ಅಳ್ನಾವರ: ಲಾಕ್‌ಡೌನ್ ಇದ್ದರೂ ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವುದನ್ನು ತಡೆಗಟ್ಟಲು ಸ್ಥಳಿಯ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ದಿನಸಿ ಮತ್ತು ಇತರೆ ಅಗತ್ಯ ವಸ್ತುಗಳನ್ನು ಮನೆಗಳಿಗೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಾಪಾರಸ್ಥರ ಸಭೆ ನಡೆಸಿ ಈ ನಿರ್ಣಯ ಕೈಕೊಂಡಿದ್ದಾರೆ ಜನರಿಗೆ ತೊಂದರೆ ಆಗಬಾರದೆಂದು ದಿನಸಿ ಅಂಗಡಿಗಳನ್ನು ನಿತ್ಯ ಬೆಳಗ್ಗೆ 11ಗಂಟೆಯವರೆಗೆ ತೆರೆದಿಡಲು ಅನುಮತಿ ನೀಡಲಾಗಿತ್ತು. ಇದನ್ನೇ ನೆಪವಾಗಿಸಿಕೊಂಡ ಜನರು ಗುಂಪು ಗುಂಪಾಗಿ ಸುತ್ತುವುದು, ದ್ವಿಚಕ್ರ ವಾಹನಗಳಲ್ಲಿ ಓಡಾಡುವುದು ಕಂಡು ಬಂತು. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರಲಿಲ್ಲ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪಟ್ಟಣದಲ್ಲಿರುವ ಎಲ್ಲಾ ವ್ಯಾಪಾರಸ್ಥರ ದೂರವಾಣಿ ಸಂಖ್ಯೆಗಳನ್ನು ಕರಪತ್ರದ ಮೂಲಕ ಪ್ರಚಾರ ಮಾಡಲಾಗಿದ್ದು, ಜನರು ತಮಗೆ ಸಮೀಪದ ಅಂಗಡಿಕಾರರಿಗೆ ಫೋನ್ ಮೂಲಕ ಆರ್ಡರ್ ಮಾಡಿ ವಸ್ತುಗಳನ್ನು ತರಿಸಿಕೊಳ್ಳಬಹುದಾಗಿದೆ. ಅಂಗಡಿಗಳ ಬಾಗಿಲು ತೆರೆದು ಸ್ಥಳದಲ್ಲೇ ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದ್ದು, ಇದಕ್ಕೆ ಆಸ್ಪದ ನೀಡದೆ ಎಲ್ಲರೂ ಸಹಕಾರ ನೀಡಬೇಕೆಂದು ತಹಶೀಲ್ದಾರ್ ಅಮರೇಶ ಪಮ್ಮಾರ ತಿಳಿಸಿದ್ದಾರೆ.
ಅಳ್ನಾವರ ಪಟ್ಟಣ ಒಂದು ಕಡೆ ಬೆಳಗಾವಿ ಇನ್ನೊಂದು ಕಡೆ ಉತ್ತರ ಕನ್ನಡ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿದ್ದು ಆ ಜಿಲ್ಲೆಗಳ ಜನರು ಅಳ್ನಾವರ ಪ್ರವೇಶಿಸುತ್ತಿದ್ದಾರೆ ಇದನ್ನು ತಡೆಯುವುದು ಅನಿವಾರ್ಯ ಎಂದು ಮನಗಂಡ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ ಹಾಲು ಮಾರಾಟಕ್ಕೂ ಸಮಯ ನಿಗದಿಪಡಿಸಿದ್ದು ಮನೆ ಮನೆಗೆ ತಲುಪಿಸಲು ಯಾವುದೆ ನಿರ್ಬಂಧ ವಿಧಿ ಸಿಲ್ಲ. ಅದೆ ರೀತಿ ಔಷಧ ಅಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ಲುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಔಷಧ ವ್ಯಾಪಾರಿಗಳಿಗೆ ಸೂಚಿಸಲಾಗಿದೆ. ನಾಳೆಯಿಂದ ಅನಗತ್ಯವಾಗಿ ಹೊರಗೆ ಓಡಾಡುವವರ ಮೇಲೆ ಕೇಸ್ ದಾಖಲಿಸುವುದಾಗಿ ತಿಳಿಸಿರುವ ಪಿಎಸ್‌ಐ ಕಣವಿ ಬೈಕ್ ಓಡಾಟಕ್ಕೂ ಬ್ರೇಕ್ ಹಾಕಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದೆಂದು ಹೇಳಿದ್ದಾರೆ.
ಪಪಂ ಮುಖ್ಯಾಧಿಕಾರಿ ವಾಯ್.ಜಿ. ಗದ್ದಿಗೌಡರ ಮಾತನಾಡಿ,ತರಕಾರಿ ವ್ಯಾಪಾರಸ್ಥರು ತಮಗೆ ವಹಿಸಿಕೊಟ್ಟ ಬಡಾವಣೆಗಳಲ್ಲೇ ಮಾರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಒಂದೇ ಸ್ಥಳದಲ್ಲಿ ಅಂಗಡಿ ಹಚ್ಚಿ ಮಾರಾಟ ಮಾಡುವಂತಿಲ್ಲವೆಂದು ತಿಳಿಸಿದರು. ಕಿರಾಣಿ ಮತ್ತು ತರಕಾರಿ ವ್ಯಾಪಾರಸ್ಥರು ಸಭೆಯಲ್ಲಿದ್ದರು.