Advertisement

ಬಿಜೆಪಿ ಮಹಾ ವಿಜಯ; ಬಿಎಂಸಿ ಅತಂತ್ರ

03:50 AM Feb 24, 2017 | Team Udayavani |

ಮುಂಬಯಿ: ಮುಂದಿನ ವಿಧಾನಸಭೆ ಚುನಾವಣೆಯ ಸೆಮಿಫೈನಲ್‌ ಎಂದೇ ಕರೆಯಲಾಗಿದ್ದ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಂಬಯಿಯಲ್ಲಿ ಶಿವಸೇನೆ ಮುನ್ನಡೆ ಕಾಯ್ದು ಕೊಂಡರೆ, ಥಾಣೆಯನ್ನು ಉಳಿಸಿಕೊಂಡಿದೆ. ಆದರೆ ರಾಜ್ಯದ ಇತರೆಡೆಗಳಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿ, ವಿಜಯಪತಾಕೆ ಹಾರಿಸಿದೆ.

Advertisement

ಇನ್ನು ಬಿಜೆಪಿ ವರ್ಸಸ್‌ ಶಿವಸೇನೆ ಎಂದು ಪರಿಗಣಿಸಲಾಗಿದ್ದ ಬೃಹನ್‌ ಮುಂಬಯಿ ಮಹಾ
ನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯು ವಲ್ಲಿ ಎರಡೂ ಪಕ್ಷಗಳು ವಿಫ‌ಲವಾದ ಕಾರಣ, ಅತಂತ್ರ ಸ್ಥಿತಿ ನಿರ್ಮಾಣ ವಾಗಿದೆ. ಆದರೆ, ತಾನು ಮೈತ್ರಿ ಕಡಿದುಕೊಂಡ ಪರಿಣಾಮ ಬಿಜೆಪಿಗೆ ಭಾರೀ ನಷ್ಟ ಉಂಟಾಗ ಲಿದೆ ಎಂದು ಲೆಕ್ಕಾಚಾರ ಹಾಕಿದ್ದ ಶಿವಸೇನೆಗೆ ಈ ಫ‌ಲಿತಾಂಶ ದೊಡ್ಡ ಶಾಕ್‌ ನೀಡಿದೆ. ಬಹುಮತ ಪಡೆಯುವಲ್ಲಿ ಸೋತರೂ ಬಿಜೆಪಿಗೆ ಇದು ಅತ್ಯಂತ ಮಹತ್ವದ ಗೆಲುವು. ಏಕೆಂದರೆ, ಇದೇ ಮೊದಲ ಬಾರಿಗೆ ಶಿವಸೇನೆಗೆ ಹೆಗಲೆಣೆಯ ಪೈಪೋಟಿ ನೀಡಿ ರುವ ಬಿಜೆಪಿ ಆ ಪಕ್ಷಕ್ಕಿಂತ ಎರಡು ವಾರ್ಡ್‌ಗಳನ್ನಷ್ಟೇ ಕಡಿಮೆ ಪಡೆದು, 82 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 31 ಸೀಟುಗಳನ್ನಷ್ಟೇ ಗಳಿಸಿತ್ತು.

ಈ ಬಾರಿ 227 ವಾರ್ಡ್‌ಗಳ ಪೈಕಿ ಶಿವಸೇನೆ 84ರಲ್ಲಿ ಗೆದ್ದರೆ, ಬಿಜೆಪಿ 82 ವಾರ್ಡ್‌ಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸ್ಪಷ್ಟ ಬಹುಮತಕ್ಕೆ 114 ಸೀಟುಗಳು ಬೇಕಾಗಿದ್ದವು. ಆದರೆ, ಈ ಹಂತಕ್ಕೆ ತಲುಪಲು ಎರಡೂ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಇನ್ನು ಕಾಂಗ್ರೆಸ್‌, ಎನ್‌ಸಿಪಿ ಮತ್ತು ಎಮ್ಮೆನ್ನೆಸ್‌ ರಾಜ್ಯಾದ್ಯಂತ ಧೂಳೀಪಟವಾಗಿವೆ. ಪುಣೆಯಂತಹ ಭದ್ರಕೋಟೆಯನ್ನು ಉಳಿಸಿಕೊಳ್ಳಲೂ ಎನ್‌ಸಿಪಿಗೆ ಸಾಧ್ಯವಾಗಿಲ್ಲ. ಕಾಂಗ್ರೆಸ್‌ ತನ್ನ ತೆಕ್ಕೆಯಲ್ಲಿದ್ದ ಸೋಲಾಪುರ ಮತ್ತು ಅಮರಾವತಿಯನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. 2012ರ ಚುನಾವಣೆಯಲ್ಲಿ 52 ವಾರ್ಡ್‌ಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ 31ಕ್ಕೆ ತೃಪ್ತಿಪಟ್ಟುಕೊಂಡಿದೆ. ಎಂಎನ್‌ಎಸ್‌ ಮತ್ತು ಎನ್‌ಸಿಪಿ ಕ್ರಮವಾಗಿ 9 ಮತ್ತು 7 ಸೀಟುಗಳಲ್ಲಿ ಜಯ ಗಳಿಸಿವೆ. ಸಂಸದ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷವು ಚೊಚ್ಚಲ ಯತ್ನದಲ್ಲೇ 3 ಸೀಟುಗಳನ್ನು ತನ್ನದಾಗಿಸಿಕೊಂಡಿದೆ. ಎಸ್ಪಿ-6, ಅಖೀಲ ಭಾರತೀಯ ಸೇನಾ-1 ಮತ್ತು ಪಕ್ಷೇತರರು 4ರಲ್ಲಿ ಗೆದ್ದಿದ್ದಾರೆ.

ಮಹಾರಾಷ್ಟ್ರದಾದ್ಯಂತದ ಫ‌ಲಿತಾಂಶ ನೋಡಿದರೆ, ಬಿಜೆಪಿ-470, ಶಿವಸೇನೆ-215, ಕಾಂಗ್ರೆಸ್‌-99, ಎನ್‌ಸಿಪಿ-108, ಎಂಎನ್‌ಎಸ್‌-16 ಹಾಗೂ ಇತರರು-61 ಸೀಟುಗಳನ್ನು ಪಡೆದಿದ್ದಾರೆ. ಫೆ.16 ಮತ್ತು 21ರಂದು 10 ನಗರಪಾಲಿಕೆಗಳು, 25 ಜಿಲ್ಲಾ ಪರಿಷತ್‌, 283 ಪಂಚಾಯತ್‌ ಸಮಿತಿಗಳಿಗೆ ಚುನಾವಣೆ ನಡೆದಿತ್ತು.

ಸಂಜಯ್‌ ರಾಜೀನಾಮೆ: ಕಾಂಗ್ರೆಸ್‌ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ, ಮುಂಬೈ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಸಭಾ ಸದಸ್ಯ ಸಂಜಯ್‌ ನಿರುಪಮ್‌ ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆ, ತಮ್ಮ ಕ್ಷೇತ್ರ ಬೀಡ್‌ನ‌ಲ್ಲಿ ಬಿಜೆಪಿ ಉತ್ತಮ ಫ‌ಲಿತಾಂಶ ನೀಡುವಲ್ಲಿ ಸೋತ ಕಾರಣ ಸಚಿವೆ ಪಂಕಜಾ ಮುಂಡೆ ರಾಜೀನಾಮೆಗೆ ಮುಂದಾಗಿದ್ದಾರೆ. ಇದೇ ವೇಳೆ, ಬಿಜೆಪಿಯ ಟೀಕಾಕಾರರಿಗೆ ಫ‌ಲಿತಾಂಶ ಸರಿಯಾದ ಉತ್ತರ ಕೊಟ್ಟಿದೆ ಎಂದು ಸಿಎಂ ಫ‌ಡ್ನವಿಸ್‌ ಹೇಳಿದರೆ, ಬಿಜೆಪಿ ಜತೆಗೆ ಶಿವಸೇನೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಶಿವಸೇನೆಯ ವಕ್ತಾರ ಅನಿಲ್‌ ದೇಸಾಯಿ ಹೇಳಿದ್ದಾರೆ..

Advertisement

ಶಿವಸೇನೆಗೆ ಜಯ: ದೇಶದ ಅತ್ಯಂತ ಶ್ರೀಮಂತ ಪಾಲಿಕೆಯಾದ ಬಿಎಂಸಿ ಚುನಾವಣೆಯಲ್ಲಿ 25 ವರ್ಷಗಳಲ್ಲೇ ದಾಖಲೆಯ ಮತದಾನ ನಡೆದಿತ್ತು. ಮುಂಬೈಗರ ಈ ದಾಖಲೆಯ ಮತದಾನವು ಶಿವಸೇನೆಗೆ ವರವಾಗಿ ಪರಿಣಮಿಸಿದ್ದು, ಮುಂಬೈನ ರಾಜನಾಗಿ ಶಿವಸೇನೆ ಹೊರಹೊಮ್ಮಿದೆ. ಕಳೆದ 20 ವರ್ಷಗಳಿಂದಲೂ ಬಿಎಂಸಿಯಲ್ಲಿ ಸೇನೆಯದ್ದೇ ಪಾರುಪತ್ಯವಿತ್ತು. ಬಿಜೆಪಿಯು ಕಿರಿಯ ಪಾಲುದಾರ ಪಕ್ಷವಾಗಿತ್ತು. ವಿಶೇಷವೆಂದರೆ, ಮಹಾರಾಷ್ಟ್ರದ ಇತರೆಲ್ಲ ಭಾಗಗಳಲ್ಲೂ ಬಿಜೆಪಿ ಗೆಲುವಿನ ನಗೆ ಬೀರಿರುವುದು, ಸಿಎಂ ದೇವೇಂದ್ರ ಫ‌ಡ್ನವಿಸ್‌ ಅವರಿಗೆ ವಿಶ್ವಾಸ ತಂದಿದೆ. ಮಂಗಳವಾರ ಚುನಾವಣೆ ಎದುರಿಸಿದ 10 ನಗರಪಾಲಿಕೆಗಳ ಪೈಕಿ 6ರಲ್ಲಿ ಅಂದರೆ ಪುಣೆ, ನಾಸಿಕ್‌, ಉಲ್ಲಾಸ್‌ನಗರ್‌, ಅಕೋಲಾ, ನಾಗ್ಪುರ ಮತ್ತು ಅಮರಾವತಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರಕ್ಕೇರಿದೆ.

ಮುಂದೇನಾಗಬಹುದು?
ಬಿಜೆಪಿ ಜತೆಗಿನ 2 ದಶಕಗಳ ಮೈತ್ರಿಯನ್ನು ಕಡಿದುಕೊಂಡು ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದ ಶಿವಸೇನೆಗೆ ಈಗ ಗೊಂದಲ ಆರಂಭವಾಗಿದೆ. ಶಿವಸೇನೆಯು ಬಿಜೆಪಿಯೊಂದಿಗೆ ಸೇರಿ ಆಡಳಿತ ನಡೆಸಲಿದೆಯೋ ಎಂಬುದು ಗೊತ್ತಾಗಿಲ್ಲ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನೆ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುವ ಸಾಧ್ಯತೆಯೂ ಇದೆ.

 27ರಂದು ಸವರೈನ್‌ ಗೋಲ್ಡ್‌ ಬಾಂಡ್‌ ಬಿಡುಗಡೆ
ನವದೆಹಲಿ:  ಸರಕಾರವು ಇದೇ 27ರಂದು ಸವರೈನ್‌ ಗೋಲ್ಡ್‌ ಬಾಂಡ್‌ಗಳನ್ನು ಬಿಡುಗಡೆ ಮಾಡಲಿದ್ದು, ಸಾರ್ವಜನಿಕರಿಗೆ 500 ಗ್ರಾಂಗಳಷ್ಟು ಚಿನ್ನದ ಮೌಲ್ಯದ ಭದ್ರತಾ ಪತ್ರವನ್ನು ಖರೀದಿಸುವ ಅವಕಾಶವಿದೆ. ಇದು ಪ್ರಸ್ತುತ ವಿತ್ತೀಯ ವರ್ಷದ ಕೊನೆಯ ಚಿನ್ನದ ಬಾಂಡ್‌ ಬಿಡುಗಡೆಯಾಗಿರಲಿದೆ ಎಂದು ಸರಕಾರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next