Advertisement

ಸೃಜನಶೀಲ ಸಾಹಿತ್ಯದಿಂದ ಶ್ರೇಷ್ಠ ಕಾವ್ಯ ಸೃಷಿ

09:41 PM Mar 22, 2021 | Team Udayavani |

ಬೀದರ: ಸೃಜನಶೀಲ ಸಾಹಿತ್ಯದಿಂದ ಶ್ರೇಷ್ಠ ಕಾವ್ಯ ಅರಳುತ್ತವೆ ಎಂದು ಜಿಲ್ಲಾ ಜಾನಪದ ಪರಿಷತ್‌ ಅಧ್ಯಕ್ಷ ಡಾ| ಜಗನ್ನಾಥ ಹೆಬ್ಟಾಳೆ ಅಭಿಪ್ರಾಯಪಟ್ಟರು. ನಗರದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ಮಂದಾರ ಕಲಾವಿದರ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ ವಿರಚಿತ “ಮಾಣಿಕ್ಯ ವಿಠಲ’ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಕಾವ್ಯ ರಚಿಸುವವರಲ್ಲಿ ಹೃದಯ ವೈಶಾಲ್ಯತೆ ಇದ್ದಲ್ಲಿ ಕವಿತೆಗಳು ಸುಂದರ ರೂಪ ಪಡೆಯುತ್ತದೆ. ದೇಶಪಾಂಡೆ ಅವರಲ್ಲಿ ವಿವೇಚನಾಶಕ್ತಿ, ಹಿಂದಿನ ಕೃತಿಗಳ ಅಭ್ಯಾಸ, ಹಳೆಯ ಕೃತಿಗಳ ಅನುಸಂಧಾನ ಒಂದಿಷ್ಟನ್ನು ಅಲ್ಲಲ್ಲಿ ತರುತ್ತಾರೆ. ಸದಾ ಪ್ರಯತ್ನಶೀಲತೆ ಇಂಥ ಗುಣಗಳು ಇರುವುದರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಪ್ರಾಧ್ಯಾಪಕ ಸುಜಯಂದ್ರ ಹಂದೆ ಮಾತನಾಡಿ, ಶಾಲೆಗಳು ಬುದ್ಧಿಜೀವಿಗಳನ್ನು ಹುಟ್ಟು ಹಾಕಿದರೆ, ಕಾವ್ಯ ರಚನೆಕಾರರು ಹೃದಯವಂತರನ್ನು ಅರಳಿಸುತ್ತಾರೆ. ಕಥೆ, ಕಾದಂಬರಿಗಳನ್ನು ಬಳಸಿ ಸಿನಿಮಾ ಮಾಡಬಹುದು. ಆದರೆ, ಕಾವ್ಯದಿಂದ ಅದು ಸಾಧ್ಯವಿಲ್ಲ.

ಕಾವ್ಯಗಳಿಗೆ ಸೀಮಿತ ಅರ್ಥವಿಲ್ಲ, ಅದು ವಿಶಾಲವಾಗಿರುತ್ತದೆ. ಮನುಷ್ಯ-ಮನುಷ್ಯಗಳ ನಡುವೆ ಸಂಬಂಧ ಗಟ್ಟಿಗೊಳಿಸಲು ಕಾವ್ಯ ಸಹಕಾರಿಯಾಗಿದೆ. ಕೃಷಿಕನನ್ನು ಹಾಗೂ ಓರ್ವ ಕವಿಯನ್ನು ಋಷಿ ಎನ್ನಬಹುದು. ಯೋಗದಿಂದ ಕಾವ್ಯ ಸುಂದರಗೊಳ್ಳುವುದರಲ್ಲಿ ಎರಡು ಮಾತಿಲ್ಲ ಎಂದರು. ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ಉತ್ತಮ ಪರಿಸರದಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿದಲ್ಲಿ ಪರಿಪೂರ್ಣ ಕಾವ್ಯ ರಚನೆಕಾರರು ಹುಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.

ಬೆಂಗಳೂರಿನ ಹಾ.ಮ. ಸತೀಶ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮಾಡದ ಕಾರ್ಯ ಇಂದು ಮಂದಾರ ಕಲಾವಿದ ವೇದಿಕೆ ಮಾಡುತ್ತಿರುವುದು ಗಮನಾರ್ಹ ಎಂದರು. ಶ್ರೀ ಬಸವಪ್ರಭು ಸ್ವಾಮೀಜಿ, ಪತ್ರಕರ್ತ ಚಂದ್ರಕಾಂತ ಮಸಾನಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ಮಕ್ಕಳ ತಜ್ಞ ಡಾ| ಸಿ. ಆನಂದರಾವ ಮಾತನಾಡಿದರು. ಎನ್‌.ಬಿ. ರೆಡ್ಡಿ ಗುರೂಜಿ ಸಾನ್ನಿಧ್ಯ ವಹಿಸಿದ್ದರು.

ಮೈಸೂರಿನ ಮನೋಹರ ದೇಶಪಾಂಡೆ, ಸಾಹಿತಿ ಸಂಜೀವಕುಮಾರ ಅತಿವಾಳೆ, ವಿಎಚ್‌ಪಿ ಅಧ್ಯಕ್ಷ ರಾಮಕೃಷ್ಣ ಸಾಳೆ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್‌, ಮಾಣಿಕರಾವ ಬಿರಾದಾರ, ಭಾರತಿ ವಸ್ತ್ರದ್‌ ಇನ್ನಿತರರು ವೇದಿಕೆಯಲ್ಲಿದ್ದರು. ಅರವಿಂದ ಕುಲಕರ್ಣಿ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು. ಸಂಗಮೇಶ ಜ್ಯಾಂತೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next