Advertisement

ಸಭಿಕರ ಒತ್ತಾಯಕ್ಕೆ ಕುಣಿದು ಕುಪ್ಪಳಿಸಿದ ಹ್ಯಾಟ್ರಿಕ್‌ ಹೀರೊ ಶಿವಣ್ಣ

12:15 PM Jan 14, 2018 | |

ಮೈಸೂರಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಆರು ದಿನಗಳ ಕಾಲ ನಡೆಯುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ತಾರಾ ಮೆರಗಿನೊಂದಿಗೆ ಶನಿವಾರ ವರ್ಣರಂಜಿತ ಚಾಲನೆ ನೀಡಿ ಸಾಂಸ್ಕೃತಿಕ ಮೇಳ ನಟ ಡಾ.ಶಿವರಾಜ್‌ ಕುಮಾರ್‌ ಉದ್ಘಾಟಿಸಿದರು.

Advertisement

ತಮ್ಮ ಉದ್ಘಾಟನಾ ಭಾಷಣದಲ್ಲಿ ಮಫ್ತಿ ಚಲನಚಿತ್ರದ ಡೈಲಾಗ್‌ ಹೊಡೆದದ್ದರಿಂದ ಸಭಿಕರು ಹಾಡು ಹೇಳುವಂತೆ ಒತ್ತಾಯಿಸಿದರು. ಸಭಿಕರ ಒತ್ತಾಯಕ್ಕೆ ಮಣಿದ ಶಿವರಾಜ್‌ ಕುಮಾರ್‌ ಅವರು, ತಮ್ಮ ಟಗರು ಚಿತ್ರದ ವಾರೆ ನೋಟ ನೋಡಿಲ್ಲಿ… ಹಾಡನ್ನು ಹೇಳಲು ಪ್ರಯತ್ನಿಸಿದರಾದರು ಸರಿಬರದಿದ್ದಾಗ ಮೈಕ್‌ಸೆಟ್‌ನಲ್ಲಿ ಅದೇ ಹಾಡನ್ನು ಪ್ಲೇ ಮಾಡಲಾಯಿತು.

ಹಾಡನ್ನು ಪ್ಲೇ ಮಾಡಿದಾಗ ಪೋಡಿಯಂ ಬಳಿಯೇ ನಿಂತು ಜನರತ್ತ ಕೈ ಎತ್ತಿ ಆಕ್ಷನ್‌ ಮಾಡಿದ ಶಿವರಾಜ್‌ ಕುಮಾರ್‌ ಅವರು, ಜನರ ಒತ್ತಾಯಕ್ಕೆ ಕಟ್ಟುಬಿದ್ದು ವೇದಿಕೆಯ ಮಧ್ಯೆ ಬಂದು ಸುಮಾರು ನಾಲ್ಕು ನಿಮಿಷಗಳ ಕಾಲ ನೃತ್ಯ ಮಾಡಿದರು. ನೃತ್ಯ ಮಾಡಿದ ನಂತರ ತಮ್ಮ ಆಸನದತ್ತ ತೆರಳಿದ ಶಿವರಾಜ್‌ ಕುಮಾರ್‌ ಅವರನ್ನು ಎಸ್‌.ಎ.ಚಿನ್ನೇಗೌಡರು ಅಪ್ಪಿಕೊಂಡರು.

ಹೊರನಡೆದ ಸಭಿಕರು: ಉದ್ಘಾಟನಾ ಸಮಾರಂಭದ ವೇದಿಕೆಗೆ ಶಿವರಾಜ್‌ ಕುಮಾರ್‌ ಅವರು ಬಂದಾಗಿನಿಂದ ಸ್ವಾಗತಕಾರರು, ನಿರೂಪಕರು ಅವರ ಹೆಸರು ಹೇಳಿದಾಗಲೆಲ್ಲ ಶಿಳ್ಳೆ, ಚಪ್ಪಾಳೆ ಜೋರಾಗಿ ಕೇಳಿ ಬರುತ್ತಿತ್ತು. ಶಿವರಾಜ್‌ ಕುಮಾರ್‌ ಅವರು ವೇದಿಕೆಯಲ್ಲಿದ್ದಷ್ಟು ಸಮಯವು ಮೊಬೈಲ್‌ನಲ್ಲಿ ಅವರ ಚಿತ್ರ ಸೆರೆ ಹಿಡಿದ ಸಭಿಕರು, ಅವರು ಹೊರಟು ನಿಂತಾಗ ಅವರನ್ನು ಹತ್ತಿರದಿಂದ ಕಾಣಲು ಮುಗಿಬಿದ್ದರಲ್ಲದೆ, ಅವರ ಕಾರನ್ನು ಹಿಂಬಾಲಿಸುತ್ತಾ ಸಭಾಂಗಣದಿಂದ ಎದ್ದು ಹೊರ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next