ಕಾಪು: ನಾವು ಹಾದಿ ಬೀದಿಯಲ್ಲಿ ನಡೆಯುವಾಗ ರಸ್ತೆ ಬದಿಯಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳ ಕಳೇಬರವನ್ನು ಇನ್ಯಾರೋ ತೆಗೆಯುತ್ತಾರೆ ಅಥವಾ ವಿಲೇವಾರಿ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಅವರಿಗೆ ಮಾಹಿತಿ ನೀಡಿ ಅವರನ್ನು ಕಾಯುತ್ತೇವೆ. ಅದರ ಬದಲಾಗಿ ನಾವೇ ಖುದ್ದಾಗಿ ಅದನ್ನು ವಿಲೇವಾರಿ ಮಾಡಿ ಅವುಗಳ ಜೀವಕ್ಕೆ ಮೋಕ್ಷ ಕಲ್ಪಿಸಿದಲ್ಲಿ ಅದುವೇ ಶ್ರೇಷ್ಠ ಕಾರ್ಯವೆಂದೆನೆಸಿಕೊಳ್ಳುತ್ತದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಪೆಂಡೋಲಮ್ ಭವಿಷ್ಯವಾಣಿ ಶಾಸ್ತÅಜ್ಞ ಗುರೂಜಿ ಸಾಯಿ ಈಶ್ವರ್ ಅವರ ನೇತೃತ್ವದ ಶಂಕರಪುರ ಸಾಯಿ ಸಾಂತ್ವನ ಕೇಂದ್ರದ ವತಿಯಿಂದ ಜು. 9ರಿಂದ ಅನುಷ್ಠಾನಕ್ಕೆ ತರಲಾದ ವಿನೂತನ ಯೋಜನೆ ಪ್ರಾಣಿ ಪಕ್ಷಿಗಳ ಕ್ಷೇಮ – ಚಿಂತನ ವಾಹನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಸೃಷ್ಟಿಯ ಜಗತ್ತಿನಲ್ಲಿ ಬದುಕುವ ಯಾವುದೇ ಜೀವಿಯನ್ನು ಕೊಲ್ಲುವುದು ಕೂಡಾ ಅದು ಮಹಾಪಾಪವೇ ಆಗುತ್ತದೆ. ಅದನ್ನು ಅರ್ಥೈಸಿಕೊಳ್ಳುವ ಯಾರೂ ಕೂಡಾ ಉದ್ದೇಶಪೂರ್ವಕವಾಗಿ ಯಾವುದೇ ಜೀವಿಯ ಹತ್ಯೆಗೆ ಮನ ಮಾಡಲಾರರು.
ಆಕಸ್ಮಿಕವಾಗಿ ರಸ್ತೆ ಬದಿಯಲ್ಲಿ ಯಾವುದಾದರೂ ಜೀವ ಸತ್ತರೆ ಅದನ್ನು ಆರೈಕೆ ಮಾಡಲೆಂದು ಸಾಯಿ ಸಾಂತ್ವನ ಮಂದಿರ ಮುಂದಾಗಿರುವುದು ದೇಶದಲ್ಲೇ ಅತ್ಯಂತ ವಿಶಿಷ್ಟವಾದ ಕಾರ್ಯಕ್ರಮವಾಗಿದೆ ಎಂದರು. ಪೆಂಡೋಲಮ್ ಭವಿಷ್ಯವಾಣಿ ಶಾಸ್ತÅಜ್ಞ ಗುರೂಜಿ ಸಾಯಿ ಈಶ್ವರ್ ಯಾನೆ ರಜತ್ ಪ್ರವೀಣ್ ರಾಜ್ ಆಶೀರ್ವಚನ ನೀಡಿದರು. ವಿಶ್ವನಾಥ ಸುವರ್ಣ ಶಂಕರಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಕಟಪಾಡಿ ಗ್ರಾ. ಪಂ. ಅಧ್ಯಕ್ಷೆ ಜೂಲಿಯೆಟ್ ವೀರಾ ಡಿ. ಸೋಜಾ, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ| ಸರ್ವೋತ್ತಮ ಉಡುಪ, ಪಶುವೈದ್ಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಚಂದ್ರಕಾಂತ್, ಲೆಕ್ಕ ಪರಿಶೋಧಕ ಎ. ಎಸ್. ಸರಳಾಯ ಉಡುಪಿ, ಕಟಪಾಡಿ ಎಸ್. ವಿ. ಎಸ್. ಪ. ಪೂ. ಕಾಲೇಜಿನ ಸಂಚಾಲಕ ಮಹೇಶ್ ಶೆಣೈ, ವಾಹನದ ದಾನಿ ದಯಾನಂದ ಹೆಜಮಾಡಿ, ಬೆಂಗಳೂರು ಉದ್ಯಮಿ ದಯಾನಂದ ಪೂಜಾರಿ, ಗ್ರಾ. ಪಂ. ಸದಸ್ಯ ಅಶೋಕ್ ರಾವ್, ವಿಶ್ವಕರ್ಮ ಒಕ್ಕೂಟದ ಗೌರವಾಧ್ಯಕ್ಷ ಅಲೆವೂರು ಯೋಗೀಶ್ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾಜ ಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ದಯಾನಂದ ಹೆಜಮಾಡಿ, ದಯಾನಂದ ಪೂಜಾರಿ, ಹೇಮಾ ದಯಾನಂದ್ ಇವರನ್ನು ಸಮ್ಮಾನಿಸಲಾಯಿತು. ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಪ್ರಸ್ತಾವನೆಗೈದರು. ಮುಖ್ಯ ಶಿಕ್ಷಕ ಸುಧಾಕರ ಶೆಟ್ಟಿ ಕುಂಜಾರುಗಿರಿ ಸ್ವಾಗತಿಸಿ, ವಂದಿಸಿದರು. ರಾಜೇಶ್ ಆಚಾರ್ಯ ಬಿಳಿಯಾರು ಕಾರ್ಯಕ್ರಮ ನಿರೂಪಿಸಿದರು.