ಕಾರವಾರ: ಆಗಸ್ಟ್ ಮೂರನೇ ವಾರದಲ್ಲಿ 2 ಕಡಲಾಮೆ,ಕೊನೆಯ ವಾರದಲ್ಲಿ ಹ್ವಾಕ್ಸ್ ಬಿಲ್ ಪ್ರಬೇಧದ ಕಡಲಾಮೆ ಸಾವನ್ನಪ್ಪಿದ್ದು, ಸೆ.1 ರಂದು ಹಂಪ್ ಬ್ಯಾಕ್ ಡಾಲ್ಫಿನ್ ಸಾವನ್ನಪ್ಪಿದೆ. ಇದು ಕಳವಳಕಾರಿ ಸಂಗತಿ ಎಂದು ಇಲ್ಲಿನ ಕಡಲ ಜೀವಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ|ಶಿವಕುಮಾರ್ ಹರಗಿ ಹೇಳಿದ್ದಾರೆ.
ಉದಯವಾಣಿ ಜೊತೆ ಶನಿವಾರ ಮಾತನಾಡಿದ ಅವರು, ಈಗ 15 ದಿನಗಳ ಅಂತರದಲ್ಲಿ ನಡೆದ ಕಡಲ ಜೀವಿಗಳ ಸಾವಿಗೆ ಅಧ್ಯಯನ ನಡೆಯಲಿದೆ. ತಿಳುಮಾತಿ ಬೀಚ್‌ನಲ್ಲಿ ಅಪರೂಪದ ಕಡಲಾಮೆ ಪತ್ತೆಯಾಗಿದೆ. ಹ್ವಾಕ್ಸ್‌ಬಿಲ್ ಪ್ರಭೇದದ ಕಡಲಾಮೆ ಮೊಟ್ಟ ಮೊದಲಿಗೆ ಅರಬ್ಬೀ ಸಮುದ್ರದಲ್ಲಿ ಕಾಣಿಸಿಕೊಂಡಿದೆ. ಈ ಪ್ರಭೇದ ಅಂಡಮಾನ್,ನಿಕೋಬಾರ್ ಮತ್ತು ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯಲ್ಲಿ ಕಾಣಿಸುತ್ತಿತ್ತು. ಈಗ ನಮ್ಮಲ್ಲಿ ಕಾಣಿಸಿಕೊಂಡದ್ದು, ಹೊಸ ಅಧ್ಯಯನಕ್ಕೆ ಕುತೂಹಲ ಮೂಡಿಸಿದೆ ಎಂದರು.
ಕಡಲ ಜೀವ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪಂಚಮಿ ಅಪರೂಪದ ಆಮೆಯ ಮಾಹಿತಿ ತಂದಿದ್ದಾಳೆ. ಅದರ ಬಾಯಿ ಗಿಡುಗದ ಕೊಕ್ಕಿನಂತೆ ಇರುವುದು ವಿಶೇಷ ಎಂದರು.ವಿಶೇಷ ಪ್ರಭೇದ ಹ್ವಾಕ್ಸ್ ಬಿಲ್ ಆಮೆಗಳು ನಮ್ಮಲ್ಲಿ ಇರುವುದು ಮೃತ ಸ್ಥಿತಿಯಲ್ಲಿ ಪತ್ತೆಯಾದ ಹ್ವಾಕ್ಸ್‌ಬಿಲ್‌ನಿಂದ ತಿಳಿದುಬಂದಿದೆ. ಕಳೆದ ಜೂನ್ -ಜುಲೈ ತಿಂಗಳಲ್ಲಿ ಮೀನುಗಾರಿಕೆ ಬಂದ್ ಆಗಿದ್ದರಿಂದ ಈ ಜಲಚರಗಳು ಸ್ವತ್ಛಂದವಾಗಿ ಸಮುದ್ರದಲ್ಲಿ ವಿಹರಿಸಿಕೊಂಡಿರುತ್ತವೆ. ಇದೀಗ ಮೀನುಗಾರಿಕೆ ಪುನರಾರಂಭಗೊಂಡ ಬೆನ್ನಲ್ಲೇ ಅಪರೂಪದ ಜಲಚರಗಳು ಸಾವನ್ನಪ್ಪುತ್ತಿವೆ.
ಡಾಲ್ಫಿನ್ ಮೀನುಗಾರಿಕೆ ಬಲೆಗೆ ಸಿಲುಕಿದ್ದರಿಂದ ಮೃತಪಡುತ್ತಿರುವುದು ಖಚಿತವಾಗಿದೆ. ಡಾಲ್ಫಿನ್ ಹಾಗೂ ಕಡಲಾಮೆಗಳು ಸಮುದ್ರದಾಳದ ಸುಮಾರು 20 ಮೀಟರ್ ಆಳದಲ್ಲಿ ಇರುವ ಜೀವಿಗಳಾಗಿದ್ದು ಅವು ಉಸಿರಾಟಕ್ಕಾಗಿ ಸಮುದ್ರ ಮೇಲ್ಮೈಗೆ ಬಂದುಹೋಗುತ್ತವೆ. ಆದರೆ ಮೀನುಗಾರಿಕೆ ಬಲೆಗೆ ಸಿಲುಕಿದ ಸಂದರ್ಭದಲ್ಲಿ ಮೇಲೆ ಬರುವುದು ಸಾಧ್ಯವಾಗದೇಉಸಿರುಗಟ್ಟಿ ಸಾಯುತ್ತಿವೆ. ಹೀಗಾಗಿ ಇವುಗಳ ಕುರಿತು ಮೀನುಗಾರರಿಗೂ ಸೂಕ್ತ ಜಾಗೃತಿ ಮೂಡಿಸುವ ಮೂಲಕ ಅವುಗಳ ರಕ್ಷಣೆ ಮಾಡಬೇಕು ಎಂದು ಡಾ|ಶಿವಕುಮಾರ್ ಹೇಳಿದರು.
ಹ್ವಾಕ್ಸ್‌ಬಿಲ್ ಆಮೆ: ಹ್ವಾಕ್ಸ್‌ಬಿಲ್ ಆಮೆ ಸಿಕ್ಕಿದ್ದು ತಿಳುಮಾತಿ ಕಡಲತೀರದಲ್ಲಿ. ಇದು 76 ಸೆಂ.ಮೀ. ಉದ್ದ ಇದ್ದು, 100 ಕಿ.ಗ್ರಾಂ ತೂಕದ ತನಕ ಬೆಳೆಯುತ್ತವೆ. ಇದರ ಬಾಯಿ ಗಿಡುಗದ ಕೊಕ್ಕನ್ನು ಹೋಲುತ್ತದೆ ಎಂದರು. ಆಮೆಗಳ ಮೈಮೇಲೆ ಗಾಯಗಳಿರಲಿಲ್ಲ. ಆದರೆ ಆಮೆಗಳು ಉಸಿರುಗಟ್ಟಿ ಸಾವನ್ನಪ್ಪಿರಬಹುದು.ಇವು ಸಮುದ್ರದಲ್ಲಿ ತಾಸಿಗೊಮ್ಮೆ ಮೇಲೆ ಬಂದು ಉಸಿರಾಡುತ್ತವೆ. ನಂತರ ಕಡಲಾಳಕ್ಕೆ ಇಳಿಯುತ್ತವೆ ಎಂದು ಅವರು ವಿವರಿಸಿದರು.
ಮಾಜಾಳಿ ದಂಡೇಭಾಗದ ಕಡಲತೀರದಲ್ಲಿ ಸಿಕ್ಕ ಹಂಪ್ ಬ್ಯಾಕ್ ಡಾಲ್ಫಿನ್ 2.8 ಮೀಟರ್ ಉದ್ದ ಇತ್ತು.1.7 ಮೀಟರ್ ಸುತ್ತಳತೆ ಇತ್ತು. ಇದು ದೊಡ್ಡ ಗಾತ್ರದ ಡಾಲ್ಫಿನ್. ಇಷ್ಟು ದೊಡ್ಡ ಗಾತ್ರದ ಡಾಲ್ಫಿನ್ ಸಹಸಿಕ್ಕಿದ್ದು ಇದೇ ಮೊದಲು. ಅರಣ್ಯಾಧಿಕಾರಿಗಳುಸಹ ಸ್ಥಳಕ್ಕೆ ಭೇಟಿ ನೀಡಿ, ಪಶುವೈದ್ಯರನ್ನು ಕರೆಸಿ ಶವಪರೀಕ್ಷೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ಬರಬೇಕಿದೆ.ಪ್ರಾಥಮಿಕ ವರದಿ ಪ್ರಕಾರ ಡಾಲ್ಫಿನ್ ಉಸಿರುಗಟ್ಟಿ ಸತ್ತಿದೆ ಎಂದು ಹೇಳಲಾಗಿದೆ.ಡಿಸಿಎಫ್ ವಸಂತ ರೆಡ್ಡಿ ಅವರು ದಂಡೇಭಾಗದಲ್ಲಿ ಸತ್ತ ಸ್ಥಿತಿಯಲ್ಲಿ ಸಿಕ್ಕ ಡಾಲ್ಫಿನ್‌ನನ್ನು ವೀಕ್ಷಿಸಿದ್ದು, ಮರಣೋತ್ತರ ಪರೀಕ್ಷೆಯ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.
ಮರಣೋತ್ತರ ವರದಿ ಬಂದ ಮೇಲೆ ಮುಂದಿನ ಕ್ರಮಕ್ಕೆ ಬಿಗಿ ನಿಲುವು ತಾಳಲಾಗುವುದು ಎಂದಿದ್ದಾರೆ. ಮೃತ ಡಾಲ್ಫಿನ್ ಹೆಣ್ಣಾಗಿದ್ದು, ಇದು ಈಚೆಗೆ ಮರಿಗಳಿಗೆ ಜನ್ಮ ನೀಡಿದೆ ಎಂದು ಊಹಿಸಲಾಗಿದೆ. ಮೃತ ಡಾಲ್ಫಿನ್ ಮೇಲೆ ಗಾಯದ ಗುರುತುಗಳಿಲ್ಲ. ತುಂಬಾ ಹೊತ್ತು ಸಮುದ್ರದ ಆಳದಿಂದ ಮೇಲೆ ಬರದಂತೆ ಸಿಕ್ಕಿಹಾಕಿಕೊಂಡ ಕಾರಣ ಉಸಿರುಗಟ್ಟಿ ಸತ್ತಿರಬಹುದು ಎಂದು ಶಂಕಿಸಲಾಗಿದೆ.