೆ ಶ್ವೇತಾ.