Advertisement

ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಹೆತ್ತವರದೇ ಮಹತ್ತರ ಪಾತ್ರ

04:10 PM Jul 12, 2021 | Team Udayavani |

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ ಮಹತ್ವದ್ದಾಗಿದೆ. ಶಾಲಾ ಮಕ್ಕಳ ಜೀವನ ಶೈಲಿ ರೂಪಿಸುವಲ್ಲಿ ಗುರುಗಳ, ಹಿರಿಯರ ಮತ್ತು ಗೆಳೆಯರ ಪಾತ್ರ ಕೂಡ ಅತ್ಯಂತ ಪ್ರಾಮುಖ್ಯವಾದುದಾಗಿದೆ. ಆದರೆ ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಮಕ್ಕಳ ಎಲ್ಲ ಜವಾಬ್ದಾರಿಯು ಈಗ ಹೆತ್ತವರ ಮೇಲೆ ಬಿದ್ದಿದೆ. ಹಾಗಾಗಿ ಹೆತ್ತವರು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕಾಗಿದೆ.

Advertisement

ಉತ್ತಮ ಪೌಷ್ಟಿಕಾಂಶ ಹೊಂದಿರುವ ತಾಜಾ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಜಂಕ್‌ಫ‌ುಡ್‌ ಮತ್ತು ಸಂಸ್ಕರಿಸಿದ ಆಹಾರದಿಂದ ಮಕ್ಕಳು ದೂರವಿರುವಂತೆ ನೋಡಿಕೊಳ್ಳಬೇಕು. ಇನ್ನು ತಂಪು ಪಾನೀಯ, ಐಸ್‌ಕ್ರೀಂ, ಚಾಕಲೇಟ್‌ ಇಂಥವುಗಳನ್ನು ಮಕ್ಕಳಿಗೆ ಕೊಡಬಾರದು. ಇದರಿಂದ ಶೀತ, ಕೆಮ್ಮು, ಕಫ‌ದಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಇಂತಹ ಆಹಾರಗಳಿಗಾಗಿ ಮಕ್ಕಳು ಹಠ ಹಿಡಿದರೂ ಅವರಿಗೆ ತಿಳಿ ಹೇಳಿ, ಮನವೊಲಿಸಿ ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ನೀಡಬೇಕು.

ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಇತ್ತ ಮನೆಮಂದಿ ಹೆಚ್ಚಿನ ಆಸ್ಥೆ ವಹಿಸುವುದು ಅಗತ್ಯ. ಸ್ವತಃ ಹೆತ್ತವರು ಮತ್ತು ಮನೆಯಲ್ಲಿರುವ ಹಿರಿಯರು ಆಗಾಗ ಕೈ ತೊಳೆದುಕೊಳ್ಳುವ ಮೂಲಕ ಸ್ವತ್ಛತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಕೈಗಳಿಂದ ಪದೇಪದೆ ಮುಖವನ್ನು ಮುಟ್ಟಬಾರದು. ಈ ಅಭ್ಯಾಸಗಳನ್ನು ಮಕ್ಕಳಿಗೂ ಕಲಿಸಬೇಕು. ಇನ್ನು ಹೆತ್ತವರು ಅನಗತ್ಯವಾಗಿ ಹೊರಗೆ ತಿರುಗಾಡುವುದನ್ನು ಮತ್ತು ಸಭೆ, ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಬೇಕು.

ಹೊರಗೆ ಹೋಗುವ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಬೇಕು. ಮನೆಗೆ ಮರಳಿದ ಬಳಿಕ ಸ್ನಾನ ಮಾಡಿದರೆ ಉತ್ತಮ. ಬಟ್ಟೆಯ ಮಾಸ್ಕ್ ಧರಿಸಿದರೆ ಪ್ರತೀದಿನ ಅದನ್ನು ಒಗೆದು ಬಿಸಿಲಿನಲ್ಲಿ ಒಣಗಿಸಬೇಕು ಅಥವಾ ಒಗೆದು ಇಸ್ತ್ರಿ ಮಾಡಬೇಕು. ಸರ್ಜಿಕಲ್‌ ಮಾಸ್ಕ್ ಆದರೆ ಪ್ರತೀದಿನ ಬದಲಾಯಿಸಬೇಕು. ಹೆತ್ತವರು ಸಾಧ್ಯವಾದಷ್ಟು ಬೇಗ ಕೊರೊನಾ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದರಿಂದ ಮಕ್ಕಳಿಗೆ, ಮನೆಮಂದಿಗೆ ಕೋವಿಡ್‌-19 ಕಾಯಿಲೆ ಬರುವ ಸಂಭವ ಕಡಿಮೆಯಾಗುತ್ತದೆ. ಮಕ್ಕಳಿಗೆ ನಿಯಮಿತವಾಗಿ ನೀಡುವ ಚುಚ್ಚುಮದ್ದುಗಳನ್ನು ಅವಶ್ಯವಾಗಿ ಕೊಡಿಸಬೇಕು. ಇನ್ನು ಮನೆಮಂದಿ ಯಾವುದೇ ತೆರನಾದ ರೋಗಲಕ್ಷಣಗಳನ್ನು ಹೊಂದಿದ್ದಲ್ಲಿ ಸಾಧ್ಯವಾದಷ್ಟು ಮಕ್ಕಳಿಂದ ದೂರವಿರಬೇಕು. ಅಷ್ಟು ಮಾತ್ರವಲ್ಲದೆ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧ ಅಗತ್ಯಬಿದ್ದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಇವೆಲ್ಲವೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ಕ್ರಮಗಳಾಗಿವೆ.

Advertisement

ಮಕ್ಕಳ ಆರೋಗ್ಯದಲ್ಲಿ ಕೊಂಚ ಏರುಪೇರಾದರೂ ತುರ್ತು ಲಕ್ಷ್ಯ ಹರಿಸುವುದು ಸೂಕ್ತ. ಇವೆಲ್ಲ ಸಾಮಾನ್ಯ ಎಂಬ ಅಸಡ್ಡೆ ಸಲ್ಲದು. ಹಾಗೆಂದು ಭಯ ಅಥವಾ ಗಾಬರಿಗೊಳಗಾಗುವ ಅಗತ್ಯವಿಲ್ಲ. ವೈದ್ಯರ ಸಲಹೆ ಪಡೆದು ಮಕ್ಕಳಿಗೆ ಚಿಕಿತ್ಸೆ ಕೊಡಿಸಬೇಕು. ಅಷ್ಟು ಮಾತ್ರವಲ್ಲದೆ ಇಂತಹ ಸಂದರ್ಭಗಳಲ್ಲಿ ಒಂದಿಷ್ಟು ಮುಂಜಾಗ್ರತೆ ವಹಿಸಬೇಕು. ಈಗಿನ ಸಂದರ್ಭದಲ್ಲಿ ಮಕ್ಕಳಿಗೆ ತಮ್ಮ ಗೆಳೆಯರೊಂದಿಗೆ ಬೆರೆಯಲು ಮತ್ತು ಆಡಲು ಸಾಧ್ಯ ಆಗದಿರುವುದರಿಂದ ಆ ಪಾತ್ರವನ್ನೂ ಹೆತ್ತವರೇ ನಿರ್ವಹಿಸಬೇಕಾಗುತ್ತದೆ.

ಪ್ರೀತಿಯಿಂದ ಅವರ ಎಲ್ಲ ಪ್ರಶ್ನೆಗಳಿಗೆ ಮತ್ತು ಸಂಶಯಗಳಿಗೆ ಉತ್ತರಿಸ ಬೇಕಾಗುತ್ತದೆ. ಮಕ್ಕಳಿಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಹೇಗೆ ಎಂಬ ಬಗ್ಗೆ ತಿಳಿಹೇಳಲು ಈ ಸಮಯ ಅತ್ಯಂತ ಸೂಕ್ತ. ಏಕೆಂದರೆ ಅತೀ ಪ್ರೀತಿಯಿಂದ ಮುದ್ದು ಮಾಡಿ ಬೆಳೆಸಿದ ಮಕ್ಕಳಿಗೆ ಸೋಲನ್ನು ಸ್ವೀಕರಿಸಲು ಕಷ್ಟಸಾಧ್ಯವಾಗುವುದು ಮಾತ್ರವಲ್ಲದೆ ಇದರಿಂದ ಅವರಿಗೆ ಸಮಾಜದಲ್ಲಿ ಬೆರೆಯಲು ಕೀಳರಿಮೆ ಉಂಟಾಗಿ ಖನ್ನತೆಗೊಳಗಾಗುವ ಅಪಾಯವೂ ಇದೆ. ಇದರ ಜತೆಯಲ್ಲಿ ಮಕ್ಕಳ ಶೈಕ್ಷಣಿಕ ಮತ್ತು ಕಲಿಕಾಭ್ಯಾಸ ಸ್ಥಗಿತಗೊಳ್ಳದಂತೆ ಎಚ್ಚರ ವಹಿಸುವ ಜವಾಬ್ದಾರಿಯೂ ಹೆತ್ತವರ ಮೇಲಿದೆ. ಶಾಲೆಗಳ ಆರಂಭ, ಆನ್‌ಲೈನ್‌ ತರಗತಿಗಳು, ಸಂವೇದ ತರಗತಿ ಮತ್ತಿತರ ವಿಷಯಗಳ ಬಗೆಗೆ ಶಾಲಾ ಶಿಕ್ಷಕರಿಂದ ಮಾಹಿತಿಯನ್ನು ಪಡೆದುಕೊಂಡು ಮಕ್ಕಳು ಇವೆಲ್ಲದರ ಪ್ರಯೋಜನ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಇದರಿಂದ ಮಕ್ಕಳು ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಕಳೆದ ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ದೂರವುಳಿದಿರುವುದರಿಂದ ಅವರನ್ನು ಒಂಟಿತನ ಕಾಡದಂತೆ ಮತ್ತು ಅವರಲ್ಲಿ ನಕಾರಾತ್ಮಕ ಚಿಂತನೆಗಳು ಮೂಡದಂತೆ ಹೆತ್ತವರು ಅವರೊಂದಿಗೆ ಸ್ನೇಹಿತರಂತೆ ಇದ್ದು ಧೈರ್ಯ ತುಂಬಬೇಕು. ಇಲ್ಲದಿದ್ದರೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡು ಕೆಟ್ಟ ವಿಷಯಗಳನ್ನು ಕೇಳುವುದು, ನೋಡುವುದು ಅಥವಾ ಕೆಟ್ಟವರ ಸಾಂಗತ್ಯದಿಂದ
ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇದೆ. ಆನ್‌ ಲೈನ್‌ ತರಗತಿಗಳ ಸಂದರ್ಭದಲ್ಲಿ ಮಾತ್ರವೇ ಮಕ್ಕಳ ಕೈಗೆ ಮೊಬೈಲ್‌ ನೀಡುವುದು ಸೂಕ್ತ. ಈ ಸಂದರ್ಭದಲ್ಲಿಯೂ ಹೆತ್ತವರು ಮಕ್ಕಳ ಜತೆಗಿದ್ದರೆ ಒಳಿತು. ಇಲ್ಲವಾದಲ್ಲಿ ಮಕ್ಕಳು ಮೊಬೈಲ್‌ ಗೀಳು ಬೆಳೆಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಹೆತ್ತವರು ಕಟ್ಟುನಿಟ್ಟಿನ ನಿಗಾ ಇರಿಸಬೇಕಿದೆ.

ಸದ್ಯ ಮಕ್ಕಳು ಮನೆಯಲ್ಲೇ ಇರುವ ಕಾರಣ ಅವರ ಸಾಮರ್ಥ್ಯಕ್ಕೆ ತಕ್ಕ ಮನೆಗೆಲಸವನ್ನು ಮಾಡಲು ಹೇಳಬೇಕು. ಹೊರಗೆ ಆಡಲು ಹೋಗದೆ ಇರುವ ಕಾರಣ ಯೋಗ, ವ್ಯಾಯಾಮ ಮತ್ತು ಪ್ರಾಣಾಯಾಮ ಮುಂತಾದ ದೈಹಿಕ ಕಸರತ್ತುಗಳನ್ನು ಮಾಡಿಸಬೇಕು. ಇದರಿಂದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಲು ಸಾಧ್ಯ. ಒಟ್ಟಿನಲ್ಲಿ ಪ್ರತಿಯೊಂದೂ ವಿಷಯದಲ್ಲಿಯೂ ಹೆತ್ತವರು ಮಕ್ಕಳಿಗೆ ಆದರ್ಶಪ್ರಾಯರಾಗಿದ್ದರೆ ಮಕ್ಕಳೂ ಈ ವಿಷಯಗಳನ್ನು ಅರಿತುಕೊಂಡು ಅವುಗಳನ್ನು ತಾವೂ ಚಾಚೂತಪ್ಪದೇ ಪಾಲಿಸುತ್ತಾರೆ.

ಡಾ| ವೇಣುಗೋಪಾಲ್‌ ಯು.
ಮಕ್ಕಳ ತಜ್ಞರು, ಜಿಲ್ಲಾಸ್ಪತ್ರೆ, ಉಡುಪಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next